ಬಿಜೆಪಿ ಅಧಿಕಾರಕ್ಕೆ ಬರೋಕೆ ಸಿದ್ಧರಾಮಯ್ಯ ಕಾರಣ: ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು.?
ಪ್ರಧಾನಿ ಮೋದಿ, ಸಚಿವ ಅಮಿತ್ ಶಾ ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಬಿಜೆಪಿ ಅಧಿಕಾರಕ್ಕೆ ಬರೋಕೆ ಸಾಧ್ಯವಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಹುಬ್ಬಳ್ಳಿ,ಫೆಬ್ರವರಿ13: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋಕೆ ಸಿದ್ಧರಾಮಯ್ಯ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಈ ಕುರಿತು ಸೋಮವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿಯೇ ಸರ್ಕಾರದ ಪತನದ ಬಗ್ಗೆ ಸಿದ್ದರಾಮಯ್ಯ ಮಾತನ್ನಾಡಿದ್ದರು. ಬಿಜೆಪಿಯ ಅಕ್ರಮಗಳನ್ನು ಹೊರ ತಂದಿದ್ದೆ ನಾನು ವಿನಹ ಸಿದ್ಧರಾಮಯ್ಯ ಅಲ್ಲ ಎಂದದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
ಕುರ್ಚಿಗಾಗಿ ಕುತಂತ್ರದ ರಾಜಕಾರಣ ಮಾಡಿದರು. ಬಿಜೆಪಿಯವರು ನನಗೆ ಸಿಎಂ ಸ್ಥಾನ ಕೊಡೋಕೆ ರೆಡಿಯಾಗಿದ್ದರು. ಸಿದ್ಧರಾಮಯ್ಯಗೆ ನಾಚಿಕೆಯಾಗಬೇಕು. ಕಾಂಗ್ರೆಸ್ ನಿಂದ ಇನ್ನು ಹತ್ತು ವರ್ಷಗಳಾದರೂ ಬಿಜೆಪಿಯನ್ನು ತೆಗೆಯೋಕೆ ಆಗಲ್ಲ. ಜೆಡಿಎಸ್ ನಿಂದ ಮಾತ್ರ ಅದು ಸಾಧ್ಯ ಎಂದು ಹೇಳಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ ಕುರಿತು ಮಾತನಾಡಿ, ಏರ್ ಶೋ ಬಡತನ ಓಡಿಸೋ ಕಾರ್ಯಕ್ರಮವಾ..? ಇದು 14ನೇ ಏರ್ ಶೋ ಆಗಿದೆ. ಹಿಂದೆ ಇದನ್ನು ಮೋದಿ ಆರಂಭಿಸಿದ್ದರಾ. ಅವರು ಏರ್ ಶೋ ಗೆ ಬರೋದ್ರಿಂದ ಬಡತನ ನಿವಾರಣೆಯಾಗುತ್ತಾ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕಲ್ಯಾಣ ಮತ್ತು ಕಿತ್ತೂರ ಕರ್ನಾಟಕ ಭಾಗದಲ್ಲಿ ಕನಿಷ್ಟ 40 ಕ್ಷೇತ್ರಗಳಲ್ಲಿ ಪಕ್ಷದಿಂದ ಅಭ್ಯರ್ಥಿಗಳು ಆರಿಸಿ ಬರಲಿದ್ದಾರೆ. ನಮ್ಮ ಪಕ್ಷವು ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಬಿಜೆಪಿಯ ಬಹಳಷ್ಟು ಬಂಡಾಯ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ಬ್ರಾಹ್ಮಣ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇಡೀ ಬ್ರಾಹ್ಮಣ ಸಮುದಾಯ ನನ್ನ ವಿರುದ್ಧ ತಿರುಗಿ ಬಿದ್ದಿಲ್ಲ. ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿಲ್ಲ. ನಾನು ಪೇಶ್ವೆ ಡಿಎನ್ ಎ ಮೂಲದ ಬಗ್ಗೆ ಪ್ರಶ್ನಿಸಿದ್ದು, ಅದಕ್ಕೆ ಉತ್ತರ ಕೊಡುವವರು ಕೊಡಲಿ. ನಾನು ಬ್ರಾಹ್ಮಣರು ಸಿಎಂ ಆಗಬಾರದು ಎಂದಿಲ್ಲ. ಪೇಶ್ವೆ ಡಿಎನ್ಎ ಸಿಎಂ ಆಗಬಾರದು ಅಂದಿದ್ದೇನೆ. ಈಗಲೂ ನನ್ನ ಈ ಹೇಳಿಕೆಗೆ ಬದ್ಧನಿದ್ದೇನೆ ಎಂದರು.

ಜಾತಿ ವ್ಯವಸ್ಥೆ ಹುಟ್ಟು ಹಾಕಿದ್ದೇ ಪಂಡಿತರು ಎಂಬ ಆರ್ ಎಸ್ ಎಸ್ ಮುಖಂಡ ಮೋಹನ ಭಾಗವತರ ಹೇಳಿಕೆ ಕುರಿತು ಮಾತನಾಡಿ, ಭಾಗವತರು ನನಗಿಂತ ಗಂಭೀರವಾಗಿ ಹೇಳಿದ್ದಾರೆ. ಆದರೆ ನಾನು ಆ ಮಟ್ಟಕ್ಕೆ ಹೋಗಿಲ್ಲ. ಪೇಶ್ವೆ ಡಿಎನ್ಎ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಬಿಜೆಪಿ ಹುನ್ನಾರಗಳ ಬಗ್ಗೆ ಜನಕ್ಕೆ ತಿಳಿಸುತ್ತೇನೆ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಷ್ಟು ಬಾರಿ ಬೇಕಾದರೂ ರಾಜ್ಯಕ್ಕೆ ಬರಲಿ. ಅವರು ಬ್ರಹ್ಮಾಸ್ತ್ರ, ಸುದರ್ಶನ ಚಕ್ರ ಹಿಡಿದು ಬರುತ್ತಾರೆ. ಪ್ರತಿಪಕ್ಷಗಳನ್ನು ಮಲಗಿಸುತ್ತಾರೆ ಅನ್ನುತ್ತಾರೆ. ಇವರಿಬ್ಬರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಬಿಜೆಪಿ ಅಧಿಕಾರಕ್ಕೆ ಬರೋಕೆ ಸಾಧ್ಯವಿಲ್ಲ. ನಮಗೆ ಟಿಪ್ಪು ಸುಲ್ತಾನ ಬೇಕು, ರಾಣಿ ಅಬ್ಬಕ್ಕ ಬೇಕು. ಸರ್ವಜನಾಂಗದ ಶಾಂತಿಯ ತೋಟ ಬೇಕೋ, ಅಶಾಂತಿಯ ತೋಟ ಬೇಕೋ ಅಂತ ಜನತೆ ತೀರ್ಮಾನಿಸಲಿ ಎಂದರು.












Click it and Unblock the Notifications