ಬೆಳೆ ಪರಿಹಾರದ ಮೊದಲ ಕಂತು ಬಿಡುಗಡೆ: ಗಣರಾಜ್ಯೋತ್ಸವದ ಸಂದೇಶದಲ್ಲಿ ಸಿಎಂ ಘೋಷಣೆ
ಬೆಂಗಳೂರು, ಜನವರಿ 26: ರಾಜ್ಯ ಸರ್ಕಾರವೇ ಬರದಿಂದ ಬಾಧಿತರಾದವರಿಗೆ ಬೆಳೆ ಪರಿಹಾರವಾಗಿ 2000 ರೂ.ಗಳ ವರೆಗಿನ ತಾತ್ಕಾಲಿಕ ಪರಿಹಾರದ ಘೋಷಣೆಯನ್ನು ಮಾಡಿದ್ದು, ಈವರೆಗೆ 550 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ವಾರದೊಳಗೆ ಮೊದಲ ಕಂತಿನ ಪರಿಹಾರ ರೈತರಿಗೆ ತಲುಪಿಸಲಾಗುವ ವ್ಯವಸ್ಥೆಯಾಗುತ್ತಿದೆ ಎಂದು ಗಣರಾಜ್ಯೋತ್ಸವದ ಸಂದೇಶದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
75ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ. ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದ್ದೊಂದು ಸಂವಿಧಾನವನ್ನು ನಮಗೆ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪುಮಾಡಿಕೊಂಡು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಭಾರತವು ತನ್ನನ್ನು ತಾನು ಆಳಿಕೊಳ್ಳಲು ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು 2023ರ ಜನವರಿ 26ಕ್ಕೆ 75 ವರ್ಷಗಳು ತುಂಬುತ್ತಿವೆ. ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ ಎಲ್ಲರ ನಡುವೆ ಭಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ.
'ಸಂವಿಧಾನವೇ ನಮ್ಮ ಧರ್ಮ ಮತ್ತು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನಮ್ಮ ರಾಜಧರ್ಮ' ಎಂದು ತ್ರಿಕರಣಪೂರ್ವಕವಾಗಿ ನಂಬಿಕೊಂಡು ಬಂದಿರುವ ನಮ್ಮ ಸರ್ಕಾರ, ಜಾತಿ-ಧರ್ಮಗಳ ಭೇದವಿಲ್ಲದೆ ಸಂಪತ್ತು, ಅವಕಾಶ ಮತ್ತು ಅಧಿಕಾರದಲ್ಲಿ ಸರ್ವರಿಗೂ ಸಮಪಾಲು ಸಿಗಬೇಕೆಂಬ ಸರ್ವೋದಯದ ಉದಾತ್ತ ಉದ್ದೇಶವನ್ನು ಹೊಂದಿದೆ. ಸಂವಿಧಾನ ಎನ್ನುವುದು ಪ್ರಜಾಪ್ರಭುತ್ವದ ಆತ್ಮ. ಸಂವಿಧಾನ ಇಲ್ಲದ ಪ್ರಜಾಪ್ರಭುತ್ವ, ಆತ್ಮ ಇಲ್ಲದ ಜೀವ. ಇತ್ತೀಚೆಗೆ ಸಂವಿಧಾನ ಬದಲಾವಣೆಯ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ. ಇದನ್ನು ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಈ ಖಂಡನೆಗೆ ನಾನೂ ದನಿಗೂಡಿಸುತ್ತೇನೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ಗೌರವ ಮತ್ತು ಅದರ ಆಶಯಗಳ ಬಗ್ಗೆ ಬದ್ಧತೆ ಇರಲೇಬೇಕು. ಸಂವಿಧಾನೇತರ ಶಕ್ತಿಗಳಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗ ಇಲ್ಲ. ಸಂವಿಧಾನದ ಬಗ್ಗೆ ಭಿನ್ನಾಭಿಪ್ರಾಯ ಇಟ್ಟುಕೊಂಡು ಸಂಸದೀಯ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು. ಇದು ಸಂವಿಧಾನಕ್ಕೆ ಮಾಡುವ ಅಪಚಾರ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಕೂಡಾ ಹೌದು. ಇಂತಹವರನ್ನು ತಿರಸ್ಕರಿಸುವುದು ಪ್ರತಿಯೊಬ್ಬ ಪ್ರಜೆಯ ಧರ್ಮವಾಗಿದೆ.
ಜಾತ್ಯತೀತತೆ ಸಂವಿಧಾನದ ಮುಖ್ಯ ಆಶಯಗಳಲ್ಲಿ ಒಂದು. ಇದು ಅನ್ಯಧರ್ಮವನ್ನು ದ್ವೇಷಿಸದೆ ಸ್ವಂತ ಧರ್ಮವನ್ನು ಪ್ರೀತಿಸುವ ಉದಾತ್ತ ಮಾನವೀಯ ಗುಣ. ಜಾತಿ,ಧರ್ಮವನ್ನು ಮೀರಿ ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಕವಿವಾಣಿ ಕೂಡಾ ಸಂವಿಧಾನದ ಈ ಆಶಯವನ್ನೇ ನೆನಪು ಮಾಡಿಕೊಡುತ್ತದೆ.
ಧಾರ್ಮಿಕ ರಾಷ್ಟ್ರೀಯತೆಯ ಮೂಲಕ ದೇಶ ಕಟ್ಟಲು ಸಾಧ್ಯವಾಗದು. ಇದು ಬಹುಧರ್ಮ, ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವಕ್ಕೆ ಮಾರಕವಾದುದು. ಪ್ರಜಾಪ್ರಭುತ್ವವನ್ನು ನಂಬಿರುವ ಯಾರೂ ಇದನ್ನು ಒಪ್ಪಲು ಸಾಧ್ಯ ಇಲ್ಲ. ಸ್ವಾತಂತ್ರ್ಯ ಎನ್ನುವುದು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾದುಲ್ಲ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಾಕ್ಷಾತ್ಕಾರಗೊಂಡಾಗ ಮಾತ್ರ ಪ್ರಜಾಪ್ರಭುತ್ವ. ಇದನ್ನೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಮಾಜಿಕ ಪ್ರಜಾಪ್ರಭುತ್ವ ಎಂದು ಹೇಳಿದ್ದು. ಸಂವಿಧಾನದ ಈ ಆಶಯವನ್ನು ಸಾಕಾರಗೊಳಿಸುವುದು ಚುನಾಯಿತ ಸರ್ಕಾರದ ಕರ್ತವ್ಯವಾಗಿದೆ.
ನಮ್ಮ ಯೋಚನೆಗಳು ಮತ್ತು ಯೋಜನೆಗಳು ಸಂವಿಧಾನದ ಆಶಯಗಳೇ ಆಗಿವೆ. ನಮ್ಮ ಆಡಳಿತದ ''ಕರ್ನಾಟಕ ಮಾದರಿ' ಬಗ್ಗೆ ಇಡೀ ದೇಶ ಮಾತ್ರ ಅಲ್ಲ ವಿಶ್ವಶ್ರೇಷ್ಠ ಆರ್ಥಿಕ ತಜ್ಞರು ಕೂಡಾ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ. ಬಡತನ ಎನ್ನುವುದು ಅಪರಾಧ ಅಲ್ಲ. ಇದು ಸಂಪತ್ತು ಮತ್ತು ಅವಕಾಶಗಳ ಅಸಮಾನ ಹಂಚಿಕೆಯ ಫಲ ಎನ್ನುವುದನ್ನು ನಾವು ಮರೆಯಬಾರದು. ನಮ್ಮ ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯಾದಾಗ ಮಾತ್ರ ಸಮೃದ್ಧ, ಬಲಿಷ್ಠ ಮತ್ತು ಕ್ರಿಯಾಶಾಲಿಯಾದ ಸಮಾಜ ನಿರ್ಮಾಣ ಸಾಧ್ಯ ಎನ್ನುವದನ್ನು ನಾನು ಬಲವಾಗಿ ನಂಬಿದ್ದೇನೆ ಎಂದು ಹೇಳಿದರು.












Click it and Unblock the Notifications