Siddaramaiah Biopic: ಸಿಎಂ ಸಿದ್ದರಾಮಯ್ಯ ಬಯೋಪಿಕ್ ಸಿದ್ಧತೆ ಅಂತಿಮ, ಸಿದ್ದು ಪಾತ್ರದಲ್ಲಿ ಇವರೇ ಕನ್ಫರ್ಮ್?
ಬೆಂಗಳೂರು, ಆಗಸ್ಟ್. 01: ರಾಜ್ಯದ 24 ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರ ತೆರೆಯ ಮೇಲೆ ಬರಲಿದೆ ಎಂಬ ವಿಷಯ ವಿಧಾನಸಭಾ ಚುನಾವಣೆ ಆರಂಭದಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪೋಸ್ಟರ್ ಕೂಡ ರಾಮನವಮಿಗೆ ರಿಲೀಸ್ ಆಗಿತ್ತು. ಸಿದ್ದರಾಮಯ್ಯ ಬಯೋಪಿಕ್‌ಗೆ ಸಂಬಂಧಿಸಿದಂತೆ ಮತ್ತೊಂದು ಮಾಹಿತಿ ಹೊರಬಂದಿದೆ.
ಕಳೆದ ಏಳು ತಿಂಗಳಿನಿಂದ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಚಿತ್ರಕ್ಕೆ 'ಲೀಡರ್ ರಾಮಯ್ಯ' ಎಂಬ ಹೆಸರು ಇಡಲಾಗಿದೆ. ಜೊತೆಗೆ (ಜನರಿಂದ ಬೆಳೆದ ರಾಜ) A King Raised by the People ಎಂಬ ಟ್ಯಾಗ್‌ಲೈನ್ ಕೂಡ ಸೇರಿಸಲಾಗಿದೆ. ಚಿತ್ರವನ್ನು ಗೌರಿಬಿದನೂರಿನ ಸತ್ಯರತ್ನಂ ನಿರ್ದೇಶನ ಮಾಡಲಿದ್ದು, ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂಬ ವಿಷಯ ಹೊರ ಬಂದಿದೆ.

ಸಿನಿಮಾವನ್ನು ಗಂಗಾವತಿ ಮೂಲದ ಹಯಾದ್ ಪೀರ್ ಚಿತ್ರ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಅಂತಿಮ ಹಂತದ ಸಿದ್ಧತೆಯಲ್ಲಿದೆ. ಜೊತೆಗೆ ಆಗಸ್ಟ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಯೋಜನೆಯಲ್ಲಿದೆ. ಹಾಗಾದರೆ ಸಿದ್ದರಾಮಯ್ಯ ಅವರ ಪಾತ್ರದಲ್ಲಿ ಯಾರು ಬರಬಹುದು ಎಂಬ ಕುತೂಹಲಕ್ಕೆ ಚಿತ್ರ ತಂಡ ಸುಳಿವು ನೀಡಿದ್ದು, ಬಹುಭಾಷ ನಟ ವಿಜಯ್ ಸೇತುಪತಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಸಿನಿಮಾ ತಂಡದ ಮಾಹಿತಿ ಪ್ರಕಾರ, ನಟ ವಿಜಯ್ ಸೇತುಪತಿ ಈ ಸಿನಿಮಾದ ಸ್ಕ್ರಿಪ್ಟ್ ಓದಿದ್ದು, ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಸದ್ಯಕ್ಕೆ ಅವರು ಬ್ಯುಸಿ ಇರುವ ಕಾರಣ ಅವರ ಡೇಟ್ಸ್ ಇನ್ನು ಫೈನಲ್ ಆಗಿಲ್ಲ ಎನ್ನಲಾಗಿದೆ. ಅವರ ಡೇಟ್ಸ್ ಪಡೆಯಲು ಮತ್ತು ಕೆಲಸ ಆರಂಭಿಸಲು ಪ್ರೊಡಕ್ಷನ್ ಹೌಸ್ ಸಿದ್ಧವಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸುವುದು ಪಕ್ಕವಾಗಿದೆ.
ಇನ್ನು, ಸಿನಿಮಾ ಎರಡು ಭಾಗಗಳಲ್ಲಿ ಬರಲಿದ್ದು, ಸಿದ್ದರಾಮಯ್ಯ ಅವರು ವಕೀಲರಾಗಿದ್ದ ಸಮಯದ ಪಾತ್ರವನ್ನು ವಿಜಯ್ ಸೇತುಪತಿ ಮಾಡಲಿದ್ದಾರೆ. ಹೀಗಾಗಿ ಬಯೋಪಿಕ್‌ನಲ್ಲಿ ಅವರು ಕಾಣಿಸಿಕೊಳ್ಳುವುದು ಚಿತ್ರದ ಕೊನೆಯ 20 ರಿಂದ 30 ನಿಮಿಷಗಳು ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಬಾಲ್ಯ, ಯವ್ವನದ ದಿನಗಳನ್ನು ಬೇರೆ ನಟರು ನಟಿಸಲಿದ್ದಾರೆ.

ಸಿನಿಮಾ ನಿರ್ಮಾಣ ಸಂಸ್ಥೆ ಮೊದಲು ಭಾಗ 1 ಅನ್ನು ಮುಗಿಸಲಿದ್ದಾರೆ. ಈ ಭಾಗದಲ್ಲಿ ಸಿದ್ದರಾಮಯ್ಯ ಅವರ ಬಾಲ್ಯದ ದಿನಗಳು ಕಾಲೇಜು ದಿನಗಳು, ವಕೀಲರಾಗಿದ್ದ ಸಮಯ, ನಂಜುಂಡಸ್ವಾಮಿ ಅವರ ಜೊತೆಗಿನ ಹೋರಾಟಗಳು ಕಾಣಿಸಿಕೊಳ್ಳಲಿದೆ. ಸಿದ್ದರಾಮಯ್ಯರ ಯವ್ವನದ ಪಾತ್ರ ಮಾಡಲು ನಟನ ಹುಡುಕಾಟ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ.
ನಟರ ಆಯ್ಕೆ, ನಾಯಕಿಯರ ಆಯ್ಕೆ ನಂತರ ಅವರ ಹೆಸರನ್ನು ಘೋಷಿಸಲಾಗುತ್ತದೆ. ಸಿನಿಮಾದ ಭಾಗವಾಗಿ ಕನ್ನಡದಿಂದ ಕೆಲವು ಸೂಪರ್‌ಸ್ಟಾರ್‌ಗಳನ್ನು ಕರೆತರುವುದನ್ನು ನಿರ್ಮಾಪಕರು ಖಚಿತಪಡಿಸಿದ್ದಾರೆ. ಹೀಗಾಗಿ ವಿವಿಧ ನಟರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಲೀಡರ್ ರಾಮಯ್ಯಗೆ ಶಶಾಂಕ್ ಶೇಷಗಿರಿ ಸಂಗೀತ ನೀಡಲಿದ್ದಾರೆ. ಮೊದಲ ಭಾಗದಲ್ಲಿ 3 ರಿಂದ 4 ಹಾಡುಗಳಿರಲಿದ್ದು, ಈಗಾಗಲೇ ಸಂಗೀತ ನಿರ್ದೇಶಕರು ಭರ್ಜರಿ ತಯಾರಿ ಆರಂಭಿಸಿದ್ದಾರೆ.
ಶಶಾಂಕ್ ಶೇಷಗಿರಿ ಈಗಾಗಲೇ ಗಾಯಕ ಹರಿಚರಣ್ ಅವರಿಂದ ಒಂದು ಹಾಡನ್ನು ರೆಕಾರ್ಡ್ ಮಾಡಿದ್ದಾರೆ. ಇದು ಶಶಾಂಕ್ ಶೇಷಗಿರಿ ಅವರ ನಾಲ್ಕನೇ ಸಿನಿಮಾ ಆಗಿದ್ದು, ಅವರು ಈ ಹಿಂದೆ ಉಪ್ಪು ಹುಳಿ ಖಾರ, ರಾಂಧವ ಮತ್ತು ಇತ್ತೀಚಿಗೆ ನಟ ಶ್ರೀನಗರ ಕಿಟ್ಟಿ ಅಭಿನಯದ 'ಗೌಳಿ'ಯಲ್ಲಿ ಕೆಲಸ ಮಾಡಿದ್ದಾರೆ. ಸಿನಿಮಾಗೆ ಗಂಗಾವತಿ ಮೂಲದ ಹಯಾದ್ ಪೀರ್ ಮತ್ತು ಚನ್ನಪ್ಪ ಹಾಲಳ್ಳಿ ಬಂಡವಾಳ ಹೂಡಿದ್ದಾರೆ.












Click it and Unblock the Notifications