ಉಪಚುನಾವಣೆ, ಕೆಪಿಸಿಸಿ ಪದಾಧಿಕಾರಿ ನೇಮಕ ಕುರಿತು ಸೋನಿಯಾಗಾಂಧಿ ಜೊತೆ ಚರ್ಚೆ
ಬೆಂಗಳೂರು ಅಕ್ಟೋಬರ್ 5, ರಾಜ್ಯದಲ್ಲಿ ಬರುತ್ತಿರುವ ಎರಡು ವಿಧಾನಸಭಾ ಉಪಚುನಾವಣೆ ಮತ್ತು ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆ ಸಂಬಂಧ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರೊಂದಿಗೆ ಚರ್ಚೆ ನಡೆಸಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಆಹ್ವಾನದ ಮೇರೆಗೆ ಸಿದ್ದರಾಮಯ್ಯ ಅವರ ಮಂಗಳವಾರ ಬೆಳಿಗ್ಗೆ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿನ ಕೆಲವು ಬದಲಾವಣೆಗಳು, ಮುಂಚೂಣಿ ಘಟಕಗಳು ಹಾಗೂ ಜಿಲ್ಲಾಧ್ಯಕ್ಷರುಗಳ ನೇಮಕ ಮತ್ತು ಬದಲಾವಣೆ ಕುರಿತು ಭೇಟಿ ಸಂದರ್ಭದಲ್ಲಿ ಚರ್ಚಿಸಲಾಯಿತು.
"ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಕೆಪಿಸಿಸಿ ಪದಾಧಿಕಾರಿಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಆವರೊಂದಿಗೆ ಈ ಕುರಿತು ಮಾತ್ರ ಚರ್ಚೆ ಮಾಡಲಾಗಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಪಟ್ಟಿಯೊಂದನ್ನೂ ನೀಡಿದ್ದೇನೆ. ಇನ್ನೂ ಹೆಚ್ಚಿನ ವಿಷಯಗಳನ್ನು ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ. ಅದು ಪಕ್ಷದ ಆಂತರಿಕ ವಿಚಾರಗಳು" ಎಂದು ಸಿದ್ದರಾಮಯ್ಯ ಹೇಳಿದರು.

ರಾಷ್ಟ್ರರಾಜಕಾರಣದ ಚರ್ಚೆ ಆಗಿಲ್ಲ:
"ಸೋನಿಯಾಗಾಂಧಿ ಅವರು ನನ್ನನ್ನು ರಾಷ್ಟ್ರರಾಜಕಾರಣಕ್ಕೆ ಆಹ್ವಾನಿಸಿದರು ಎಂಬುದು ಸುಳ್ಳು. ಈ ಕುರಿತು ಯಾವುದೇ ಪ್ರಸ್ತಾಪ ಆಗಿಲ್ಲ. ನಾನೂ ಸಹ ಮಾತನಾಡಿಲ್ಲ. ಈ ಮೊದಲು ರಾಹುಲ್ ಗಾಂಧಿ ಅವರು ನನ್ನನ್ನು ಕರೆದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗುವಂತೆ ಸೂಚಿಸಿದ್ದರು. ಆದರೆ, ನಾನು ಬೇಡ ಎಂದಿದ್ದೆ. ಬಳಿಕ ಅವರು ಕಾರ್ಯಕಾರಿ ಸಮಿತಿಯ ಸದಸ್ಯನನ್ನಾಗಿ ನೇಮಿಸಿದರು. ಕೆಲ ದಿನಗಳ ಬಳಿಕ ಅದಕ್ಕೂ ರಾಜೀನಾಮೆ ನೀಡಿದ್ದೆ. ಪಂಚರಾಜ್ಯದ ಚುನಾವಣೆಗೆ ನನ್ನನ್ನು ಬಳಸಿಕೊಳ್ಳುತ್ತಾರೆ ಎಂಬುದು ಸುಳ್ಳು. ಈ ಬಗ್ಗೆ ಚರ್ಚೆಯೇ ಆಗಿಲ್ಲ'' ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮೋದಿಯದು ಹಿಟ್ಲರ್ ಸರ್ಕಾರ
"ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ನುಗ್ಗಿಸಿ ನಾಲ್ವರು ರೈತರನ್ನು ಹತ್ಯೆ ಮಾಡಲಾಗಿದೆ. ಇದು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನೆನಪಿಸುತ್ತದೆ. ಈ ಸಂಬಂಧ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮಗನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೂಡಲೇ ಆತನನ್ನು ಜೈಲಿಗೆ ಕಳುಹಿಸಬೇಕು ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ಪಡೆಯಬೇಕು. ರೈತರಿಗೆ ಸಾಂತ್ವನ ಹೇಳಲು ಹೋಗುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಮೇಲೂ ಪೊಲೀಸರು ದೌರ್ಜನ್ಯ ಮಾಡಿದ್ದಾರೆ. ಮತ್ತೊಂದೆಡೆ ದೆಹಲಿಯಲ್ಲಿ ರೈತರು ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಇದೆಲ್ಲವನ್ನೂ ನೋಡಿದರೆ ಮೋದಿಯದು ಹಿಟ್ಲರ್ ಸರ್ಕಾರ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.
"ಬಿಜೆಪಿಯವರು ಮತ್ತು ಆರ್‌ಎಸ್‌ಎಸ್‌ನವರಿಗೆ ನೀವು ತಾಲಿಬಾನಿಗಳು ಎಂದರೆ ಸಿಟ್ಟು ಬರುತ್ತದೆ. ಆದರೆ ಅವರು ಸದಾ ಪ್ರಜಾಪ್ರಭುತ್ವದ ವಿರುದ್ಧ ಧಮನಕಾರಿಯಾಗಿಯೇ ವರ್ತಿಸುತ್ತಾರೆ. ಅವರಿಗೆ ಸತ್ಯ ಅಹಿಂಸೆಯ ಬದಲು ಅಸತ್ಯ ಮತ್ತು ಹಿಂಸೆಯ ಮೇಲೆಯೇ ಹೆಚ್ಚಿನ ನಂಬಿಕೆ ಇದೆ" ಎಂದು ಟೀಕಾಪ್ರಹಾರ ನಡೆಸಿದರು.
ಶಾಸಕ ಜಮೀರ್ ಅಹಮದ್ ಸಿದ್ದರಾಮಯ್ಯ ಜೊತೆಗಿದ್ದರು.












Click it and Unblock the Notifications