ಸಮನ್ವಯ ಸಮಿತಿ ಸಭೆಗೆ ಈ ಇಬ್ಬರು ಪ್ರಮುಖರಿಗೆ ಆಹ್ವಾನವಿಲ್ಲ!
ಬೆಂಗಳೂರು, ಆಗಸ್ಟ್ 31: ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ಸಮ್ಮಿಶ್ರ ಸರ್ಕಾರದ ಮಹತ್ವದ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಆದರೆ ಇಬ್ಬರು ಮಹತ್ವದ ವ್ಯಕ್ತಿಗಳನ್ನು ಸಭೆಗೆ ಆಹ್ವಾನಿಸಲಾಗುತ್ತಿಲ್ಲ.
ಹೌದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷರಿಗೆ ಸಮನ್ವಯ ಸಮಿತಿ ಸಭೆಗೆ ಆಹ್ವಾನವನ್ನು ನೀಡಿಲ್ಲ. ಈ ಇಬ್ಬರನ್ನು ಸಭೆಗೆ ಆಹ್ವಾನಿಸದಿರುವ ನಿರ್ಣಯ ಸ್ವತಃ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರದ್ದೇ ಆಗಿದೆ.
ಸಮನ್ವಯ ಸಮಿತಿಯ ಒಳಕ್ಕೆ ಜೆಡಿಸ್ ರಾಜ್ಯಾಧ್ಯಕ್ಷರಾಗಿರುವ ವಿಶ್ವನಾಥ ಅವರನ್ನು ಬಿಟ್ಟುಕೊಳ್ಳುವುದು ಸಿದ್ದರಾಮಯ್ಯ ಅವರಿಗೆ ಸುತಾರಾಂ ಇಷ್ಟವಿಲ್ಲ. ಈ ಹಿಂದೆ ಗೆಳೆಯರಾಗಿದ್ದ ಅವರು ಈಗ ಬದ್ಧ ವಿರೋಧಿಗಳು.

ವಿಶ್ವನಾಥ್ ತಪ್ಪಿಸಲು ದಿನೇಶ್‌ಗೂ ಆಹ್ವಾನವಿಲ್ಲ
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸಭೆಗೆ ಆಹ್ವಾನಿಸದರೆ ಜೆಡಿಎಸ್ ಕೂಡ ತಮ್ಮ ಪಕ್ಷದ ಅಧ್ಯಕ್ಷರನ್ನು ಸಭೆಗೆ ಆಹ್ವಾನಿಸುವಂತೆ ಪಟ್ಟು ಹಿಡಿಯುತ್ತದೆ ಹಾಗಾಗಿಯೇ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೂ ಆಹ್ವಾನ ನೀಡಿಲ್ಲ.

ಸಿದ್ದರಾಮಯ್ಯ-ವಿಶ್ವನಾಥ್ ಬದ್ಧ ವಿರೋಧಿ
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಲು ಪ್ರಮುಖ ಕಾರಣ ಎನ್ನಲಾಗುವ ವಿಶ್ವನಾಥ್ ಅವರು ಸಮನ್ವಯ ಸಮಿತಿಗೆ ಬಂದರೆ ತಮ್ಮ ಏಕಮೇವಾಧಿಪತ್ಯಕ್ಕೆ ತೊಡಕಾಗುವ ಅಳುಕು ಸಿದ್ದರಾಮಯ್ಯ ಅವರಿಗಿದೆ ಹಾಗಾಗಿ ಅವರು ವಿಶ್ವನಾಥ ಅವರನ್ನು ಸಮಿತಿಯ ಸದಸ್ಯ ಸ್ಥಾನಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳಿವೆ.

ಇಬ್ಬರೂ ಕುರುಬ ಸಮುದಾಯದವರು
ವಿಶ್ವನಾಥ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಕುರುಬ ಸಮುದಾಯದವರೆ. ಈಗಾಗಲೇ ಅಹಿಂದ ಕಟ್ಟಿ ಕುರುಬ ಸಮುದಾಯದ ರಾಜ್ಯದ ಏಕೈಕ ಪರಮೋಚ್ಛ ನಾಯಕ ಎಂಬ ಪಟ್ಟವನ್ನು ಸಿದ್ದರಾಮಯ್ಯ ಸಂಪಾದಿಸಿದ್ದಾರೆ. ಸರ್ಕಾರದ ನೀತಿ ನಿರೂಪಿಸುವ ಇಂತಹ ಸಮನ್ವಯ ಸಮಿತಿಯಂತಹಾ ಮಹತ್ವದ ಸಮಿತಿಯಲ್ಲಿ ತಮ್ಮದೇ ಜಾತಿಯ ಮತ್ತೊಬ್ಬ ನಾಯಕರಿಗೆ ಸ್ಥಾನ ನೀಡಿದರೆ ತಮ್ಮ ಪಟ್ಟ ಅಲುಗಾಡಬಹುದು ಎಂಬ ಅಳುಕೂ ಸಿದ್ದರಾಮಯ್ಯ ಅವರಿಗೆ ಇರದೇ ಇಲ್ಲ.

ರಾಹುಲ್ ಗಾಂಧಿ ಸೂಚನೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ದಿನೇಶ್ ಗುಂಡೂರಾವ್ ಅವರನ್ನು ಸಮನ್ವಯ ಸಮಿತಿ ಸದಸ್ಯರಾಗಿ ಸೇರಿಸಿಕೊಳ್ಳಲು ಸೂಚಿಸಿದ್ದಾರೆ. ಆದರೆ ದಿನೇಶ್ ಗುಂಡೂರಾವ್ ಅವರನ್ನು ಸಭೆಗೆ ಸಮಿತಿಗೆ ಸೇರಿಸಿದಲ್ಲಿ ಜೆಡಿಎಸ್ ಕೂಡ ವಿಶ್ವನಾಥ್ ಅವರನ್ನು ಸಮಿತಿಗೆ ಸೇರಿಸುವಂತೆ ಪಟ್ಟು ಹಿಡಿಯುತ್ತದೆ ಹಾಗಾಗಿ ಸಿದ್ದರಾಮಯ್ಯ ಅವರನ್ನು ಗೊಂದಲಕ್ಕೆ ತಳ್ಳಿದೆ.

ಹೈಕಮಾಂಡ್ ಸೂಚನೆ ಉಲ್ಲಂಘಿಸಿದ ಸಿದ್ದರಾಮಯ್ಯ
ದಿನೇಶ್ ಗುಂಡೂರಾವ್ ಅವರನ್ನು ಸಮಿತಿಗೆ ಸೇರಿಸಿಕೊಳ್ಳದೇ ಇದ್ದಲ್ಲಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರ ವಿರೋಧ ಕಟ್ಟಿಕೊಳ್ಳುವ ಜೊತೆಗೆ. ಹೈಕಮಾಂಡ್ ಸೂಚನೆಯನ್ನು ಮೀರಿದಂತೆಯೂ ಆಗುತ್ತದೆ.












Click it and Unblock the Notifications