Shiroor Landslide: ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆ ಅಪ್‌ಡೇಟ್ ಕೊಟ್ಟ ಸಿದ್ದರಾಮಯ್ಯ
ಕಾರವಾರ, ಸೆಪ್ಟೆಂಬರ್ 26: ಅಂಕೋಲ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದ ಬಳಿಕ ನಡೆದ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮೂರನೇ ಬಾರಿ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಲಾರಿ, ಶವ ಬುಧವಾರ ಪತ್ತೆಯಾಗಿದೆ. ಜುಲೈ 16ರಂದು ಮಳೆಯ ಕಾರಣ ಗುಡ್ಡ ಕುಸಿತವಾಗಿ 9ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ನಾಪತ್ತೆಯಾದ ಲಾರಿ, ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು.
ಗುಡ್ಡ ಕುಸಿತದ ಕಾರ್ಯಾಚರಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಪ್‌ಡೇಟ್ ನೀಡಿದ್ದಾರೆ. 'ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಕಣ್ಮರೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಮೃತದೇಹ ಹಾಗೂ ಮಣ್ಣಿನಡಿ ಹೂತುಹೋಗಿದ್ದ ಲಾರಿಯನ್ನು ಪತ್ತೆ ಹಚ್ಚುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ' ಎಂದು ಹೇಳಿದ್ದಾರೆ.

'ಕಾರ್ಯಾಚರಣೆಯ ಆರಂಭದಲ್ಲಿ ಅರ್ಜುನ್ ಸೇರಿದಂತೆ ನದಿಪಾಲಾಗಿದ್ದ ಪ್ರತಿಯೊಬ್ಬರನ್ನೂ ರಕ್ಷಿಸುವುದು ನಮ್ಮ ಆದ್ಯತೆಯಾಗಿತ್ತು. ಆದರೆ ವೇಗವಾಗಿ ಹರಿಯುತ್ತಿದ್ದ ನೀರು, ನಿರಂತರ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಅಸಾಧ್ಯವಾಗಿ ಪರಿಣಮಿಸಿತ್ತು. ದುರಾದೃಷ್ಟವಶಾತ್ ರಕ್ಷಣಾಕಾರ್ಯ ಕೈಗೂಡಲಿಲ್ಲ, ದುರ್ಘಟನೆಯಲ್ಲಿ ಎಲ್ಲರೂ ಸಾವಿಗೀಡಾದರು. ಈ ಬಗ್ಗೆ ನನಗೂ ಬೇಸರವಿದೆ' ಎಂದು ತಿಳಿಸಿದ್ದಾರೆ.
'ಒಂದಷ್ಟು ಮೃತದೇಹಗಳನ್ನು ಈ ಹಿಂದೆಯೇ ಹೊರತೆಗೆದಿದ್ದೆವು, ಇಂದು ಅಂತಿಮವಾಗಿ ಮಣ್ಣಿನಡಿ ಸಿಲುಕಿದ್ದ ಲಾರಿಯ ಸಹಿತ ಚಾಲಕನ ಮೃತದೇಹ ಹೊರತೆಗೆಯಲಾಗಿದೆ. ಸ್ಥಗಿತಗೊಂಡಿದ್ದ ಶೋಧ ಕಾರ್ಯಾಚರಣೆಯನ್ನು ಮರು ಆರಂಭಿಸುವಂತೆ ಆತ್ಮೀಯರು, ಸಂಸದರು ಆದ ಎಐಸಿಸಿ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಅವರು ನಮ್ಮ ಸರ್ಕಾರವನ್ನು ಕೋರಿದ್ದರು' ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
'ಮಾನವೀಯ ನೆಲೆಯಲ್ಲಿ ಕೇರಳದ ಲಾರಿ ಚಾಲಕ ಅರ್ಜುನ್‌ನ ಮೃತದೇಹವನ್ನು ಅವರ ಊರಿಗೆ ತಲುಪಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಲಿದೆ. ಮೃತನ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದು ಸಿದ್ದರಾಮಯ್ಯ ಸಂತಾಪವನ್ನು ಸೂಚಿಸಿದ್ದಾರೆ.
ಗಂಗಾವಳಿ ನದಿಯಲ್ಲಿ ಈಗ ನೀರಿನ ಮಟ್ಟ ಕಡಿಮೆಯಾಗಿದೆ. ಆದ್ದರಿಂದ ಕೇರಳದ ಮನವಿಯಂತೆ ಮೂರನೇ ಬಾರಿಗೆ ಕಾರ್ಯಾಚರಣೆಯನ್ನು ಕರ್ನಾಟಕ ಸರ್ಕಾರ, ಉತ್ತರ ಕನ್ನಡ ಜಿಲ್ಲಾಡಳಿತ ಕೈಗೊಂಡಿದೆ. ನದಿಯಲ್ಲಿ ಮುಳುಗಿದ ಚಾಲಕ ಅರ್ಜುನ್ ಲಾರಿ, ನಾಪತ್ತೆಯಾದ ಮೂವರ ಹುಡುಕಾಟಕ್ಕಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಇದಕ್ಕಾಗಿಯೇ ಉತ್ತರ ಕನ್ನಡ ಜಿಲ್ಲಾಡಳಿತ ಗೋವಾದಿಂದ ಬೃಹತ್ ಬಾರ್ಜ್ ಸಹಿತ ಡ್ರಜ್ಜಿಂಗ್ ಮಷಿನ್ ಮತ್ತು ಈಜುಗಾರರನ್ನು ಕರೆಸಿತ್ತು. ಅಲ್ಲದೇ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಈಶ್ವರ ಮಲ್ಪೆ ನೇತೃತ್ವದ ಮುಳುಗು ತಜ್ಞರು ಸಹ ಪಾಲ್ಗೊಂಡಿದ್ದರು. ಶನಿವಾರ ಅರ್ಜುನ್‌ಗೆ ಸೇರಿದ ಲಾರಿಯ ಕೆಲ ಬಿಡಿಭಾಗಗಳು ಪತ್ತೆಯಾಗಿತ್ತು.
ಜುಲೈನಲ್ಲಿ ಶಿರೂರಿನಲ್ಲಿ ಗುಡ್ಡ ಕುಸಿತವಾಗಿತ್ತು. ಆಗ ನಿರಂತರವಾಗಿ ಮಳೆಯಾಗುತ್ತಿದ್ದ ಕಾರಣ ಕಾರ್ಯಾಚರಣೆಯನ್ನು ಎರಡು ಬಾರಿ ಕೈಗೊಂಡು ಬಳಿಕ ನಿಲ್ಲಿಸಲಾಗಿತ್ತು. ಅಲ್ಲದೇ ಗಂಗಾವಳಿ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಕಾರಣ ನದಿಗೆ ಬಿದ್ದಿರುವ ಲಾರಿಯನ್ನು ಹುಡುಕುವುದು ಸವಾಲಿನ ಕೆಲಸವಾಗಿತ್ತು. ಈಗ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾದ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು.












Click it and Unblock the Notifications