ಸಿದ್ದರಾಮಯ್ಯ ಸಿಎಂ ಮಾತ್ರವಲ್ಲ ಮುಂದೆ ಪ್ರಧಾನಿ ಆದ್ರೂ ಆಗಬಹುದು: ಕೆಂಚಪ್ಪ ಪೂಜಾರಿ ಭವಿಷ್ಯ
ಯಾದಗಿರಿ, ಮೇ 20: ರಾಜ್ಯ ರಾಜಕಾರಣದಲ್ಲಿ ನಡೆದ ಹಲವು ಸಂಗತಿಗಳಲ್ಲಿ ಹಲವು ಭವಿಷ್ಯಗಳು ನಿಜವಾಗಿರುವ ಹಲವು ಉದಾಹರಣೆಗಳಿವೆ. ಈಗಾಗಲೇ ಐತಿಹಾಸಿಕ ಗೆಲುವು ಸಾಧಿಸಿರುವ ಕಾಂಗ್ರೆಸ್ ಸರ್ಕಾರ ರಚನೆಗೆ ಶನಿವಾರ ಸಿದ್ದತೆ ನಡೆಸಿದೆ. ಇತ್ತ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದರು.
ಅಲ್ಲದೇ ಸಿದ್ದರಾಮಯ್ಯ ಅವರು ವರುಣಾದಲ್ಲಿ ಗೆಲ್ಲಲಿದ್ದಾರೆ ಎಂದು ಸಿದ್ದರಾಮಯ್ಯ ಅವರ ಮನೆ ದೇವರು ಭವಿಷ್ಯ ನುಡಿದಿತ್ತು. ಇನ್ನೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಭವಿಷ್ಯ ವಾಣಿಯನ್ನ ಕೇಳಿದ್ದು, ಅದರಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಇನ್ನೂ ಎರಡನೇ ಬಾರಿಗೆ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇತ್ತ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾಲಹಳ್ಳಿ ಮಾಳಿಂಗರಾಯ ದೇವಸ್ಥಾನದ ಅರ್ಚಕ ಕೆಂಚಪ್ಪ ಪೂಜಾರಿಗಳು ಒಂದು ವರ್ಷದ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇದೀಗ ಸಿದ್ದರಾಮಯ್ಯ ಸಿಎಂ ಆಗ್ತಿರುವುದರಿಂದ ಮಾಲಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ಮಾಲಹಳ್ಳಿ ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಮಾಳಿಂಗರಾಯ ದೇವಸ್ಥಾನದ ಗರ್ಭಗುಡಿಯೊಳಗೆ ಸಿದ್ದರಾಮಯ್ಯ ಫೋಟೋ ಇಟ್ಟು ವಿಶೇಷ ಪೂಜೆ ಮಾಡಿದ್ದಾರೆ. ಇನ್ನೂ ಪೂಜೆ ಸಲ್ಲಿಸಿದ ಬಳಿಕ ಕೆಂಚಪ್ಪ ಪೂಜಾರಿ ಮಾತನಾಡಿ, ಗುರು ಮಾಳಿಂಗರಾಯನ ಆಜ್ಞೆಯಂತೆ ಸಿದ್ದರಾಮಯ್ಯ ಸಿಎಂ ಆಗ್ತಿದ್ದಾರೆ. ಗುರುವಿನ ವಾಣಿಯಂತೆ ನಾನು ನುಡಿದಿದ್ದೆ. ಅದು ಸ್ವತಃ ಮಾಳಿಂಗರಾಯ ನುಡಿದ ಆಜ್ಞೆ. ಮುಂದೆ ಸಿದ್ದರಾಮಯ್ಯ ಪ್ರಧಾನ ಮಂತ್ರಿ ಆದ್ರೂ ಆಗಬಹುದು ಎಂದು ಸಿದ್ದರಾಮಯ್ಯ ಅವರ ಕುರಿತು ಮತ್ತೊಂದು ಭವಿಷ್ಯ ನುಡಿದಿದ್ದಾರೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಶ್ರೀಕ್ಷೇತ್ರ ಮೈಲಾರಲಿಂಗೇಶ್ವರನ ಪ್ರಸ್ತುತ ವರ್ಷದ ಕಾರ್ಣಿಕ ನುಡಿ ನಿಜವಾಗಿದೆ. 2023 ರ ಫೆಬ್ರುವರಿಯಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ ಮೈಲಾರಲಿಂಗೇಶ್ವರನ ಗೊರವಪ್ಪ ರಾಮಣ್ಣ ಅಂಬಲಿ ಅಳಿಸಿತು ಕಂಬಳಿ ಬೀಸಿತಲೆ ಪರಾಕ್ ಎಂದು ಕಾರ್ಣಿಕ ನುಡಿದಿದ್ದ. ಅದರಂತೆ ರಾಜಕೀಯವಾಗಿ ವಿಶ್ಲೇಷಣೆ ಮಾಡಿದ ರಾಜಕೀಯ ಮುಖಂಡರು ಕುರುಬ ಸಂಕೇತವಾದ ಕಂಬಳಿ ಕಾರ್ಣಿಕದಲ್ಲಿ ಬಳಕೆಯಾಗಿದೆ. ಇದರಿಂದ ಈ ಕುರುಬ ಸಮಾಜಕ್ಕೆ ಉನ್ನತ ಸ್ಥಾನ ಸಿಗಲಿದೆ ಎಂದು ವಿಶ್ಲೇಷಣೆ ಮಾಡಿದ್ದರು.












Click it and Unblock the Notifications