ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದ್ದೂರಿ ಮದುವೆಗೆ ಬ್ರೇಕ್: ಸಿದ್ದರಾಮಯ್ಯ ಸರಕಾರಕ್ಕೆ 6 ಪ್ರಶ್ನೆಗಳು

By ಬಾಲರಾಜ್ ತಂತ್ರಿ
|
Google Oneindia Kannada News

ಬಹಳ ಹಿಂದೆನೇ ಜಾರಿಗೆ ತರಲು ಉದ್ದೇಶಿಸಲಾಗಿದ್ದ 'ಅದ್ದೂರಿ ಮದುವೆಗೆ ಕಡಿವಾಣ' ಹಾಕುವ ಸಿದ್ದರಾಮಯ್ಯ ಸರಕಾರದ ಮಹತ್ವಾಕಾಂಕ್ಷೆಯ ಮಸೂದೆ ಸದ್ಯದಲ್ಲೇ ಜಾರಿಗೆ ಬರುವ ಎಲ್ಲಾ ಸಾಧ್ಯತೆಗಳಿವೆ.

ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಹೊಸದರಲ್ಲಿ, ಅದ್ದೂರಿ ವಿವಾಹ ನಿಯಂತ್ರಣಕ್ಕೆ ಕಾಯ್ದೆ ರೂಪಿಸಲು ಚಿಂತನೆ ನಡೆಸಿತ್ತು. ಆದರೆ, ಕಾಂಗ್ರೆಸ್‌ ಶಾಸಕರಿಂದಲೇ ಆಕ್ಷೇಪ ವ್ಯಕ್ತವಾಗಿತ್ತು ಜೊತೆಗೆ ಸಾರ್ವಜನಿಕ ವಲಯದಿಂದಲೂ ವಿರೋಧ ವ್ಯಕ್ತವಾಗಿದ್ದರಿಂದ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು.

ಈಗ, ಅದ್ದೂರಿ ವಿವಾಹಗಳ ನಿಯಂತ್ರಣಕ್ಕಾಗಿ ಕಾಂಗ್ರೆಸ್ಸಿನ ಹಿರಿಯ ಶಾಸಕ ರಮೇಶ್‌ ಕುಮಾರ್‌ ಖಾಸಗಿ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿದ್ದಾರೆ. ಮಸೂದೆಯನ್ನು ಸವಿವರವಾಗಿ ಸದನದಲ್ಲಿ ಚರ್ಚಿಸಲು ಅನುಮತಿ ನೀಡುವುದಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಗ್ರೀನ್ ಸಿಗ್ನಲ್ ನೀಡಿದ್ದೂ ಆಗಿದೆ.

ಅದ್ದೂರಿ ಮದುವೆಯಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರು ಸಾಲಗಾರರಾಗುತ್ತಿದ್ದಾರೆ. ತೋರಿಕೆಗಾಗಿ ಅಡುಗೆ ಮಾಡಿಸಿ ಬೀದಿಗೆ ಚೆಲ್ಲುತ್ತಾರೆ, ಕಡ್ಡಾಯ ವಿವಾಹ ನೋಂದಣಿ ಎನ್ನುವ ಕೆಲವೊಂದು ರಮೇಶ್ ಕುಮಾರ್ ಅವರ ಉಲ್ಲೇಖ ಸರಿಯಾಗಿಯೇ ಇದೆ.

ಆದಾಗ್ಯೂ, ಸರಕಾರ ಒಂದು ಕಾನೂನು ಜಾರಿ ಮಾಡಲು ಹೊರಟಿದೆಯೆಂದರೆ ಅದರ ಆಗುಹೋಗುಗಳ ಬಗ್ಗೆ ಚರ್ಚಿಸಬೇಕು, ಇದ್ಯಾವುದನ್ನೇ ಮಾಡದೇ ಹೋದರೆ ಸಾರ್ವಜನಿಕ ವಲಯದಲ್ಲಿ ಸರ್ವಾಧಿಕಾರ ಧೋರಣೆಯಂತೆ ಅನಿಸುವುದರಲ್ಲಿ ತಪ್ಪಿಲ್ಲ.

ಬ್ರೇಕ್ ಹಾಕಬೇಕಾಗಿರುವುದು ಸಚಿವರ ಅದ್ದೂರಿ ಖರ್ಚುವೆಚ್ಚಕ್ಕೆ. ಸಾರ್ವಜನಿಕರ ತೆರಿಗೆ ಹಣದಿಂದ ಸರಿಯಾಗಿಯೇ ಇರುವ ಸರಕಾರೀ ಬಂಗಲೆಗಳನ್ನು ವಾಸ್ತು ಸರಿಯಿಲ್ಲ, ಅದು ಸರಿಯಿಲ್ಲ ಎಂದು ನವೀಕರಣ ಮಾಡುವುದು. ಲಕ್ಷಾಂತರ ರೂಪಾಯಿ ಬೆಡ್ಶೀಟಿಗೆ, ದಿಂಬುಗೆ, ಟವೆಲ್ ಮುಂತಾದವುದಕ್ಕೆ ದುಂದುವೆಚ್ಚ ಮಾಡುವುದನ್ನು ಮೊದಲು ಕಮ್ಮಿ ಮಾಡಲಿ, ಆಮೇಲೆ ಮದುವೆ ವಿಚಾರಕ್ಕೆ ಬರಲಿ ಎನ್ನುವುದು ಸಾರ್ವಜನಿಕರ ಆಶಯ.

ಉದ್ದೇಶಿತ ಈ ಮಸೂದೆಯ ಬಗ್ಗೆ ಎದ್ದಿರುವ ಕೆಲವೊಂದು ಪ್ರಶ್ನೆಗಳು ಸ್ಲೈಡಿನಲ್ಲಿ..

ಊಟೋಪಚಾರ

ಊಟೋಪಚಾರ

ಮದುವೆಗೆ ಇಂತಿಷ್ಟು ಜನ ಬರಬಹುದು ಎಂದು ಒಂದು ಲೆಕ್ಕಾಚಾರದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ. ಅಂದಾಜು ಮುನ್ನೂರು ಜನ ಬರಬಹುದೆಂದು ನಿರೀಕ್ಷೆಯಿದ್ದರೆ 275 ಜನಕ್ಕೆ ಊಟೋಪಾಚಾರದ ವ್ಯವಸ್ಥೆ ಮಾಡುವುದು ಎಲ್ಲಾ ಕಡೆ ನಡೆಯುವಂತದ್ದು. ಆದರೆ ಕಾರಣಾಂತರದಿಂದ 275 ಜನಾನೂ ಊಟಕ್ಕೆ ಬಂದಿಲ್ಲ ಎಂದಾದರೆ ಅದು ಪೋಲಾಗಿಯೇ ಆಗುತ್ತೆ. ಕೆಲವೊಂದು ಕಡೆ ಅವಶ್ಯಕತೆಗಿಂತೆ, ತೋರಿಕೆಗಾಗಿ ವರೈಟಿಗಳು ಹೆಚ್ಚಿದ್ದರೂ, ಊಟ ವೇಸ್ಟ್ ಮಾಡುವ ಉದ್ದೇಶ ಯಾವ ನಾಗರೀಕನಿಗೆ ಇರುತ್ತೆ ಅನ್ನೋದೇ ಇಲ್ಲಿರುವ ಪ್ರಶ್ನೆ?

ಇಂತಿಷ್ಟೇ ಜನರಿಗೆ ಕರೀಬೇಕು

ಇಂತಿಷ್ಟೇ ಜನರಿಗೆ ಕರೀಬೇಕು

ಇಂತಿಷ್ಟು ಜನರಿಗಿಂತ ಹೆಚ್ಚು ಜನ ಮದುವೆಗೆ ಬಂದರೆ ತೆರಿಗೆ ವಿಧಿಸಲು ಚಿಂತನೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿಯಿದೆ. ಮದುವೆ ಆಮಂತ್ರಣ ಕೊಡಲು ಹೋದಾಗ ನೀವು ಎಷ್ಟು ಜನ ಬರ್ತೀರಾ, ಇಂತಿಷ್ಟೇ ಜನ ಬರಬೇಕು ಎಂದು ಪ್ರತೀ ಮನೆಯಿಂದ ಮುಚ್ಚಳಿಕೆ ಬರೆಸಿಕೊಂಡು ಬರೋಕಾಗುತ್ತಾ? ಯಾರ್ ಸ್ವಾಮಿ ನಿಮಗೆ ಇಂತಹ ಐಡಿಯಾ ಕೊಟ್ಟೋವ್ರು? ಜೀವಮಾನದಲ್ಲಿ ಒಂದು ಬಾರಿ (ಇಂದ್ರಾಣಿಯಂತಹ ಸ್ಪೆಷಲ್ ಕೇಸ್ ಹೊರತುಪಡಿಸಿ) ಆಗುವ ಮದುವೆಗೆ ಇಂತಿಷ್ಟೇ ಜನರನ್ನು ಆಹ್ವಾನಿಸಿ ಎಂದು ಕಾನೂನು ಮಾಡಿದರೆ ಅದು ತಪ್ಪಾಗುವುದಿಲ್ಲವೇ?

ಈ ಕಾನೂನು ಎಲ್ಲರಿಗೂ ಅನ್ವಯವಾಗುತ್ತಾ?

ಈ ಕಾನೂನು ಎಲ್ಲರಿಗೂ ಅನ್ವಯವಾಗುತ್ತಾ?

ಪ್ರಮುಖವಾಗಿ ಸರಕಾರ ಸ್ಪಷ್ಟ ಪಡಿಸಿರಬೇಕಾಗಿರುವುದು, ಈ ಉದ್ದೇಶಿತ ಮಸೂದೆ ಎಲ್ಲಾ ಧರ್ಮದವರಿಗಾ ಅಥವಾ ಬರೀ ಹಿಂದೂ ಮದುವೆ ಪದ್ದತಿಗಾ? ಸರಕಾರದ ಇತ್ತೀಚಿನ ಕೆಲವು ಬೆಳವಣಿಗೆಗಳು, ತಾರತಮ್ಯಗಳಿಂದಾಗಿ ಇಂತಹ ಪ್ರಶ್ನೆ ಉದ್ಭವಿಸಿದು ಸಹಜ.

ಕಲ್ಯಾಣಮಂಟಪ

ಕಲ್ಯಾಣಮಂಟಪ

ರಾಜ್ಯದಲ್ಲಿ ಪ್ರಮುಖವಾಗಿ ಬೆಂಗಳೂರಿನಲ್ಲಿ ಕಲ್ಯಾಣಮಂಟಪದ ದಿನ ಬಾಡಿಗೆ ಎಷ್ಟಿದೆ ಗೊತ್ತಾ? ಅದರಲ್ಲಿ ಎಷ್ಟು ಕಲ್ಯಾಣ ಮಂಟಪಗಳು ನೊಂದಾಣಿ ಮಾಡಿಸಿಕೊಂಡಿವೆ. ನಗರದಲ್ಲಿರುವ ಹೆಚ್ಚಿನ ಕಲ್ಯಾಣ ಮಂಟಪಗಳು ಪ್ರಭಾವಿ ವ್ಯಕ್ತಿಗಳದ್ದು, ರಾಜಕೀಯ ಮುಖಂಡರದ್ದು ಎನ್ನುವ ಮಾತನ್ನು ನೀವು ಒಪ್ಪಿಕೊಳ್ಳುತ್ತೀರಾ? ಕಲ್ಯಾಣ ಮಂಟಪದ ಬಾಡಿಗೆಗೂ ಕಡಿವಾಣ ಹಾಕುವ ಉದ್ದೇಶ ಮಸೂದೆಯಲ್ಲಿದ್ದರೂ, ಯಾವ ಒತ್ತಡಕ್ಕೂ ಮಣಿಯದೇ ಕಟ್ಟುನಿಟ್ಟಿನಿಂದ ಇವರನ್ನು ನಿಯಂತ್ರಿಸಲು ಸಾಧ್ಯನಾ? ಗ್ರಾಮ ಪಂಚಾಯತ್ ಗೆ ಒಂದರಂತೆ ಸರಕಾರವೇ ಛತ್ರ ನಿರ್ಮಿಸಿದರೆ ನಿಮ್ಮ ಪ್ರಸ್ತಾವಿತ ಮಸೂದೆಗೆ ಒಂದು ತೂಕ ಬರುತ್ತದೆ, ಅಲ್ಲವೇ?

ವರದಕ್ಷಿಣೆ

ವರದಕ್ಷಿಣೆ

ರಮೇಶ್ ಕುಮಾರ್ ಅವರೇ, ಮಧ್ಯಮ ವರ್ಗದವರಿಗೆ ಕಾಡುತ್ತಿರುವುದು ಊಟ ಪೋಲಾಗುತ್ತಿರುವುದಕ್ಕಿಂತ ಹೆಚ್ಚಾಗಿ ವರದಕ್ಷಿಣೆ (ಎಲ್ಲಾ ಜಾತಿಗೂ ಅನ್ವಯಿಸುವುದಿಲ್ಲ) ಎನ್ನುವ ಸಾಮಾಜಿಕ ಪಿಡುಗು. ಕಣ್ಣೊರೆಸುವ ಕಾನೂನು ಈ ಸಂಬಂಧ ಇದ್ದರೂ, ಮಸೂದೆಗೆ ತಿದ್ದುಪಡಿ ತಂದು ಈ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ತೆಗೆದುಕೊಳ್ಳಲು ನಿಮ್ಮ ಸರಕಾರಕ್ಕೆ ಒತ್ತಡ ತಂದರೆ ಜನ ನಿಮ್ಮನ್ನು ಬರುವ ಚುನಾವಣೆಯಲ್ಲೂ ನೆನಪಿಸಿಕೊಳ್ಳುವುದು ಖಂಡಿತ.

ಸಂವಿಧಾನದ ಆಶಯದಂತೆ ಇದೆಯಾ ಈ ಪ್ರಸ್ತಾವಿತ ಮಸೂದೆ

ಸಂವಿಧಾನದ ಆಶಯದಂತೆ ಇದೆಯಾ ಈ ಪ್ರಸ್ತಾವಿತ ಮಸೂದೆ

ಜಾರಿಗೊಳಿಸಲು ಹೊರಟಿರುವ ಪ್ರಸ್ತಾವಿತ ಈ ಮಸೂದೆ ಸಂವಿಧಾನದ ಆಶಯದಂತೆ ರಚಿಸಲ್ಪಟ್ಟಿದೆಯೇ ಎಂದು ಸ್ಪಷ್ಟಪಡಿಸಬೇಕಿದೆ. ಯಾಕೆಂದರೆ ಸಂವಿಧಾನ ಇಂತಹ ಕಾನೂನಿಗೆ ಅವಕಾಶ ಕೊಡುವುದು ಅನುಮಾನ, ಚರ್ಚಿಸದೇ ಇಂತಹ ಕಾನೂನನ್ನು ಏಕಾಏಕಿ ಜಾರಿಗೊಳಿಸಲು ಹೊರಟರೆ, ನ್ಯಾಯಾಲಯದ ಮುಂದೆ ಛೀಮಾರಿಗೆ ಒಳಗಾಗಬಹುದು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ #ಮದುವೆ300 ಎಂಬ ಹ್ಯಾಷ್ ಟಾಗ್ ಬಳಸಿ ವಿರೋಧ ವ್ಯಕ್ತ ಪಡಿಸಲಾಗುತ್ತಿದೆ.

English summary
Siddaramaiah government's proposal to bring act on restrict lavish marriages in Karnataka, Six questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X