• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಕಿ ಉಳಿದಿರುವ ಹಾಲಿನ ಪ್ರೋತ್ಸಾಹ ಧನ ಕೂಡಲೇ ಬಿಡುಗಡೆ ಮಾಡಿ: ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 25: ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಿ ಹಾಲಿನ ಉತ್ಪನ್ನಗಳ ದರ ಏರಿಕೆಯಿಂದಾಗಿ ಬರುವ ಲಾಭವನ್ನು ಪೂರ್ಣವಾಗಿ ಹೈನುಗಾರರಿಗೆ ನೀಡಬೇಕೆಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಸರ್ಕಾರದ ಹಾದಿ ತಪ್ಪಿದ ನೀತಿಗಳಿಂದಾಗಿ ರಾಜ್ಯದ ಹಾಲು ಉತ್ಪಾದಕರು, ಹಾಲು ಉತ್ಪಾದಕ ಮಂಡಳಿಗಳು ಸಹ ವಿಪರೀತ ಒತ್ತಡದಲ್ಲಿರುವ ಪರಿಣಾಮ 94 ಲಕ್ಷ ಲೀಟರುಗಳಿಗೆ ತಲುಪಿದ್ದ ಹಾಲಿನ ಸಂಗ್ರಹವು ಈ ತಿಂಗಳಲ್ಲಿ 77 ಲಕ್ಷ ಲೀಟರುಗಳಿಗೆ ಕುಸಿದಿದೆ.

ರಾಜ್ಯದಲ್ಲಿ ಸುಮಾರು 25 ಲಕ್ಷ ನೋಂದಾಯಿತ ಹಾಲು ಉತ್ಪಾದಕರಿದ್ದಾರೆ. ಅವರಲ್ಲಿ ಸರಾಸರಿ 9 ಲಕ್ಷ ಜನರಿಗೆ ಸರ್ಕಾರ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಹಾಲನ್ನು ಯಥೇಚ್ಛವಾಗಿ ಉತ್ಪಾದಿಸುತ್ತಿದ್ದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಮುಂತಾದ ಜಿಲ್ಲೆಗಳ ರೈತರೆ ಹಸುಗಳನ್ನು ಸಾಕಲು ನಿರಾಸಕ್ತಿ ತೋರಿಸುತ್ತಿದ್ದಾರೆ.

ನಮ್ಮ ಸರ್ಕಾರ ಇದ್ದಾಗ 2013 ರಿಂದ 2018ರ ಅವಧಿಯಲ್ಲಿ ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ಲೀಟರಿಗೆ 5 ರೂಪಾಯಿಗಳಷ್ಟು ಹೆಚ್ಚಿಸಿದ್ದೆವು. ವರ್ಷಕ್ಕೆ 4700 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ರೈತರ ಖಾತೆಗಳಿಗೆ ವರ್ಗಾಯಿಸಿದ್ದೆವು. ನಮ್ಮ ಸರ್ಕಾರದ ನಿರ್ಧಾರದಿಂದಾಗಿ 2012-13 ರಲ್ಲಿ 45 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವು 2017ರ ವೇಳೆಗೆ 73 ಲಕ್ಷ ಲೀಟರಿಗೆ [28 ಲಕ್ಷ ಲೀಟರು] ಏರಿಕೆಯಾಗಿತ್ತು. ಇದರಿಂದಾಗಿ ರೈತರ ಬದುಕಿನಲ್ಲಿ ಚೈತನ್ಯ ಮೂಡಿತ್ತು. ಆದರೆ ಸರ್ಕಾರ ತನ್ನ ಪಶುಪಾಲಕ ವಿರೋಧಿ ನೀತಿಗಳಿಂದಾಗಿ ಹಾಲು ಉತ್ಪಾದಕರ ಬದುಕನ್ನು ನಿರ್ನಾಮ ಮಾಡಲು ಹೊರಟಿದೆ.

ಸರ್ಕಾರ ಕಾಲ ಕಾಲಕ್ಕೆ ಬಿಡುಗಡೆ ಮಾಡಬೇಕಾದ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡುತ್ತಿಲ್ಲ. ಇತ್ತೀಚಿನ ಪತ್ರಿಕೆಗಳ ವರದಿ ಪ್ರಕಾರ ಅನೇಕ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಕಳೆದ 7-8 ತಿಂಗಳಿಂದ ಪ್ರೋತ್ಸಾಹ ಧನವನ್ನು ನೀಡಿಲ್ಲ. ಇದರ ಬಾಬತ್ತು ನೂರಾರು ಕೋಟಿಗಳಷ್ಟು ಬಾಕಿ ಇದೆ.

ಕಳೆದ 5 ವರ್ಷಗಳಲ್ಲಿ ಜಾನುವಾರುಗಳಿಗೆ ನೀಡುವ ಹಿಂಡಿ, ಬೂಸ ಮುಂತಾದ ಪಶು ಆಹಾರದ ಬೆಲೆಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿವೆ. 2017-18 ರಲ್ಲಿ 49 ಕೆಜಿ ಬೂಸಾದ ಬೆಲೆ 450ರೂ ಇದ್ದದ್ದು ಈಗ 1,300 ರಿಂದ 1,350 ರೂಗಳಿಗೆ ಏರಿಕೆಯಾಗಿದೆ. 30 ಕೆಜಿ ಹಿಂಡಿಯ ಬೆಲೆ 400 ರೂ ಇದ್ದದ್ದು ಈಗ 1400 ಕ್ಕೂ ಹೆಚ್ಚಾಗಿದೆ. ಆದರೆ ಹಾಲಿನ ದರಗಳು ಮಾತ್ರ ಹೆಚ್ಚಾಗಿಲ್ಲ. ಇದರಿಂದಾಗಿ ನಮ್ಮ ರೈತರು ಜಾನುವಾರುಗಳನ್ನು ಸಾಕಣೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

Siddaramaiah demands increase in Annual subsidy/incentive paid to KMF milk producers

ರಾಜ್ಯದಲ್ಲಿ ಪ್ರತಿ ತಿಂಗಳು 3000 ಟನ್ ಹಾಲಿನ ಪುಡಿಯನ್ನು 'ಕ್ಷೀರ ಭಾಗ್ಯ' ಯೋಜನೆಯಡಿ ಶಾಲೆ ಮತ್ತು ಅಂಗನವಾಡಿಗಳ ಮಕ್ಕಳಿಗಾಗಿ ನೀಡಲಾಗುತ್ತಿದೆ. ಆದರೆ ಸರ್ಕಾರ ಕಳೆದ ಕೆಲವು ವರ್ಷಗಳಿಂದ ಈಚೆಗೆ ಹಾಲಿನ ಪುಡಿಗೆ ನೀಡುವ ದರಗಳನ್ನು ಪರಿಷ್ಕರಿಸಿಲ್ಲ. 1 ಕೆಜಿ ಹಾಲಿನ ಪುಡಿ ಉತ್ಪಾದಿಸಲು ಜಿಎಸ್‍ಟಿ ಬಿಟ್ಟು 310ರೂ ತಗಲುತ್ತಿದೆ. ಆದರೆ ಸರ್ಕಾರ ಪ್ರತಿ ಕೆಜಿಗೆ ಕೇವಲ 275ರೂಗಳನ್ನು ಮಾತ್ರ ನೀಡುತ್ತಿದೆ.

ಮಾರುಕಟ್ಟೆಯಲ್ಲಿ ಕೆಎಂಎಫ್ ಒಂದು ಕೆಜಿ ಹಾಲಿನ ಪುಡಿಯನ್ನು 350 ರೂಗೆ ಮಾರಾಟ ಮಾಡುತ್ತಿರುವುದರಿಂದ ಪ್ರತಿ ವರ್ಷ 250 ಕೋಟಿ ರೂ ನಷ್ಟವಾಗಿ ಕೆಎಂಎಫ್ ಒತ್ತಡಕ್ಕೆ ಸಿಲುಕಿದೆ.

ಸರ್ಕಾರ ಕೆಎಂಎಫ್‍ಗೆ ಮಾಡುತ್ತಿರುವ ಅನ್ಯಾಯದಿಂದಾಗಿ ರಾಜ್ಯದ ಜನರು ಮತ್ತು ಬೆಲೆ ಏರಿಕೆಯ ಹೊರೆಯನ್ನು ಅನುಭವಿಸುತ್ತಿದ್ದಾರೆ. ಸರ್ಕಾರ ಹಾಲು, ಮೊಸರಿಗೆ ಲೀಟರಿಗೆ 2 ರೂ ಹೆಚ್ಚು ಮಾಡಿದ್ದಾರೆ. ಆದರೆ ಕಳೆದ ಎರಡು ತಿಂಗಳಲ್ಲಿ ಪ್ರತಿ ಕೆಜಿ ತುಪ್ಪದ ಬೆಲೆಯನ್ನು ಸದ್ದಿಲ್ಲದೆ 140 ರೂ ಹೆಚ್ಚಿಸಿದ್ದಾರೆ.

ಎಲ್ಲ ಸಿಹಿ ಪದಾರ್ಥಗಳು, ಪನ್ನೀರ್ ಮುಂತಾದವುಗಳ ಬೆಲೆಯನ್ನೂ ಸಹ ಶೇ.15 ರಷ್ಟು ಹೆಚ್ಚಿಸಿದ್ದಾರೆ. 10ರೂಗಳಿಗೆ ಮಾರುತ್ತಿದ್ದ ಒಂದು ಸಣ್ಣ ಮೈಸೂರುಪಾಕಿಗೆ 5 ರೂ ಹೆಚ್ಚಿಸಿ ಈಗ 15ರೂಗೆ ಮಾರುತ್ತಿದ್ದಾರೆ. ಆದರೆ ಏರಿಕೆಯಾಗಿರುವ ಹಾಲಿನ ದರವನ್ನು ಹೊರತುಪಡಿಸಿ ಉಳಿದ ಉತ್ಪನ್ನಗಳ ಹೆಚ್ಚುವರಿ ಹಣವನ್ನು ನಮ್ಮ ರೈತರಿಗೆ ವರ್ಗಾಯಿಸದೆ ಮೋಸ ಮಾಡಲಾಗುತ್ತಿದೆ. ತುಪ್ಪ, ಪನ್ನೀರ್, ಸಿಹಿ ತಿಂಡಿಗಳ ಬೆಲೆ ಹೆಚ್ಚಿಸಲಾಗಿದೆ ಎಂಬ ವಿಷಯವನ್ನು ಪ್ರಚಾರ ಮಾಡದೆ ಬಚ್ಚಿಡಲಾಗಿದೆ.

ಜಾನುವಾರುಗಳಿಗೆ ಚರ್ಮಗಂಟು ರೋಗವು ವ್ಯಾಪಕವಾಗಿ ಹರಡುತ್ತಿದೆ. ಅವುಗಳಿಗೆ ಲಸಿಕೆ ಹಾಕಲು ವೈದ್ಯರುಗಳೇ ಇಲ್ಲ. ಸಂಚಾರಿ ಆಸ್ಪತ್ರೆ ಮಾಡುತ್ತೇವೆಂದು ಆಂಬ್ಯುಲೆನ್ಸುಗಳನ್ನು ಖರೀದಿಸಿ ಧೂಳು ತಿನ್ನಿಸಲಾಗುತ್ತಿದೆ. ಖರೀದಿಗೆ ಇರುವ ಉತ್ಸಾಹವು ಅವುಗಳನ್ನು ಬಳಸುವುದರಲ್ಲಿ ಇಲ್ಲವಾಗಿದೆ.

ಆದ್ದರಿಂದ ಈ ಕೂಡಲೆ ಬಾಕಿ ಇರುವ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು. ನಂದಿನಿ ತುಪ್ಪ ಸೇರಿದಂತೆ ಇತರೆ ಉತ್ಪನ್ನಗಳಿಗೆ ಹೆಚ್ಚು ಮಾಡಿರುವ ಬೆಲೆಗಳಿಂದ ಬರುವ ಲಾಭವೆಲ್ಲವನ್ನೂ ರೈತರಿಗೆ ವರ್ಗಾಯಿಸಬೇಕು.

ಕ್ಷೀರಭಾಗ್ಯ ಯೋಜನೆಯಡಿ ಕೆಎಂಎಫ ನಿಂದ ಖರೀದಿಸುತ್ತಿರುವ 36 ಸಾವಿರ ಟನ್ ಹಾಲಿನ ಪುಡಿಗೆ ನೀಡುತ್ತಿರುವ ಬೆಲೆಯನ್ನು ಪರಿಷ್ಕರಿಸಿ ಮಾರುಕಟ್ಟೆ ದರದಲ್ಲಿ ಖರೀದಿಸಿ ಕೆಎಂಎಫ್ ಮತ್ತು ರೈತರನ್ನು ಉಳಿಸಬೇಕು. ಚರ್ಮಗಂಟು ರೋಗ ತಡೆಯಲು ಕೂಡಲೆ ಸಮರೋಪಾದಿಯಲ್ಲಿ ಲಸಿಕೆ ಹಾಕಿ ಮುಗಿಸಬೇಕು. ವಿವಿಧ ಕಾರಣಗಳಿಂದಾಗಿ ಮರಣ ಹೊಂದುತ್ತಿರುವ ಕುರಿ ಮೇಕೆ ಮತ್ತು ದೊಡ್ಡ ಜಾನುವಾರುಗಳಿಗೆ ಪರಿಹಾರ ನೀಡುವಿಕೆಯನ್ನು ತ್ವರಿತಗೊಳಿಸಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕು.

ಜಾನುವಾರು ಹತ್ಯಾ ಕಾಯ್ದೆಯ ನೆಪದಲ್ಲಿ ರೈತರಿಗೆ ವಿಪರೀತ ಕಿರುಕುಳ ನೀಡಲಾಗುತ್ತಿದೆ. ಇದನ್ನು ತಪ್ಪಿಸಬೇಕು. ಆರೆಸ್ಸೆಸ್ಸಿಗೆ ಸರ್ಕಾರಿ ಜಮೀನುಗಳನ್ನು ಮನಸೋ ಇಚ್ಛೆ ನೀಡುತ್ತಿದ್ದೀರಿ. ಆದರೆ ನಮ್ಮ ರೈತರ ಜಾನುವಾರುಗಳು ಮೇಯಲು ಜಾಗ ಇಲ್ಲದಂತಾಗಿದೆ. ಇದನ್ನು ಕೂಡಲೆ ನಿಲ್ಲಿಸಿ ರಾಜ್ಯದಲ್ಲಿರುವ ಎಲ್ಲ ಮೇವಿನ ಕ್ಷೇತ್ರಗಳನ್ನು ಉಳಿಸಬೇಕು.

ಸರ್ಕಾರ ಕೂಡಲೆ ಮಧ್ಯ ಪ್ರವೇಶಿಸಿ ರೈತರು ಮತ್ತು ಗ್ರಾಹಕರ ಇಬ್ಬರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಪಶುಭಾಗ್ಯ ಯೋಜನೆಯನ್ನು ಸಶಕ್ತಗೊಳಿಸಬೇಕು. ಸರ್ಕಾರಿ ನೌಕರರಿಂದ 11,000 ರೂಪಾಯಿಗಳನ್ನು ದೋಚಲು ಹೊರಟಿರುವ ಯೋಜನೆಯನ್ನು ಕೂಡಲೆ ನಿಲ್ಲಿಸಬೇಕು ಎಂದರು.

ಸಿದ್ದರಾಮಯ್ಯ
Know all about
ಸಿದ್ದರಾಮಯ್ಯ

s{document2}

English summary
Siddaramaiah demands increase in Annual subsidy/incentive paid to Karnataka Milk Federation(KMF) milk producers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X