ರಾಜ್ಯಕ್ಕೆ ಅನ್ಯಾಯವೆಸಗಿ ಯೋಗ ಮಾಡಲು ಬಂದ ಮೋದಿ- ಸಿದ್ದರಾಮಯ್ಯ ಗುಡುಗು
ಬೆಂಗಳೂರು, ಜೂನ್ 20: ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಎರಡು ದಿನ ಆಗಮಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯನ್ನು ನಡೆಸಿ ನರೇಂದ್ರ ಮೋದಿ ಮತ್ತು ಬಿಜೆಪಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ದ ಹರಿಹಾಯ್ದಿದ್ದಾರೆ.
2019 ಹಾಗೂ ನಂತರದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಭಾರಿ ಪ್ರಮಾಣದ ಪ್ರವಾಹ ಬಂತು, ಆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಜನರಿಗೆ ಸಾಂತ್ವನ ಹೇಳಿಲ್ಲ, ವಿಶೇಷ ಅನುದಾನ ನೀಡುವ ಕೆಲಸ ಮಾಡಿಲ್ಲ. ಇದರ ಜೊತೆಗೆ ರಾಜ್ಯಕ್ಕೆ ಯಾವೆಲ್ಲಾ ಅನ್ಯಾಯ ಆಗಿದೆ, ಜನದ್ರೋಹ ಆಗಿದೆ ಎಂದು ತಮಗೆಲ್ಲ ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮೈಸೂರು ಬ್ಯಾಂಕ್ ಸ್ಥಾಪನೆ ಮಾಡಿದ್ದು 1913ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು. ಇಂದು ಆ ಹೆಸರನ್ನೇ ಮೋದಿ ಅವರು ಅಳಿಸಿ ಹಾಕಿದ್ದಾರೆ. ಕರಾವಳಿಯಲ್ಲಿ 1906 ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ಆರಂಭವಾಯಿತು. ಹಾಜಿ ಅಬ್ದುಲ್ಲ ಎಂಬುವವರು ಸ್ಥಾಪನೆ ಮಾಡಿದ್ದು, ಸಿಂಡಿಕೇಟ್ ಬ್ಯಾಂಕ್ ಟಿ.ಎಂ.ಎ ಪೈ ಅವರಿಂದ ಸ್ಥಾಪನೆಯಾಗಿದ್ದು, ವಿಜಯಾ ಬ್ಯಾಂಕ್ ನಮ್ಮ ರಾಜ್ಯದ್ದು.
ಈ ಬ್ಯಾಂಕುಗಳು ಈಗ ಇದೆಯಾ?
ಈ 4 ಬ್ಯಾಂಕುಗಳನ್ನು ಬೇರೆ ಬ್ಯಾಂಕುಗಳ ಜೊತೆ ವಿಲೀನ ಮಾಡಿದ್ದು ಯಾರು? ಈ ಬ್ಯಾಂಕುಗಳ ಒಟ್ಟು ಆಸ್ತಿ ರೂ. 317 ಲಕ್ಷ ಕೋಟಿ ಇತ್ತು. 75,000 ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿತ್ತು. ಈ 4 ಬ್ಯಾಂಕುಗಳು ಕನ್ನಡಿಗರಿಗೆ ಉದ್ಯೋಗ ನೀಡುತ್ತಿದ್ದವು. ಇವು ಬೇರೆ ಬ್ಯಾಂಕುಗಳೊಂದಿಗೆ ವಿಲೀನವಾದ ನಂತರ ಇವುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿದೆಯಾ? ಇದು ಕನ್ನಡಿಗರಿಗೆ ಮಾಡಿದ ಮೋಸವಲ್ಲವೇ? ಬೇರೆ ಬ್ಯಾಂಕುಗಳು ದಿವಾಳಿಯಾಗಿವೆ ಎಂದು ವಿಲೀನ ಮಾಡಿದ್ದರಿಂದ ಕನ್ನಡಿಗರಿಗೆ ಕೆಲಸ ಸಿಗದಂತಾಗಿದೆ. ಇದು ನಮ್ಮ ರಾಜ್ಯಕ್ಕೆ ಮಾಡಿರುವ ದೊಡ್ಡ ಅವಮಾನ.

ಇದಕ್ಕೆ ಕಾರಣ ನರೇಂದ್ರ ಮೋದಿ ಅವರಲ್ಲವೇ?
ಕೊರೊನಾ ರೋಗ ಬಂದಾಗ ಆಮ್ಲಜನಕ ಕೊಡಲಿಲ್ಲ. ಆ ನಂತರ ಕರ್ನಾಟಕ ಹೈಕೋರ್ಟ್ ನವರು ರಾಜ್ಯಕ್ಕೆ ಆಮ್ಲಜನಕ ನೀಡುವಂತೆ ಆದೇಶ ಮಾಡಿದ ಮೇಲೆ ಹೈಕೋರ್ಟ್ ಹೇಳಿದಷ್ಟು ಆಮ್ಲಜನಕ ಪೂರೈಕೆ ಮಾಡಲು ಆಗಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತು. ಆಮ್ಲಜನಕ ಸಿಗದೆ ರಾಜ್ಯದಲ್ಲಿ ಬಹಳ ಮಂದಿ ಸತ್ತು ಹೋದರು. ಇದಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತ ಒಂದು ಉದಾಹರಣೆ. ಕೇಂದ್ರ ಸಚಿವರು ಸಂಸತ್ತಿಗೆ ಉತ್ತರ ನೀಡುವಾಗ ಆಮ್ಲಜನಕ ಸಿಗದೆ ದೇಶದಲ್ಲಿ ಒಬ್ಬರು ಸತ್ತಿಲ್ಲ ಎಂದು ಸುಳ್ಳು ಹೇಳಿದರು. ಚಾಮರಾಜನಗರ ಆಸ್ಪತ್ರೆಯಲ್ಲೇ 36 ಜನ ಸತ್ತಿದ್ದಾರೆ. ಇದಕ್ಕೆ ಕಾರಣ ನರೇಂದ್ರ ಮೋದಿ ಅವರಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜ್ಯಕ್ಕೆ ಕೊಡುತ್ತಿರುವ ಪಾಲು ಕುಂಠಿತ
ಮೋದಿ ಅವರು ಪ್ರಧಾನಿಯಾದ ಮೇಲೆ ತೆರಿಗೆಯಲ್ಲಿ ನಮ್ಮ ಪಾಲು ಕಡಿಮೆಯಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಕರ್ನಾಟಕವೊಂದರಿಂದಲೇ ಆದಾಯ ತೆರಿಗೆ, ಕಾರ್ಪೋರೇಟ್ ತೆರಿಗೆ, ಅಬಕಾರಿ ಸುಂಕ, ಜಿಎಸ್‌ಟಿ ಸೇರಿದಂತೆ ವಿವಿಧ ರೂಪದ ತೆರಿಗೆಗಳಲ್ಲಿ ಸಂಗ್ರಹವಾಗಿರೋದು 19 ಲಕ್ಷ ಕೋಟಿ ರೂಪಾಯಿ. ಇದರಲ್ಲಿ ಶೇ.42ರಷ್ಟನ್ನು ರಾಜ್ಯಕ್ಕೆ ಕೊಟ್ಟಿದ್ದರೆ 8 ಲಕ್ಷ ಕೋಟಿ ರೂ. ಹಂಚಿಕೆ ಆಗಬೇಕಿತ್ತು. ಇದೀಗ 2.14 ಲಕ್ಷ ಕೋಟಿ ಮಾತ್ರ ಕೊಟ್ಟಿದ್ದಾರೆ. ಇನ್ನೂ 11.ಲಕ್ಷ ಕೋಟಿ ಉಳಿದಿದ್ದು. ಒಂದು ಸಾವಿರ ಕೋಟಿ ಬಿಡುಗಡೆ ಮಾಡಿ ಅದನ್ನೇ ಜಾಹಿರಾತಿನಲ್ಲಿ ಮೋದಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ನಿರ್ಮಾಲ ಸೀತಾರಾಮನ್ ತಿರಸ್ಕಾರ ಮಾಡಿದ್ದರು
ಕೇಂದ್ರದ ಹಣಕಾಸು ಸಚಿವರು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು. 14ನೇ ಹಣಕಾಸು ಆಯೋಗದಿಂದ 15 ನೇ ಹಣಕಾಸು ಆಯೋಗದ ನಡುವೆ 1.07% ನಮ್ಮ ಪಾಲು ಕಡಿಮೆಯಾಯಿತು. ಇದು ಆದದ್ದು ನರೇಂದ್ರ ಮೋದಿ ಅವರ ಕಾಲದಲ್ಲಿ. ಹಾಗಾಗಿ 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ ರೂ. 5,495 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಶಿಫಾರಸ್ಸು ಮಾಡಿತ್ತು. ಆದರೆ ನಿರ್ಮಾಲ ಸೀತಾರಾಮನ್ ಅವರು ಇದನ್ನು ತಿರಸ್ಕಾರ ಮಾಡಿದ್ದರಿಂದ ನಮ್ಮ ರಾಜ್ಯಕ್ಕೆ ಸಿಗಲಿಲ್ಲ. ಇದಕ್ಕೆ ಯಾರು ಕಾರಣ? ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತ ಕಿಡಿಕಾರಿದ್ದಾರೆ.

ರಾಜ್ಯದ 40% ಸರ್ಕಾರದ ಬಗ್ಗೆ ಉತ್ತರಿಸಬೇಕು
ಇಷ್ಟೆಲ್ಲ ಅನ್ಯಾಯ ಮಾಡಿ ಈಗ ಮೈಸೂರಿಗೆ ಬಂದು ಯೋಗ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಗುತ್ತಿಗೆ ಕೆಲಸಗಳಲ್ಲಿ 40% ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದಿದ್ರು, ಅದಕ್ಕೆ ಮೋದಿ ಅವರು ಏನು ಕ್ರಮ ತೆಗೆದುಕೊಂಡಿದ್ದಾರೆ? ಈಗ ಮೋದಿ ಅವರು ಕರ್ನಾಟಕದ ಜನರಿಗೆ ಉತ್ತರ ಹೇಳಬೇಕು. ಪತ್ರ ಬರೆದಿದ್ದು 7/6/2021 ರಲ್ಲಿ, ಇದಾಗಿ ಒಂದು ವರ್ಷ ಆಗಿದೆ. ನಾನು ಚೌಕಿದಾರ್, ನಾ ಖಾವೂಂಗಾ, ನಾ ಖಾನೆದೂಂಗ ಎನ್ನುವ ಮೋದಿ ಅವರು ಯಾಕೆ ಈ ವರೆಗೆ ಕ್ರಮ ಕೈಗೊಂಡಿಲ್ಲ? ಇದಕ್ಕೆಲ್ಲ ರಾಜ್ಯದ ಜನರಿಗೆ ಉತ್ತರ ಕೊಡಬೇಕೋ ಬೇಡವೋ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೋದಿ ಪರವಾನಗಿ ಕೊಟ್ಟವರಂತೆ ಸುಮ್ಮನಿದ್ರೆ ಹೇಗೆ?
ಸಬ್ ಅರ್ಬನ್ ರೈಲು ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಅನಂತ ಕುಮಾರ್ ಅವರು ಕೇಂದ್ರ ಸಚಿವರಾಗಿದ್ದರು, ಅಂದಿನಿಂದಲೂ ಹೇಳಿಕೊಂಡು ಬರ್ತಿದ್ದಾರೆ. ಆದರೆ ಕೆಲಸ ಆರಂಭ ಆಗಿಲ್ಲ, ಈಗ ಮಾಡ್ತಿದ್ದೀವಿ ಎಂದು ಹೇಳ್ತಿದ್ದಾರೆ. ಮೋದಿ ಅವರಿಂದ ಕರ್ನಾಟಕದ ಜನರಿಗೆ ಅನ್ಯಾಯ, ಅಗೌರವ ಆಗಿದೆ. ರಾಜ್ಯದಲ್ಲಿ ಬಿಜೆಪಿಯ ಸರ್ಕಾರ ಲೂಟಿ ಮಾಡುತ್ತಿದೆ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇದಕ್ಕೆಲ್ಲ ಮೋದಿ ಅವರು ಪರವಾನಗಿ ಕೊಟ್ಟವರಂತೆ ಸುಮ್ಮನಿದ್ರೆ ಹೇಗೆ? ಉತ್ತರ ಕೊಡಬೇಕಲ್ವಾ? ಎಂದು ಸಿದ್ದರಾಮಯ್ಯ ಮೋದಿಗೆ ಪ್ರಶ್ನೆಯ ಸುರಿಮಳೆಗೈದಿದ್ದಾರೆ.
ಪ್ರಧಾನಿಗಳು ನಮ್ಮ ರಾಜ್ಯಕ್ಕೆ ಬರಬಾರದು ಎಂದು ನಾನು ಹೇಳಲ್ಲ, ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದಷ್ಟೇ ನಾನು ಕೇಳುತ್ತಿರೋದು. ಆಡಳಿತ ಪಕ್ಷವನ್ನು ಪ್ರಶ್ನಿಸೋದು ನಮ್ಮ ಕರ್ತವ್ಯ. ಉತ್ತರ ಕೋಡೋದು ಬಿಡೋದು ಅವರಿಗೆ ಬಿಟ್ಟಿದ್ದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications