ಶೀಘ್ರದಲ್ಲೇ ಪುನಃ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಬಂದ್
ಹಾಸನ, ಅಕ್ಟೋಬರ್ 09 : ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯನ್ನು ಎರಡನೇ ಹಂತದ ಕಾಮಗಾರಿಗಾಗಿ ಶೀಘ್ರದಲ್ಲೇ ಬಂದ್ ಮಾಡಲಾಗುತ್ತದೆ. ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಮಾರ್ಗದಲ್ಲಿನ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಕಾಮಗಾರಿ ನಡೆಸಲಾಗುತ್ತದೆ.
ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಗುರುವಾರ ಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದು ಶಿರಾಡಿ ಘಾಟ್ ಕಾಮಗಾರಿಗಳ ಬಗ್ಗೆ ಮಾತನಾಡಿದರು. 'ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡುವ ಕುರಿತು ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುತ್ತದೆ' ಎಂದರು. [ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತ : ಚಿತ್ರಗಳು]

'ಸುಮಾರು 11 ಕಿ.ಮೀ.ಗಳ ಮೊದಲ ಹಂತದ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. 85.28 ಕೋಟಿ ರೂ.ಗಳ ವೆಚ್ಚದ ಎರಡನೇ ಹಂತದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ' ಎಂದು ಸಚಿವರು ವಿವರಣೆ ನೀಡಿದರು. [ಎಲ್ಲಾ ವಾಹನಗಳಿಗೆ ಶಿರಾಡಿ ಘಾಟ್ ಮುಕ್ತ]
ಗಡ್ಕರಿಗೆ ಆಹ್ವಾನ : 'ಎರಡನೇ ಹಂತದ ರಸ್ತೆ ಕಾಮಗಾರಿಯನ್ನು ಉದ್ಘಾಟಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಆಗಮಿಸಲಿದ್ದಾರೆ. ದೆಹಲಿಗೆ ತೆರಳಿ ನಿತಿನ್ ಗಡ್ಕರಿ ಅವರಿಗೆ ಆಹ್ವಾನ ನೀಡುತ್ತೇನೆ' ಎಂದು ಸಚಿವರು ತಿಳಿಸಿದರು.
'ಎರಡನೇ ಹಂತದಲ್ಲಿ 21 ಕಿ.ಮೀ. ಡಾಂಬರೀಕರಣ ಕಾಮಗಾರಿ ಮತ್ತು 12.38 ಕಿ.ಮೀ.ಉದ್ದದ ಕಾಂಕ್ರಿಟ್ ಕಾಮಗಾರಿ ನಡೆಯಲಿದೆ. ವಾಹನ ಸಂಚಾರ ಸ್ಥಗಿತಗೊಳಿಸದೇ ಕಾಮಗಾರಿ ನಡೆಸುವುದು ಕಷ್ಟ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಚಿವರು, ತಜ್ಞರ ತಂಡ ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ' ಎಂದರು.
ಮೊದಲನೇ ಹಂತದ ಕಾಂಕ್ರಿಟ್ ರಸ್ತೆ ಕಾಮಗಾರಿಗಾಗಿ ಶಿರಾಡಿ ಘಾಟ್ ರಸ್ತೆಯನ್ನು 2015ರ ಜನವರಿ 2ರಿಂದ ಬಂದ್ ಮಾಡಲಾಗಿತ್ತು. ಆಗಸ್ಟ್‌ನಿಂದ ಪುನಃ ಸಂಚಾರವನ್ನು ಆರಂಭಿಸಲಾಗಿದೆ. ಸುಮಾರು 69 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿತ್ತು.












Click it and Unblock the Notifications