ಕಾಂಗ್ರೆಸ್ ಗೆಲುವಿನ ಹಿಂದೆ ಸಿದ್ದು, ಡಿಕೆಶಿ ತಂತ್ರಗಾರಿಕೆ: ಅಹಿಂದ, ಒಕ್ಕಲಿಗ ಕಾರ್ಡ್ ಫ್ಲೇ ಮಾಡಿದ ಮಹಾನಾಯಕರು
ಬೆಂಗಳೂರು, ಮೇ 13: ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ ( Karnataka Assembly Election Results ) ಬಹುತೇಕ ಹೊರಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತ ದೊರೆತಿದೆ. ಬಿಜೆಪಿಯ ದೊಡ್ಡ ನಾಯಕರು ಅನ್ನಿಸಿಕೊಂಡವರೆಲ್ಲಾ ಮಕಾಡೆ ಮಲಗಿದ್ದಾರೆ. ಈ ಗೆಲುವು ಕಾಂಗ್ರೆಸ್ ಪಾಳಯದಲ್ಲಿ ಭಾರೀ ಹುರುಪು ತಂದಿದೆ. ಈ ಗೆಲುವಿನ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ತಂತ್ರವಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ.
ಒಬಿಸಿ, ದಲಿತ ಮತ್ತು ಮುಸ್ಲಿಂ ಸಮುದಾಯಗಳನ್ನು ( ಅಹಿಂದ ) ಗುರಿಯಾಗಿಸಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಪ್ರಚಾರ ಮಾಡಿದ್ದರು. ದಕ್ಷಿಣ ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಒಕ್ಕಲಿಗ ಮತಗಳನ್ನು ಸೆಳೆಯಲು ತಂತ್ರ ರೂಪಿಸಿದ್ದರು ಇದು ಈ ಚುನಾವಣೆಯಲ್ಲಿ ಭಾರೀ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ.

ಅಹಿಂದ ಮತಗಳನ್ನು ಸೆಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದಾದ್ಯಂತ ಪ್ರವಾಸ ಕೈಗೊಂಡಿದ್ದರು. ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳದಂತಹ ಹಿಂದುಳಿದ ಪ್ರದೇಶಗಳಲ್ಲಿ ಸಿದ್ದರಾಮಯ್ಯ ಅವರು ಬಿಡುವಿಲ್ಲದ ಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್‌ಗೆ ಭಾರೀ ಲಾಭವಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಂಡ್ಯ, ಕೋಲಾರ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನದಲ್ಲಿ ಪ್ರಚಾರ ಮಾಡಿದ್ದರು. ಆ ಮೂಲಕ ಒಕ್ಕಲಿಗ ವೋಟ್ ಬ್ಯಾಂಕ್‌ಗೆ ಡಿಕೆಶಿ ಕೈಹಾಕಿದ್ದರು. ಇದು ಕಾಂಗ್ರೆಸ್‌ನ ಗೆಲುವಿಗೆ ಸಹಾಯ ಮಾಡಿದೆ.
ಅಸಾಧಾರಣವಾದ ಒಗ್ಗಟ್ಟಿನ ಹೋರಾಟ, ಸ್ಥಳೀಯ ಸಮಸ್ಯೆಗಳ ಮೇಲೆ ಏಕಾಗ್ರತೆ, ಬಜರಂಗದಳವನ್ನು ನಿಷೇಧಿಸುವಂತೆ ಕರೆ ನೀಡುವಂತಹ ಕೊನೆಯ ಕ್ಷಣದ ಆಫ್ ಸ್ಕ್ರಿಪ್ಟ್ ನಡೆಗಳು ಕಾಂಗ್ರೆಸ್ ಲಾಭ ತಂದುಕೊಟ್ಟಿವೆ. ಮನೆಮನೆಗೆ ತಲುಪುವ ನಿಖರವಾದ ಅಭಿಯಾನವು ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ನ ಪ್ರಭಾವಶಾಲಿ ಪ್ರದರ್ಶನಕ್ಕೆ ಕಾರಣವಾಗಿದೆ.
ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಭ್ರಷ್ಟಾಚಾರದ ಸುತ್ತ ಪ್ರಚಾರವನ್ನು ರೂಪಿಸುವ ಮೂಲಕ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಲು ಪ್ರಾರಂಭಿಸಿತು. PayCM ಪ್ರಚಾರ ಮತ್ತು 40 ಪರ್ಸೆಂಟ್ ಕಮಿಷನ್ ಆರೋಪಗಳನ್ನು ಕರ್ನಾಟಕದ ಮನೆಮನೆಗೆ ತಲುಪಿಸಲಾಯಿತು. ಐದು ಖಾತರಿ ಘೋಷಣೆಗಳು ಮತ್ತು ಭರವಸೆಗಳು ಕಾಂಗ್ರೆಸ್‌ನ ಜನಪ್ರಿಯತೆಯನ್ನು ಹೆಚ್ಚಿಸಿತು.
ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ಇತರ ವಿಷಯಗಳ ಕುರಿತು ಮೆಗಾ ನಿರೂಪಣೆಗಳನ್ನು ಕಟ್ಟಿಕೊಡಲು ಕಾಂಗ್ರೆಸ್ ಯಶಸ್ವಿಯಾಯಿತು. ನಂದಿನಿಯಂತಹ ವಿವಾದದ ಲಾಭ ಮಾಡಿಕೊಳ್ಳುವಲ್ಲಿಯೂ ಕಾಂಗ್ರೆಸ್ ಯಶಸ್ವಿಯಾಯಿತು. ಕನ್ನಡಿಗರ ಹೆಮ್ಮೆಯ ಸಂಬಂಧಿತ ಸಮಸ್ಯೆಗಳ ಪ್ರಚಾರವನ್ನು ನಡೆಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು.
ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿಯ ಮೀಸಲಾತಿ ತಂತ್ರ ಅಷ್ಟಾಗಿ ಫಲಿಸಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಿದೆ. ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರಂತಹ ಪ್ರಮುಖ ಲಿಂಗಾಯತ ನಾಯಕರು ಬಿಜೆಪಿಯಿಂದ ಹೊರಹೋಗಿದ್ದು ಸಹ ಬಿಜೆಪಿಗೆ ಭಾರೀ ಹಿನ್ನಡೆಯನ್ನು ಉಂಟು ಮಾಡಿದೆ.












Click it and Unblock the Notifications