Siddaramaiah: ಮನೆ ದೇವರು ಚಿಕ್ಕಮ್ಮ ತಾಯಿ ಭವಿಷ್ಯವಾಣಿ: ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧೆ
ಮಂಡ್ಯ, ಮಾರ್ಚ್ 30: ಕರ್ನಾಟಕ ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿದಾಗಿನಿಂದ ಅವರ ಸ್ಪರ್ಧೆ, ಟಿಕೆಟ್ ಯಾರಿಗೆ ಎಂಬೆಲ್ಲ ವಿಚಾರವಾಗಿ ಚರ್ಚೆಗಳು ಆಗುತ್ತಲೇ ಇವೆ.
ವಿಪಕ್ಷ ನಾಯಕ ಸಿದ್ದರಾಮಯ್ಯನವರು ಇತ್ತೀಚೆಗೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದರಲ್ಲದೇ ಅದೇ ಕ್ಷೇತ್ರದಿಂದ ಟಿಕೆಟ್ ಈಗಾಗಲೇ ಅವರಿಗೆ ನೀಡಲಾಗಿದೆ. ಎರಡು ಕ್ಷೇತ್ರಗಳಲ್ಲಿ ಚನಾವಣೆ ಸ್ಪರ್ಧೆ ಅವರು ಮಾಡುತ್ತಾರೆಯೇ? ಅವರಿಗೆ ಅದರಿಂದ ಲಾಭ ವಾಗಲಿದೆಯೇ?, ಸ್ಪರ್ಧೆಯ ಲಾಭ ಕುರಿತಾಗಿ ಸಿದ್ದರಾಮಯ್ಯನವರ ಮನೆ ದೇವರು 'ಚಿಕ್ಕಮ್ಮ ತಾಯಿ' ಭವಿಷ್ಯ ನುಡಿದೆ. ಆ ಬಗ್ಗೆ ಮಾಹಿತಿ ಇಲ್ಲಿ ತಿಳಿಯೋಣ.

2023ರ ಸಾರ್ವತ್ರಿಕ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಕೆಲವು ಬದಲಾವಣೆ, ರಾಹುಲ್ ಗಾಂಧಿಯವರ ಸಲಹೆ ಮೇರೆಗೆ ಕೋಲಾರದಿಂದ ಸ್ಪರ್ಧೆ ನಿರ್ಧಾರದಿಂದ ಅವರು ಹಿಂದೆ ಸರಿದರು ಎನ್ನಲಾಗಿತ್ತು. ಆದರೆ ಅವರು ಕೋಲಾರದಿಂದಲೂ ಟಿಕೆಟ್ ಕೇಳಿದ್ದಾರೆ ಎಂದು ಅವರೇ ತಿಳಿಸಿದ್ದರು.
ಈ ಎಲ್ಲಾ ಬೆಳವಣಿಗಗಳ ನಡುವೆ ಮಧ್ಯೆ ಸಿದ್ದರಾಮಯ್ಯ ಅವರ ಮನೆ ದೇವರಾದ 'ಚಿಕ್ಕಮ್ಮ ತಾಯಿ' ಒಂದು ಕಡೆ ನಿಂತರೆ ಅಪಾಯ, ಎರಡೂ ಕಡೆ ನಿಂತರೆ ಗೆಲುವು ಎಂಬ ಭವಿಷ್ಯವನ್ನು ನುಡಿದಿದೆ. ಆ ಭವಿಷ್ಯ ವಾಣಿಯಂತೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಾರಾ ಎಂಬುದೇ ಕುತೂಹಲವಾಗಿದೆ.
ಚಿನ್ನಮ್ಮ ತಾಯಿ ನುಡಿದ ಭವಿಷ್ಯ ಹೀಗಿದೆ
ಈ ಹಿಮದೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಮಂಡ್ಯದ ಚೊಟ್ಟನಹಳ್ಳಿ ಶ್ರೀ ಆದಿನಾಡು ಚಿಕ್ಕಮ್ಮ ತಾಯಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ದೇವಸ್ಥಾನದ ಅರ್ಚಕ ಲಿಂಗಣ್ಣ ಅವರ ಮೇಲೆ ಆವಾಹನೆಯಾಗಿದ್ದ ದೇವಿ, ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ನಿಲ್ಲಬೇಕು. ಒಂದು ಕ್ಷೇತ್ರದಲ್ಲಿ ನಿಂತರೆ ಅಪಾಯ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದ್ದರು. ಎರಡೂ ಕ್ಷೇತ್ರಗಳಲ್ಲಿ ಡಬಲ್ ಗೆಲುವಿನ ಅವಕಾಶವಿದೆ ಎಂದು ದೇವರು ಹೇಳಿದೆ ಎಂದು ತಿಳಿದು ಬಂದಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯನವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಬೇಕು ಎಂಬುದು ದೇವಿಯ ಇಚ್ಛೆ ಆಗಿದೆ. ಅದನ್ನು ಪುತ್ರ ಯತೀಂದ್ರ ಬಳಿ ಪುನರುಚ್ಚರಿಸಿದೆ. ಹಿಂದಿನಿಂದಲೂ ಸಿದ್ದರಾಮಯ್ಯನವರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕಳೆದ ಚುನಾವಣೆಯಲ್ಲೂ ಸಿದ್ದರಾಮಯ್ಯ ಅವರು ಎರಡೂ ಕ್ಷೇತ್ರದಿಂದ ದೇವಿಯೇ ಸ್ಪರ್ಧೆ ಮಾಡುವಂತೆ ತಿಳಿಸಿತ್ತು ಎನ್ನಲಾಗಿದೆ.

ವರುಣಾದಿಂದ ಸ್ಪರ್ಧೆ, ಕೋಲಾರ?
ಕಳೆದ ಬಾರಿ ಬಾದಾಮಿ ಕ್ಷೇತ್ರ ಹಾಗೂ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಆದರೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಅವರಿಗೆ ಸೋಲಾಯಿತು. ಆದರೆ ಬಾದಾಮಿಯ ಜನ ಅವರನ್ನು ಕೈ ಬಿಡಲಿಲ್ಲ. ಅಲ್ಲಿ ಅವರು ಬಹುಮತ ಗಳಿಸಿ ಗೆದ್ದು ಬಂದರು. ತಾಯಿಯ ಭವಿಷ್ಯವಾಣಿ ನಂತರ ಈ ಹಿಂದಿನ ಚುನಾವಣೆ ಫಲಿತಾಂಶ ಸಿದ್ದರಾಮಯ್ಯರ ಕಣ್ಣಮುಂದೆ ಬಂದಿರುವಂತಿದೆ. ಹೀಗಾಗಿಯೇ ಅವರು ಕೋಲಾರದಿಂದಲೂ ಟಿಕೆಟ್ ಬಯಸಿದ್ದಾರೆ. ಎರಡು ಕ್ಷೇತ್ರದಲ್ಲೂ ಸ್ಪರ್ಧಿಸಲು ಮುಂದಾಗಿದ್ದಾರೆ.
ಸರ್ವೇಯೊಂದರ ಪ್ರಕಾರ ಕೋಲಾರ ಸಿದ್ದರಾಮಯ್ಯನವರಿಗೆ ಅಷ್ಟು ಸುರಕ್ಷಿತವಲ್ಲ ಎನ್ನಲಾಗಿತ್ತು. ಹೀಗಾಗಿ ರಾಹುಲ್ ಗಾಂಧಿಯವರು ಸ್ಪರ್ಧೆ ವಿಚಾರವಾಗಿ ಅವರಿಗೆ ಸಲಹೆ ನೀಡಿದ್ದರು. ಅದಾದ ಬಳಿಕ ಕೆಲವು ಬದಲಾವಣೆ ನಡೆದು ಅವರಿಗೆ ವರುಣಾ ಟಿಕೆಟ್ ಪಕ್ಕಾ ಆಯಿತು.
ಹೈಕಮಾಂಡ್ ಒಪ್ಪಿಗೆ ನೀಡುವ ಸಾಧ್ಯತೆ
ಇದೀಗ ಸಿದ್ದರಾಮಯ್ಯನವರ ಕೋರಿಕೆಯಂತೆ ಕೋಲಾರದಿಂದಲೂ ಅವರಿಗೇ ಟಿಕೆಟ್ ನೀಡುವ ವಿಚಾರ ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದೆ. ಈ ಬಗ್ಗೆ ಮರಳಿ ಸಂದೇಶ ಬಂದಿದ್ದೇ ಆದಲಿ, ವರಿಷ್ಠರ ಸೂಚನೆ ಮೇರೆಗೆ ಕೋಲಾರದಿಂದಲೂ ಅವರಿಗೆ ಸ್ಪರ್ಧಿಸುವ ಅವಕಾಶ ದೊರೆಯಲಿದೆ. ಕಾಂಗ್ರೆಸ್ ಹೈಕಮಾಂಡ ಒಪ್ಪಿಗೆ ನೀಡುವ ಸಾಧ್ಯತೆಯೂ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಮಾರ್ಚ್ 31ರಂದು ಸಿದ್ದರಾಮಯ್ಯನವರು ಕೋಲಾರಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಒಂದಷ್ಟು ಸಭೆ, ಸಮಾಲೋಚನೆಗಳು ನಡೆಯಲಿದ್ದು, ಬಳಿಕವೇ ಚುನಾವಣೆ, ಸ್ಪರ್ಧೆ ಕುರಿತು ಹೊಸ ವಿಚಾರಗಳು ಬಹಿರಂಗಗೊಳ್ಳಲಿವೆ ಎಂದು ಅಂದಾಜಿಸಲಾಗಿದೆ.












Click it and Unblock the Notifications