ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಿಷನ್‌ಗೆ ಕಡಿವಾಣ ಹಾಕುವ ಬದಲು ದೂರು ಕೊಟ್ಟ ಗುತ್ತಿಗೆದಾರರ ಸಂಘವನ್ನೇ ಒಡೆಯಲಾಗುತ್ತಿದೆ: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಆಗಸ್ಟ್ 30: ಸರ್ಕಾರದ ಭ್ರಷ್ಟಚಾರ ಬಗ್ಗೆ ಮಾತನಾಡಿದ ಬೆಂಗಳೂರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಹಿಂದೆ ವಿರೋಧ ಪಕ್ಷದವರಿದ್ದಾರೆ ಎನ್ನುವ ಮೂಲಕ ಬಿಜೆಪಿಯವರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಸರ್ಕಾರ ನಡೆಸುವವರಿಗೆ ಸಣ್ಣ ಲಜ್ಜೆ ಮತ್ತು ಕಾನೂನಿನ ತಿಳುವಳಿಕೆ ಇದ್ದರೆ ಹೀಗೆಲ್ಲ ಮಾತನಾಡುತ್ತಿರಲಿಲ್ಲ ಎಂದು ಬಿಜೆಪಿ ಸರ್ಕಾರವನ್ನು ಜರಿದಿದ್ದಾರೆ.

ಮಾಧ್ಯಮ ಹೇಳಿಕೆಯಲ್ಲಿ, ನನ್ನನ್ನು ಕೆಂಪಣ್ಣ ಒಬ್ಬರೆ ಭೇಟಿ ಮಾಡಿರಲಿಲ್ಲ. ಗುತ್ತಿಗೆದಾರರ ಸಂಘದ 50 ಕ್ಕೂ ಹೆಚ್ಚು ಜನ ಭೇಟಿ ಮಾಡಿದ್ದರು.‌ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದರ ಕುರಿತು ಮುಖ್ಯಮಂತ್ರಿ ಆದಿಯಾಗಿ ಅನೇಕ ಸಚಿವರು ಮಾತನಾಡಿದ್ದಾರೆ. ಗುತ್ತಿಗೆದಾರರ ಸಂಘದವರು ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಿದ್ದರು. ಆದರೆ ಸಮಸ್ಯೆ ಬಗೆಹರಿಯುವ ಬದಲು, ಗುತ್ತಿಗೆದಾರರ ಸಂಘವನ್ನೆ ಒಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪವನ್ನವರು ಮಾಡುತ್ತಿದ್ದಾರೆ. ಜೊತೆಗೆ ಬಿಬಿಎಂಪಿಯಲ್ಲಿ ಶೇ.40 ರಷ್ಟಿದ್ದ ಕಮಿಷನ್ ದಂಧೆ, ಈಗ 50ಪರ್ಸೆಂಟ್‌ ತಲುಪಿದೆ ಎಂದು ಅವರು ಪತ್ರ ಬರೆದಿದ್ದರು ಎಂದು ಉಲ್ಲೇಖಿಸಿದ್ದಾರೆ.

ಗುತ್ತಿಗೆದಾರರ ಸಂಘದವರು ಕಳೆದ ಒಂದು ವರ್ಷದಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಚೌಕಿದಾರ್ ಎಂದು ತನ್ನನ್ನು ಹೊಗಳಿಕೊಂಡ ಪ್ರಧಾನಿ ನರೇಂದ್ರ ಮೋದಿಯವರಾಗಲಿ, ರಾಜ್ಯ ಬಿಜೆಪಿ ಸರ್ಕಾರವಾಗಲಿ ಗುತ್ತಿಗೆದಾರರ ಮನವಿ ಗಂಭೀರವಾಗಿ ಪರಿಗಣಿಸಿಲ್ಲ. ಮನವಿಗೆ ಸ್ಪಂದಿಸಿದ್ದರೆ ಇಂದು ಈ ಸಮಸ್ಯೆ ಬರುತ್ತಿರಲಿಲ್ಲ. ಅಲ್ಲದೇ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

ಕಮಿಷನ್ ದಂಧೆಯಿಂದ ಕಾಮಗಾರಿ ಗುಣಮಟ್ಟ ಹಾಳು

ಕಮಿಷನ್ ದಂಧೆಯಿಂದ ಕಾಮಗಾರಿ ಗುಣಮಟ್ಟ ಹಾಳು

ರಾಜ್ಯ ಸರ್ಕಾರದ ಕಮಿಷನ್ ದಂಧೆಯಿಂದಾಗಿ ರಾಜ್ಯದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ ಹೇಗಿದೆಯೆಂದು ಜನರು ನೋಡುತ್ತಿದ್ದಾರೆ. ಪ್ರಧಾನಿ ಬಂದು ಹೋದ ಮಾರನೆ ದಿನವೇ ಕೊಟಿಗಟಲೇ ಖರ್ಚು ಮಾಡಿದ್ದ ಹಾಕಿದ್ದ ಟಾರು ಕಿತ್ತು ಬಂದಿದೆ. ಮಡಿಕೇರಿಯಲ್ಲಿ ಕಳಪೆ ಕಾಮಗಾರಿ ಮಾಡಿ ಅದನ್ನು ನೋಡಲು ಹೋದರೆ ಟಾರ್ಪಾಲಿನಿಂದ ಮರೆ ಮಾಡಿ ಕಳ್ಳತನವನ್ನು ಮುಚ್ಚಿಹಾಕುವ ಯತ್ನ ನಡೆದಿದೆ. ಗೂಂಡಾಗಳನ್ನು ಬಿಟ್ಟು ದಾಂಧಲೆ ಎಬ್ಬಿಸಿ ಜನರ ಗಮನ ಬೇರೆಡೆ ಸೆಳೆಯಲಾಗಿದೆ ಎಂದು ದೂರಿದರು.

ಬೆಂಗಳೂರಿನಲ್ಲಿ ರಸ್ತೆಗುಂಡಿ ಬಿದ್ದು ಮೃತಪಟ್ಟವರ ಲೆಕ್ಕ ಕೊಡಿ. ಹೆಚ್ಚೂ ಕಡಿಮೆ ರಾಜ್ಯ ಹೈಕೋರ್ಟ್‌ ವಾರದಲ್ಲಿ ಎರಡು ದಿನ ಗುಂಡಿ ಮುಚ್ಚಿ ಎಂದು ತಾಕೀತು ಮಾಡುತ್ತಿದೆ. ಗುಂಡಿ ಮುಚ್ಚಿದ ಮಾರನೆ ದಿನವೆ ಮತ್ತೆ ಗುಂಡಿ ಬೀಳುತ್ತಿವೆ. ರಸ್ತೆ ಗುಂಡಿಗೆ ಬಿದ್ದು ಯಾರದ್ದೋ ಮನೆಯ ಮಗ ಮರಣ ಹೊಂದುತ್ತಾನೆ. ಯಾರದೋ ಮನೆಯ ದೀಪ ಆರಿ ಹೋಗುತ್ತದೆ. ನಿಮಗೆ ಏನಾದರೂ ಮನುಷ್ಯತ್ವ ಇದಿದ್ದರೆ ಇಂಥ ಘಟನೆಗಳೆಲ್ಲ ಕಣ್ಣಿಗೆ ಕಾಣುತ್ತಿದ್ದವು ಎಂದರು.

ಎಲ್ಲ ಇಲಾಖೆಗಳು ಭ್ರಷ್ಟಾಚಾರ ತಾಂಡವ

ಎಲ್ಲ ಇಲಾಖೆಗಳು ಭ್ರಷ್ಟಾಚಾರ ತಾಂಡವ

ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನೀರಾವರಿ, ಲೋಕೋಪಯೋಗಿ ಇಲಾಖೆ, ಸಾರಿಗೆ, ಉಪನೋಂದಣಾಧಿಕಾರಿ ಕಚೇರಿ, ಅರಣ್ಯ ಇಲಾಖೆ ಸೇರಿದಂತೆ ಎಲ್ಲ ಕಡೆಗಳಲ್ಲು ಲಂಚ ರಾಕ್ಷಸ ಕುಣಿಯುತ್ತಿದ್ದಾನೆ. ಹೀಗಿದ್ದಾಗ ಸಾಮಾನ್ಯ ಜನರು ಯಾರ ಬಳಿಗೆ ಹೋಗಬೇಕು? ವಿರೋಧ ಪಕ್ಷದ ನಾಯಕರ ಬಳಿಯೂ ಬರಲು ಸಾಧ್ಯವಾಗದಿದ್ದರೆ ಜನ ಹತಾಶರಾಗಿ ಕೈಗೆ ಕಲ್ಲು, ದೊಣ್ಣೆಗಳನ್ನು ತೆಗೆದುಕೊಂಡು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

40 ಪರ್ಸೆಂಟ್ ಕೇಸ್‌ ಅನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ

40 ಪರ್ಸೆಂಟ್ ಕೇಸ್‌ ಅನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ

ನಮ್ಮ ಸರ್ಕಾರದ ಅವಧಿಯಲ್ಲಿ ನೀವು ಒತ್ತಾಯ ಮಾಡಿದ ಪ್ರಕರಣಗಳನ್ನೆಲ್ಲ ನಾವು ಸಿಬಿಐಗೆ ವಹಿಸಿದ್ದೆವು. ಯಾಕೆಂದರೆ ನಮಗೆ ನಮ್ಮ ಮೇಲೆ ನಂಬುಗೆ ಇತ್ತು. ಆದರೆ ನಾವು ಕಳೆದ 3 ವರ್ಷಗಳಲ್ಲಿ ಎಷ್ಟು ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೇವೆ. ನೀವು ಒಂದಾದರೂ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಟ್ಟಿದ್ದೀರಾ? ಎಂದು ಅವರು ಪ್ರಶ್ನಿಸಿದರು.

40 ಪರ್ಸೆಂಟ್ ಕೇಸನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಆ ಬಗ್ಗೆ ತನಿಖೆ ಆಗಲಿದೆ. ಗುತ್ತಿಗೆದಾರರ ಸಂಘದವರ ಬೇಡಿಕೆ ಸಂವಿಧಾನಕ್ಕೆ ವಿರುದ್ಧವಾಗಿದೆಯೆ? ಅವರು ತ್ವರಿತಗತಿಯಲ್ಲಿ ವಿಚಾರಣೆ ನಡೆಯಲಿ ಎಂದಿದ್ದಾರೆ. ನ್ಯಾಯಾಂಗ ತನಿಖೆ ಎಂಬುದು ಅಸಾಂವಿಧಾನಿಕ ಪ್ರಕ್ರಿಯೆ ಅಲ್ಲವಲ್ಲ. ನಿಮಗೆ ಭಯ ಇಲ್ಲವೆಂದ ಮೇಲೆ ನ್ಯಾಯಾಂಗ ತನಿಖೆಗೆ ನೀಡಲು ಹೆದರಿಕೆ ಏಕೆ?.

ನ್ಯಾಯಾಂಗ ತನಿಖೆಗೆ ಗುತ್ತಿಗೆದಾರರ ಸಂಘದವರು ಸಿದ್ಧರಿದ್ದಾರೆ. ತನಿಖೆಯ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದವರು ಏನಾದರೂ ಸುಳ್ಳು ಹೇಳಿದ್ದಾದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಿ. ಇದು ಬಿಟ್ಟು ವಿರೋಧ ಪಕ್ಷದವರ ಬಳಿಗೆ ಏಕೆ ಹೋದಿರಿ ಎಂದು ನಿರ್ಬಂಧಿಸುವುದಕ್ಕೆ, ನೀವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದ್ದೀರೊ ಅಥವಾ ಸರ್ವಾಧಿಕಾರಿ ಆಡಳಿತದಲ್ಲಿ ಇದ್ದೀರೊ? ನಿಮಗೆ ಇರುವಷ್ಟೆ ಹಕ್ಕುಗಳು, ಕರ್ತವ್ಯಗಳು ನನಗೂ ಇವೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಹಿಟ್ಲರ್‌ಗಿರಿ

ಕೇಂದ್ರ ಸರ್ಕಾರದಿಂದ ಹಿಟ್ಲರ್‌ಗಿರಿ

ಮೋದಿಯವರ ಕನಸಿನ ಸ್ಮಾರ್ಟ್‍ಸಿಟಿಗಳ ಭ್ರಷ್ಟಾಚಾರ ಕೂಡ ಮುಗಿಲು ಮುಟ್ಟಿದೆ. ಸ್ಮಾರ್ಟ್‌ಸಿಟಿ ಎಂದ ಮಂಗಳೂರು ಯಾಕೆ ಒಂದೇ ಮಳೆಗೆ ಮುಳುಗಿ ಹೋಗುತ್ತಿದೆ? ಬೆಂಗಳೂರಿನ ರಸ್ತೆಗಳು, ಕಾಲುವೆಗಳ ಪರಿತಿಸ್ಥಿತಿ ಇಂದು ಏನಾಗಿದೆ? ಎಂಬುದು ಜನರಿಗೂ ಗೊತ್ತಿದೆ.

ವಿರೋಧ ಪಕ್ಷಗಳನ್ನು ಆಪರೇಷನ್ ಮಾಡುವ ಉದ್ದೇಶದಿಂದ ಪೆಗಾಸಸ್ ಗೂಢಾಚಾರಿಕೆ ಮಾಡಲಾಯಿತು. ಆದರೆ ಈಗ ಕೇಂದ್ರ ಸರ್ಕಾರ ಸಮಿತಿಗೆ ಸಹಕರಿಸಿಲ್ಲ ಎಂದು ವರದಿ ನೀಡಿದೆ. ಇದನ್ನು ನೋಡಿದರೆ ಕೇಂದ್ರ ಸರ್ಕಾರ ದೇಶದಲ್ಲಿ ಹಿಟ್ಲರ್‌ಗಿರಿ ನಡೆಸುತ್ತಿದೆ ಎಂದು ಅರ್ಥವಾಗುತ್ತದೆ.

ಈ ಎಲ್ಲವನ್ನೂ ನೋಡಿದರೆ ಕಾರ್ಪೊರೇಟ್ ಪರವಾಗಿ ಕೆಲಸ ಮಾಡಲು ಹಣ ಕೊಟ್ಟು ಖರೀದಿಸಿ ರಚಿಸುತ್ತಿರುವ ಬಿಜೆಪಿ ಸರ್ಕಾರಗಳಿಂದ ಈ ದೇಶದ ಜನರಿಗೆ ಯಾವ ನ್ಯಾಯವೂ ಸಿಗುವುದಿಲ್ಲ. ದೇಶದ ಯುವಜನರು ಉದ್ಯೋಗವಿಲ್ಲದೆ, ದುಡಿಯುವ ಅವಕಾಶಗಳಿಲ್ಲದೆ ಅನಾಥರಾಗುತ್ತಾರೆ.

ಭಾರತೀಯರ ತಲಾ ಆದಾಯ ಕಡಿಮೆ

ಭಾರತೀಯರ ತಲಾ ಆದಾಯ ಕಡಿಮೆ

ಈಗಾಗಲೇ ಅಭಿವೃದ್ಧಿಯಲ್ಲಿ ಭಾರತ ಬಾಂಗ್ಲಾದೇಶಕ್ಕಿಂತ ಹಿಂದೆ ಬಿದ್ದಿದೆ. ತಲಾ ಆದಾಯದಲ್ಲಿ ಭಾರತಕ್ಕಿಂತ ಹಿಂದೆ ಇದ್ದ ಚೀನಾ ಇಂದು ಭಾರತಕ್ಕಿಂತ ಬಹಳ ಮುಂದೆ ಇದೆ. ಕಳೆದ ವರ್ಷದ ದಾಖಲೆಗಳಂತೆ ಭಾರತೀಯರ ತಲಾ ಆದಾಯ ಸುಮಾರು 1.5 ಲಕ್ಷ ರೂಪಾಯಿಗಳಿದ್ದರೆ. ಚೀನಾದವರ ತಲಾದಾಯವನ್ನು ರೂಪಾಯಿಗಳಿಗೆ ಪರಿವರ್ತಿಸಿದರೆ ಸುಮಾರು 10.5 ಲಕ್ಷ ರೂಪಾಯಿ ಅಷ್ಟಾಗುತ್ತದೆ. ಈಗ ಬಾಂಗ್ಲಾದ ಜನರ ತಲಾ ಆದಾಯ ಭಾರತೀಯರನ್ನು ಮೀರಿಸಿದೆ. ಮೋದಿಯವರು ಮತ್ತು ಬಿಜೆಪಿಯವರು ದೇಶವನ್ನು ಹಾಳು ಮಾಡಿದ್ದಾರೆ. ಇದನ್ನು ಅರಿತು ಕರ್ನಾಟಕದ ಜನರು ಕೇಂದ್ರ ಮತ್ತು ರಾಜ್ಯಗಳಲ್ಲಿ ಚುನಾವಣೆ ವೇಳೆ ಬುದ್ಧಿ ಕಲಿಸುವ ಬಗ್ಗೆ ಯೋಚಿಸಬೇಕು ಎಂದು ಅವರು ಕರೆ ನೀಡಿದರು.

English summary
Siddaramaiah reaction to Karnataka BJP Government response to people's problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X