ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ದಕ್ಕೆ ಪ್ರತಾಪ್ ಸಿಂಹ, ಸೋಮಣ್ಣ ಕಿಡಿ: ಶಿವರಾಜ್ ಕುಮಾರ್ ಪ್ರತಿಕ್ರಿಯೆ ಏನು?
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಶಿವರಾಜ್ ಕುಮಾರ್ ಭರ್ಜರಿ ಪ್ರಚಾರ ಮಾಡಿದ್ದಕ್ಕೆ, ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜ್ ಕುಟುಂಬ ಎನ್ನುವುದನ್ನು ಮುಂದಿಟ್ಟು ಇಬ್ಬರೂ ಶಿವಣ್ಣ ನಡೆದ ಪರೋಕ್ಷವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು.
ಪ್ರತಾಪ್ ಸಿಂಹ ಮತ್ತು ವಿ ಸೋಮಣ್ಣ ಹೇಳಿಕೆಗೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರತಾಪ್ ಸಿಂಹ ಮತ್ತು ವಿ ಸೋಮಣ್ಣ ಕೂಡ ನಮಗೆ ಆಪ್ತರು. ಅವರ ಬಗ್ಗೆ ನಮಗೆ ಸಾಕಷ್ಟು ಗೌರವ ಇದೆ, ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಸ್ಪರ್ಧೆ ಮಾಡುವ ಬಗ್ಗೆ ನನಗೆ ಗೊತ್ತಿರಲಿಲ್ಲ. ಅವರು ಕರೆದರೆ ನಾನು ಪ್ರಚಾರಕ್ಕೆ ಹೋಗಲು ಸಿದ್ದ, ಆದರೆ ಇದುವರೆಗೂ ಯಾವ ಬಿಜೆಪಿಯವರು ನನ್ನನ್ನು ಸಂಪರ್ಕಿಸಿಲ್ಲ" ಎಂದು ಹೇಳಿದರು.

ವಿ ಸೋಮಣ್ಣ ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಆಸ್ಪತ್ರೆ ಕಟ್ಟಿಸಿದ್ದಾರೆ ಎನ್ನುವ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಾಪ್ ಸಿಂಹ ಪರೋಕ್ಷವಾಗಿ ಶಿವರಾಜ್ ಕುಮಾರ್ ಅವರ ನಡೆಯನ್ನು ಟೀಕಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಅನೇಕ ಜನ ನಿಮ್ಮ ರಾಜಕೀಯದಲ್ಲಿ ಪುನೀತ್ ಹೆಸರು ತರಬೇಡಿ ಎಂದು ಪ್ರತಾಪ್ ಸಿಂಹ ಅವರನ್ನು ಜಾಡಿಸಿದ್ದರು.
ವಿ ಸೋಮಣ್ಣ ಕೂಡ ಈ ಬಗ್ಗೆ ಮಾತನಾಡಿ, 40 ವರ್ಷಗಳಿಂದ ನನಗೆ ರಾಜ್ ಕುಮಾರ್ ಕುಟುಂಬದ ಜೊತೆ ನಂಟಿದೆ, ಶಿವರಾಜ್ ಕುಮಾರ್ ಯಾಕೆ ಹೀಗೆ ಮಾಡಿದ್ರು ಗೊತ್ತಿಲ್ಲ ಎಂದು ಹೇಳಿದ್ದರು. ಸಿದ್ದರಾಮಯ್ಯ ಸೋಲಿನ ಭಯದಿಂದ ಸಿನಿಮಾ ಸ್ಟಾರ್ ಗಳನ್ನು ಕರೆಸಿ ಪ್ರಚಾರ ಮಾಡ್ತಿದ್ದಾರೆ ಎಂದು ಸೋಮಣ್ಣ ಹೇಳಿದ್ದರು.
ಚುನಾವಣೆ ಅಖಾಡದಲ್ಲಿ ಸಿನಿ ತಾರೆಯರ ದಂಡು
ಈ ಬಾರಿ ರಾಜ್ಯ ಚುನಾವಣಾ ಅಖಾಡ ರಂಗೇರಿದೆ. ಕಾಂಗ್ರೆಸ್ ಮತ್ತು ಅಧಿಕಾರದ ಗದ್ದುಗೆ ಹಿಡಿಯಲು ತೀವ್ರ ಪೈಪೋಟಿ ನಡೆಸುತ್ತಿವೆ. ಮತದಾರರನ್ನು ಸೆಳೆಯಲು ಚಲನಚಿತ್ರ ಮತ್ತು ಕಿರುತೆರೆ ಸ್ಟಾರ್ ಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಪರವಾಗಿ ಸುದೀಪ್, ಜಗ್ಗೇಶ್, ಶೃತಿ, ತಾರಾ, ಹರ್ಷಿಕಾ ಪೂಣಚ್ಚ ಸೇರಿದಂತೆ ಹಲವು ಕಿರುತೆರೆ ಕಲಾವಿದರು ಪ್ರಚಾರ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪರವಾಗಿ ಶಿವರಾಜ್ ಕುಮಾರ್, ರಮ್ಯಾ, ನಿಶ್ವಿಕಾ ನಾಯ್ಡು, ದುನಿಯಾ ವಿಜಯ್ ಸೇರಿದಂತೆ ಇತರೆ ಕಲಾವಿದರು ಪ್ರಚಾರಕ್ಕೆ ಇಳಿದಿದ್ದಾರೆ. ಮತ್ತೊಬ್ಬ ಜನಪ್ರಿಯ ನಟ ದರ್ಶನ್ ಕೂಡ ಪ್ರಚಾರ ಮಾಡುತ್ತಿದ್ದು, ಅವರು ಪಕ್ಷವನ್ನು ನೋಡದೆ ಆಪ್ತರ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್, ಬಿಜೆಪಿ ಮತ್ತು ದರ್ಶನ್ ಪುಟ್ಟಣ್ಣಯ್ಯ ಪರವಾಗಿ ಪ್ರಚಾರ ಮಾಡಿದ್ದಾರೆ.












Click it and Unblock the Notifications