ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಲಿದ್ದಾರೆ ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 03 : ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲಿದ್ದಾರೆ. ಚಾಮರಾಜನಗರ ಮತ್ತು ಕೊಡಗು ಜಿಲ್ಲಾ ಉಸ್ತವಾರಿ ಸಚಿವರು ಬದಲಾವಣೆಯಾಗುವ ಸಾಧ್ಯತೆ ಇದೆ.
ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲಾಗುತ್ತಿದೆ. ಬಿಜೆಪಿಯವರು ಜಿಲ್ಲಾ ಸಂಘಟಕರನ್ನು ಬದಲಾವಣೆ ಮಾಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಉಸ್ತುವಾರಿ ಸಚಿವರ ಬದಲಾವಣೆಗೆ ಮುಂದಾಗಿದ್ದಾರೆ.

ಸದ್ಯ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಹೊಣೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಕೈಯಲ್ಲಿದೆ. ಇದನ್ನು ಬದಲಾವಣೆ ಮಾಡಿ ಸಣ್ಣ ಕೈಗಾರಿಕೆ, ಸಕ್ಕರೆ ಸಚಿವೆ ಗೀತಾ ಮಹದೇವಪ್ರಸಾದ್ ಅವರಿಗೆ ನೀಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಯೋಜನೆ ಮತ್ತು ಸಾಂಖ್ಯಿಂಕ ಖಾತೆ ಸಚಿವ ಎಂ.ಆರ್.ಸೀತಾರಾಮ್ ಅವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು. ಕೊಡಗು ಜಿಲ್ಲೆಯ ಉಸ್ತುವಾರಿಯನ್ನು ಯು.ಟಿ.ಖಾದರ್ ಅವರಿಗೆ ನೀಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಬಿಟ್ಟುಕೊಡಲು ಎಂ.ಆರ್.ಸೀತಾರಾಮ್ ಒಪ್ಪಿಗೆ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಜಿಲ್ಲೆಯಲ್ಲಿ ಬಿಜೆಪಿಯನ್ನು ಚುನಾವಣೆಗೆ ಸಿದ್ಧಗೊಳಿಸುವ ಜವಾಬ್ದಾರಿಯನ್ನು ವಿ.ಸೋಮಣ್ಣ ಅವರಿಗೆ ವಹಿಸಲಾಗಿದೆ. ಗುಂಡ್ಲುಪೇಟೆ ಅಥವ ಹನೂರು ಕ್ಷೇತ್ರದಿಂದ ಸೋಮಣ್ಣ ಅವರು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಈ ಬೆಳವಣಿಗೆಗಳನ್ನು ಗಮನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲು ಮುಂದಾಗಿದ್ದಾರೆ. ಈ ನಿರ್ಧಾರ ಚುನಾವಣೆಯಲ್ಲಿ ಫಲ ಕೊಡಲಿದೆಯೇ? ಕಾದು ನೋಡಬೇಕು.












Click it and Unblock the Notifications