ವೈರಲ್ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದರು.
ಬೆಂಗಳೂರು, ಮಾರ್ಚ್ 03; 'ಪ್ರತಿಯೊಬ್ಬರಿಗೂ ಐನೂರು ರೂಪಾಯಿ ಕೊಟ್ಟು ಕರೆದುಕೊಂಡು ಬರಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ, ಅಲ್ಲದೇ ಕರ್ನಾಟಕ ಬಿಜೆಪಿ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಶುಕ್ರವಾರ ಬೆಳಗಾವಿಯಲ್ಲಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿದರು. "ಬಿಜೆಪಿಯವರು 500 ರೂಪಾಯಿ ಕೊಟ್ಟು rallyಗಳಿಗೆ ಜನ ಕರೆದುಕೊಂಡು ಬರುತ್ತಾರೆ ಎಂದು ನಾನು ಹೇಳಿದ್ದನ್ನು ಬಿಜೆಪಿಯವರು ತಿರುಚಿ, ಅವರು ಮಾಡಿರುವ ಪಾಪಕೃತ್ಯವನ್ನು ನನ್ನ ತಲೆಗೆ ಕಟ್ಟುವ ಪ್ರಯತ್ನ ಮಾಡಿದ್ದಾರೆ. ಸುಳ್ಳು, ಮೋಸ ಮತ್ತು ದ್ರೋಹ ಬಿಜೆಪಿಯ ಡಿಎನ್‌ಎಯಲ್ಲಿದೆ" ಎಂದು ದೂರಿದರು.

"ನನ್ನ ಹೇಳಿಕೆಯ ವಿಡಿಯೋಗಳನ್ನು ತಿರುಚಿ ಈ ರೀತಿ ಅಪಪ್ರಚಾರ ಮಾಡುತ್ತಿರುವುದು ಇದು ಮೊದಲ ಬಾರಿ ಅಲ್ಲ, ಹಿಂದೆ ಕೆಲವು ಬಾರಿ ನಡೆದಿದೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಇನ್ನು ಹಲವು ಬಾರಿ ನಡೆಯಬಹುದು. ಇಂತಹ ಸುಳ್ಳುಗಳನ್ನು ಸೃಷ್ಟಿಸಲು ಬಿಜೆಪಿ ಯವರು ದೊಡ್ಡ ದೊಡ್ಡ ಫ್ಯಾಕ್ಟರಿಗಳನ್ನೇ ತೆಗೆದಿದ್ದಾರೆ" ಎಂದು ಸಿದ್ದರಾಮಯ್ಯ ಹೇಳಿದ್ದು, ಇದನ್ನು ಟ್ವೀಟ್ ಕೂಡಾ ಮಾಡಿದ್ದಾರೆ.
ಸಿದ್ದರಾಮಯ್ಯ, "ಇಂತಹ ನಕಲಿ ವಿಡಿಯೋಗಳಿಗೆ ಬಲಿಬೀಳದೆ ಜನರು ಎಚ್ಚರಿಕೆಯಿಂದ ಇರಬೇಕು ಮತ್ತು ನಕಲಿ ವಿಡಿಯೋಗಳನ್ನು ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಪುಂಡರನ್ನು ನಮ್ಮ ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರು ಹುಡುಕಿ ಪೊಲೀಸರಿಗೆ ದೂರು ನೀಡಬೇಕು" ಎಂದು ಜನರಿಗೆ ಕರೆ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಸಿದ್ದರಾಮಯ್ಯ "ಈ ರೀತಿಯ ನಕಲಿ ವಿಡಿಯೋ-ಅಡಿಯೋ ಮೂಲಕ ಅಪಪ್ರಚಾರ ಮಾಡಿ ನನ್ನ ತೇಜೋವಧೆ ಮಾಡಬಹುದು ಎಂದು ಭಾವಿಸಿದ್ದರೆ ಅದು ಭ್ರಮೆ. ನಲ್ವತ್ತು ವರ್ಷಗಳ ನನ್ನ ರಾಜಕಾರಣವನ್ನು ರಾಜ್ಯದ ಜನ ನೋಡಿದ್ದಾರೆ. ಸರಿ-ತಪ್ಪು, ಸತ್ಯ-ಸುಳ್ಳುಗಳನ್ನು ಅರ್ಥಮಾಡಿಕೊಳ್ಳುವಷ್ಟು ಅವರು ಪ್ರಜ್ಞಾವಂತರಿದ್ದಾರೆ" ಎಂದು ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.
"ಹಣ, ಹೆಂಡ ಹಂಚಿ ಕಾರ್ಯಕ್ರಮಕ್ಕೆ ಜನ ಕರೆತಂದ ಕೂಡಲೇ ಅವೆಲ್ಲ ಮತಗಳಾಗುವುದಿಲ್ಲ, ಚುನಾವಣೆ ಗೆಲ್ಲಲೂ ಆಗಲ್ಲ. ಪ್ರೀತಿ-ವಿಶ್ವಾಸದಿಂದ ಬರುವ 10 ಜನ ಸೇರಿದರೂ ಆ ಹತ್ತೇ ಜನಕ್ಕೆ ಭಾಷಣ ಮಾಡುವವನು ನಾನು. ಇದು ನಾನು ರಾಜಕೀಯದಲ್ಲಿ ರೂಢಿಸಿಕೊಂಡು ಬಂದಿರುವ ಅಭ್ಯಾಸ" ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಏನಿದು ವಿಡಿಯೋ ವಿವಾದ; ಬೆಳಗಾವಿ ಜಿಲ್ಲೆಯ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಾಳೇಕುಂದ್ರಿಯಲ್ಲಿ ಬುಧವಾರ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ನಡೆಯಿತು. ಈಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ 'ಪ್ರತಿಯೊಬ್ಬರಿಗೂ 500 ರೂ. ಕೊಟ್ಟು ಕರೆದುಕೊಂಡು ಬರಬೇಕು' ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. "ಕಾಂಗ್ರೆಸ್‌ನವರು ಮೊದಲಿನಿಂದಲೂ ಅದನ್ನೇ ಮಾಡಿಕೊಂಡು ಬಂದಿದ್ದಾರೆ" ಎಂದು ತಿರುಗೇಟು ನೀಡಿದ್ದರು. ಶುಕ್ರವಾರ ಸಿದ್ದರಾಮಯ್ಯ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ಸತೀಶ್ ಜಾರಕಿಹೊಳಿ ಹೇಳಿಕೆ; ವೈರಲ್ ವಿಡಿಯೋ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ, "ಸಿದ್ದರಾಮಯ್ಯ ಈ ನಾಡು ಕಂಡ ಅಪರೂಪದ ನಾಯಕ. ಭ್ರಷ್ಟಾಚಾರ, ಅನ್ಯಾಯದ ವಿರುದ್ಧ ಹೋರಾಡಿದ ಧೀಮಂತ ನಾಯಕ, ಅವರ ಬಾಯಿಯಿಂದ ಇಂತಹ ಹೇಳಿಕೆ ಬರಲು ಸಾಧ್ಯವೇ ಇಲ್ಲ. ಅನಾವಶ್ಯಕವಾಗಿ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಈ ಮೂಲಕ ಜನರ ಗಮನ ಬೇರೆ ಕಡೆ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ" ಎಂದು ಹೇಳಿದ್ದರು.












Click it and Unblock the Notifications