Siddaramaiah: ಮೇಕೆದಾಟು ಯೋಜನೆಗೆ ಯಾಕೆ ಅನುಮತಿ ನೀಡ್ತಿಲ್ಲ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಸರಣಿ ಪ್ರಶ್ನೆ
ರಾಜ್ಯ ಸಂಕಷ್ಟದಲ್ಲಿದ್ದಾಗ ಮೋದಿ ಯಾಕೆ ಬರಲಿಲ್ಲ ಎಂದು ಸಿದ್ದರಾಮಯ್ಯ ಸರಣಿ ಪ್ರಶ್ನೆ ಮಾಡಿದ್ದಾರೆ. ಮೇಕೆದಾಟು ಯೋಜನೆಗೆ ಅನುಮತಿ ನೀಡದೆ ಬೆಂಗಳೂರಿಗೆ ಅನ್ಯಾಯ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬೆಂಗಳೂರು ಮತ್ತು ಕರ್ನಾಟಕದ ಸಮಸ್ಯೆಗಳ ಪಟ್ಟಿಯನ್ನು ಮುಂದಿಟ್ಟು ಉತ್ತರ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಬೆಂಗಳೂರು ನಗರ ಉದ್ಯಮಶೀಲರ ಆಸಕ್ತಿಯ ನಂಬರ್ ಒನ್ ತಾಣವಾಗಿತ್ತು. ಬಿಜೆಪಿ ಸರ್ಕಾರದ ಕಾಲದಲ್ಲಿ ಬೆಂಗಳೂರು ಉದ್ಯಮಶೀಲರ ಆಸಕ್ತಿಯ ನಗರಗಳ ಪಟ್ಟಿಯಲ್ಲಿ ಹದಿನೇಳನೇ ಸ್ಥಾನಕ್ಕೆ ಕುಸಿದಿದೆ, ಇದಕ್ಕೆ ಯಾರು ಹೊಣೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಕೇವಲ ಗುಂಡಿಬಿದ್ದ ರಸ್ತೆಗಳಿಂದಾಗಿ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿ ಕೇವಲ ರಸ್ತೆ ಗುಂಡಿಮುಚ್ಚಲು 7,121 ಕೋಟಿ ರುಪಾಯಿ ಖರ್ಷು ಮಾಡಿದರೂ, ಇನ್ನೂ ನೂರಾರು ಹಳೆಯ ಗುಂಡಿಗಳು ಉಳಿದಿವೆ, ಹೊಸ ಗುಂಡಿಗಳು ತಯಾರಾಗುತ್ತಿವೆ.
ಶೇಕಡಾ 48ರಷ್ಟು ವಾಹನದಟ್ಟಣೆಯ ಪ್ರಮಾಣದಿಂದಾಗಿ ಬೆಂಗಳೂರು ನಗರ ದೇಶದಲ್ಲಿ ಎರಡನೇ ಅತ್ಯಂತ ದಟ್ಟಣೆಯ ನಗರ ಎಂಬ ಕುಖ್ಯಾತಿಗೆ ಒಳಪಟ್ಟಿದೆ. ಇದರಿಂದಾಗಿ ನಗರವಾಸಿಗಳು ಮನೆಗಿಂತ ಹೆಚ್ಚಿನ ಸಮಯ ರಸ್ತೆಗಳಲ್ಲಿ ಕಳೆಯುವಂತಾಗಿದೆ ಇದಕ್ಕೆ ಯಾರು ಹೊಣೆ ಎಂದು ಕೇಳಿದ್ದಾರೆ.
ಬೆಂಗಳೂರಿನ ಸಮಸ್ಯೆ ಬಗ್ಗೆ ಪ್ರಶ್ನೆ
ಎನ್‌ಸಿಆರ್ ಬಿ ವರದಿ ಪ್ರಕಾರ ಮೆಟ್ರೋಪಾಲಿಟನ್ ನಗರಗಳಲ್ಲಿ ನಡೆಯುವ ಅಪರಾಧಗಳ ಪೈಕಿ 72% ಕಳ್ಳತನಗಳು ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಕಾರಣ ಬೆಂಗಳೂರು ಈಗ ಅಪರಾಧಗಳ ತಾಣವಾಗಿದೆ. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಬೆಂಗಳೂರು ನಗರದ ಉದ್ಯಾನಗಳ ನಗರ, ಸಿಲಿಕಾನ್ ಸಿಟಿ, ಐಟಿ-ಬಿಟಿ ರಾಜಧಾನಿ, ಸ್ಟಾರ್ಟ್‌ಅಪ್ ರಾಜಧಾನಿ ಎಂದೆಲ್ಲ ಖ್ಯಾತಿ ಗಳಿಸಿತ್ತು. ಬಿಜೆಪಿ ಸರ್ಕಾರದ ಕಾಲದಲ್ಲಿ ಗುಂಡಿಬಿದ್ದ ರಸ್ತೆಗಳು, ನೆರೆ ನೀರಿನಲ್ಲಿ ಮುಳುಗುವ ಮನೆಗಳು, ಅಪರಾಧಿಗಳ ಜಗತ್ತಿನ ರಾಜಧಾನಿ ಎಂದ ಕುಖ್ಯಾತಿ ಗಳಿಸಿದೆ ಇದಕ್ಕೆ ಉತ್ತರ ನೀಡಿ ಎಂದು ಕೇಳಿದ್ದಾರೆ.
ಅಪರಾಧಗಳ ಸಂಖ್ಯೆಗಳ ಹೆಚ್ಚಳ, ಕುಸಿದುಬಿದ್ದಿರುವ ಮೂಲ ಸೌಕರ್ಯ ವ್ಯವಸ್ಥೆ ಮತ್ತು ಗುಂಡಿಬಿದ್ದ ರಸ್ತೆಗಳಿಂದಾಗಿ ಜಾಗತಿಕ ವಾಸಯೋಗ್ಯ ಸೂಚ್ಯಂಕದಲ್ಲಿ ಬೆಂಗಳೂರು ಕನಿಷ್ಠ ಶ್ರೇಣಿಗೆ ತಲುಪಿದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ರೂಪಿಸಲಾಗಿರುವ ಮೇಕೆದಾಟು ಯೋಜನೆಗೆ ಅನುಮತಿ ನೀಡದೆ ಇರುವ ಕಾರಣದಿಂದಾಗಿ ನಗರದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗುತ್ತಿದೆ. ನಗರದ ಜನ ಕುಡಿಯುವ ನೀರಿಗಾಗಿ ಖಾಸಗಿ ಬೋರ್ ವೆಲ್ ಮತ್ತು ಟ್ಯಾಂಕರ್ ನೀರನ್ನು ಬಳಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಮೇಲಿನ ದೌರ್ಜನ್ಯ ಪ್ರಮಾಣ 2021ರಲ್ಲಿ ಶೇಕಡಾ 18ರಷ್ಟು ಹೆಚ್ಚಾಗಿದೆ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ 1493% ರಷ್ಟು ಹೆಚ್ಚಾಗಿದೆ. 2021ರಲ್ಲಿ ಇನ್ಮೋರಲ್ ಟ್ರಾಫಿಕಿಂಗ್ ಶೇಕಡಾ 61 ರಷ್ಟು ಹೆಚ್ಚಾಗಿದೆ.
ಭ್ರಷ್ಟಾಚಾರ ಮಿತಿ ಮೀರಿದೆ
ಪ್ರಧಾನ ಮಂತ್ರಿಯವರು ಕರ್ನಾಟಕದಲ್ಲಿಯೇ ಠಿಕಾಣಿ ಹೂಡಿ ಬಾಯ್ತುಂಬಾ ಮಾತನಾಡುತ್ತಿದ್ದಾರೆ. ಆದರೆ ಇದೇ ಕರ್ನಾಟಕದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರು ಪ್ರಧಾನಿಗಳಿಗೇ ಪತ್ರ ಬರೆಯುವಷ್ಟು ಇಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದೆ, ಇದಕ್ಕೆ ಉತ್ತರ ಕೊಡಿ ಎಂದು ನರೇಂದ್ರ ಮೋದಿಯವರಿಗೆ ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ 25 ಲಕ್ಷ ನಿರುದ್ಯೋಗಿಗಳಿದ್ದಾರೆ. 2.52 ಲಕ್ಷ ಸರ್ಕಾರಿ ಹುದ್ದೆಗಳು ಭರ್ಥಿಯಾಗದೆ ಖಾಲಿ ಬಿದ್ದಿವೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ 53,700 ಹುದ್ದೆಗಳ ಭರ್ತಿಯಾಗಿಲ್ಲ. ಸಣ್ಣ ಕೈಗಾರಿಕೆಗಳಲ್ಲಿ ಉದ್ಯೋಗ ನಷ್ಟದಿಂದ 8.,190 ಕುಟುಂಬಗಳ ಬದುಕು ಬೀದಿಗೆ ಬಿದ್ದಿತ್ತು. ಇವರ ಕಷ್ಟ ಕೇಳಲು ನೀವು ಯಾಕೆ ಬಂದಿರಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಕಳೆದ ನಾಲ್ಕು ಬಜೆಟ್‌ಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಶೇಕಡಾ 1.97ಕ್ಕಿಂತ ಮೇಲೆ ಏರಿಲ್ಲ. 2022ರ ಸಿಎಜಿ ವರದಿ ಪ್ರಕಾರ 2022ರಲ್ಲಿ 1.62 ಲಕ್ಷ ವಿದ್ಯಾರ್ಥಿಗಳು ಶಾಲೆಗಳನ್ನು ತ್ಯಜಿಸಿದ್ದಾರೆ. 2020-21 ಮತ್ತು 2021-22ರ ಅವಧಿಯಲ್ಲಿ 1,965 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಶಿಕ್ಷಣವಂಚಿತ ಮಕ್ಕಳ ಭವಿಷ್ಯ ಹಾಳಾಗುವಾಗ ನ್ಯಾಯ ಕೊಡಿಸಲು ನೀವು ಯಾಕೆ ಬಂದಿರಲಿಲ್ಲ? ಎಂದು ಕೇಳಿದ್ದಾರೆ.












Click it and Unblock the Notifications