ಬಿಬಿಎಂಪಿ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಕಸರತ್ತು!
ಬೆಂಗಳೂರು, ಜೂ. 11 : ಸಚಿವ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ದೊರೆಯಲಿದೆ ಎಂದು ಕಾದು ಕುಳಿತವರಿಗೆ ನಿರಾಸೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ತನಕ ಸಂಪುಟ ವಿಸ್ತರಣೆಯಾಗುವುದಿಲ್ಲ ಎಂಬುದು ಖಚಿತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಿಗೈಯಲ್ಲಿ ದೆಹಲಿಯಿಂದ ವಾಪಸ್ ಆಗಿದ್ದಾರೆ.
ಎರಡು ದಿನಗಳಿಂದ ದೆಹಲಿ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಅಧಿಕೃತವಾಗಿ ಮಾತುಕತೆ ನಡೆಸದೇ ವಾಪಸ್ ಬಂದಿದ್ದಾರೆ. ಬಿಬಿಎಂಪಿ ಚುನಾವಣೆ ಮುಗಿಯುವ ತನಕ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳದಿರಲು ಸಿಎಂ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. [ಸಿದ್ದರಾಮಯ್ಯ ಸಂಪುಟದ ಸಚಿವರ ಅಂಕಪಟ್ಟಿ]
ಸಚಿವ ಸಂಪುಟ ವಿಸ್ತರಣೆಗೆ ಸೋನಿಯಾ ಗಾಂಧಿ ಅವರ ಒಪ್ಪಿಗೆ ಸಿಗಲಿದೆ ಎಂಬ ನಿರೀಕ್ಷೆ ಹೊತ್ತು, ಹಲವಾರು ಶಾಸಕರು ದೆಹಲಿಗೆ ತೆರಳಿದ್ದರು. ಆದರೆ, ಈ ಬಗ್ಗೆ ಚರ್ಚೆ ನಡೆಯದಿರುವುದು ಅವರಿಗೆ ನಿರಾಸೆ ಮೂಡಿಸಿದೆ. ಬುಧವಾರ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಜೊತೆ ಚರ್ಚೆ ನಡೆಸಿ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. [ಬಿಬಿಎಂಪಿ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ?]
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿನಲ್ಲಿ ಜೂನ್ ಅಂತ್ಯದೊಳಗೆ ಸಮಾವೇಶ ನಡೆಸಲು ಕಾಂಗ್ರೆಸ್ ನಿರ್ಧರಿಸಿದ್ದು, ಸಮಾವೇಶಕ್ಕೆ ಆಗಮಿಸುವಂತೆ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಂಪುಟ ವಿಸ್ತರಣೆ ಕಸರತ್ತಿನ ವಿವರ ಚಿತ್ರಗಳಲ್ಲಿ

ಹಸಿರು ನಿಶಾನೆ ದೊರೆಯುವ ಸೂಚನೆ ಇತ್ತು
ದೆಹಲಿ ಭೇಟಿ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿಕೆ ನೀಡಿ ಸೋಮವಾರ ದೆಹಲಿ ವಿಮಾನ ಹತ್ತಿದ್ದರು. ಆದ್ದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ಹೋಗಿದ್ದರು. ಈ ಬಾರಿ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ದೊರೆಯುವ ಸೂಚನೆ ಸಿಕ್ಕಿತ್ತು.

ಸೋನಿಯಾ, ರಾಹುಲ್ ಭೇಟಿಯಿಲ್ಲ
ಕಾಂಗ್ರೆಸ್ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದರು. ಈ ವೇಳೆ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ಅಧಿಕೃತವಾಗಿ ಸೋನಿಯಾ ಗಾಂಧಿ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿಲ್ಲ.

ಅಮಹಮ್ ಪಟೇಲ್, ಸಿಂಗ್ ಭೇಟಿ
ಬುಧವಾರ ವಿವಿಧ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರು ಮಧ್ಯಾಹ್ನ ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್, ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರೊಂದಿಗೆ ಮಾತ್ರ ಸಮಾಲೋಚನೆ ನಡೆಸಿ ವಾಪಸ್ ಆಗಿದ್ದಾರೆ.

ಬಿಬಿಎಂಪಿ ಚುನಾವಣೆ ಬಳಿಕ ಪ್ರಕ್ರಿಯೆ
ಅಹಮದ್ ಪಟೇಲ್ ಭೇಟಿಯ ವೇಳೆ ಸಿದ್ದರಾಮಯ್ಯ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಂತರ ಸಂಪುಟ ವಿಸ್ತರಣೆಯನ್ನು ಕೈಗೆತ್ತಿಕೊಳ್ಳಬಹುದು ಎಂದು ಚರ್ಚೆ ನಡೆಸಿದ್ದಾರೆ. ಇದಕ್ಕೆ ಅವರು ಸಹ ಒಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಲಭ್ಯವಾಗಿದೆ.

ಸಮಾವೇಶಕ್ಕೆ ಸೋನಿಯಾಗೆ ಆಹ್ವಾನ
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಲು ಜೂನ್ ಅಂತ್ಯದಲ್ಲಿ ಬೆಂಗಳೂರಿನಲ್ಲಿ ಸಮಾವೇಶ ನಡೆಸಲಾಗುವುದು. ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಸೋನಿಯಾ ಗಾಂಧಿ ಅವರಿಗೆ ಆಹ್ವಾ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications