ಮಹಿಳೆಯರು ಅಡುಗೆ ಮಾಡಲು ಲಾಯಕ್ ಎಂಬ ಹೇಳಿಕೆಗೆ ಶಾಮನೂರು ಶಿವಶಂಕರಪ್ಪರು ಕೊಟ್ಟ ಸ್ಪಷ್ಟನೆ ಏನು?
ದಾವಣಗೆರೆ, ಏಪ್ರಿಲ್ 03: ಮಹಿಳೆಯರು ಅಡುಗೆ ಮಾಡಲು ಲಾಯಕ್ ಎಂಬ ಹೇಳಿಕೆ ನೀಡಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರು, ಚುನಾವಣಾ ಆಯೋಗ ನೀಡಿದ ನೊಟೀಸ್ ಗೆ ಉತ್ತರ ಕೊಟ್ಟಿದ್ದಾರೆ. ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.
ವಿವಾದಾತ್ಮಕ ಹೇಳಿಕೆ ರಾಷ್ಟ್ರಮಟ್ಟದಲ್ಲಿಯೂ ಚರ್ಚೆಯಾಗಿತ್ತು. ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸಹ ಶಾಮನೂರು ಶಿವಶಂಕರಪ್ಪರ ಹೇಳಿಕೆ ಟೀಕಿಸಿ ಟ್ವೀಟ್ ಸಹ ಮಾಡಿದ್ದರು. ಮಾತ್ರವಲ್ಲ, ಶಾಮನೂರು ಶಿವಶಂಕರಪ್ಪರು ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ಮಹಿಳೆಯರು ಕೇವಲ ಅಡುಗೆ ಮಾಡಲು ಮಾತ್ರ ಸೀಮಿತರಲ್ಲ, ದೇಶವನ್ನೂ ಆಳುತ್ತಾರೆ. ದೇಶಕ್ಕಾಗಿ ಹೋರಾಡಿ ಪದಕಗಳನ್ನೂ ತಂದಿದ್ದಾರೆ ಎಂದು ಹೇಳಿದ್ದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಗ್ಗೆ ನಾನು ನೀಡಿದ ಹೇಳಿಕೆಯನ್ನು ನನಗೆ ಆಗದವರು ದ್ವೇಷದಿಂದ ತಿರುಚಿ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಡು ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಟ್ವೀಟ್ ನಲ್ಲಿ ಆಕ್ಷೇಪಿಸಿದ್ದರು. ಆದರೆ ನಾನು ಅಂಥ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಪ್ರಸಾರ ಆಗಿರುವಂತೆ ಹಾಗೂ ಸೈನಾ ನೆಹ್ವಾಲ್ ಟ್ವೀಟ್ ಮಾಡಿರುವ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿಗಳ ಸೂಚನೆಯಂತೆ 24 ಗಂಟೆಯೊಳಗೆ ಸಮಜಾಯಿಷಿ ನೀಡುವಂತೆ ಶಾಮನೂರು ಶಿವಶಂಕರಪ್ಪ ಅವರಿಗೆ ಸಹಾಯಕ ಚುನಾವಣಾಧಿಕಾರಿಗಳು ನೊಟೀಸ್ ಕೊಟ್ಟಿದ್ದರು.
ನೊಟೀಸ್ ಗೆ ಉತ್ತರ ನೀಡಿರುವ ಶಾಮನೂರು ಶಿವಶಂಕರಪ್ಪ ಅವರು, ಎಲ್ಲಾ ಕ್ಷೇತ್ರಗಳಲ್ಲಿಯೂ ಹಾಗೂ ರಾಜಕೀಯ ರಂಗದಲ್ಲಿಯೂ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಹಿಳೆಯರು ಕೇವಲ ಅಡುಗೆ ಮಾಡಲು ಸೀಮಿತವಲ್ಲ ಎಂಬುದನ್ನು ದಿವಂಗತ ಇಂದಿರಾ ಗಾಂಧಿ ಅವರು ನಿರೂಪಿಸಿದ್ದಾರೆ. ಸಾಬೀತುಪಡಿಸಿದ್ದಾರೆ. ಅದೇ ರೀತಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಮಹಿಳೆಯರೇ ಸ್ಪರ್ಧಿಸಿದ್ದು, ನಿಮ್ಮ ಸಮಸ್ಯೆ ಪರಿಹಾರಕ್ಕೆ ನಿಮ್ಮ ಮತವನ್ನು ದೆಹಲಿಯವರಿಗೆ ತಲುಪಿಸಿ ಎಂಬರ್ಥದಲ್ಲಿ ನಾನು ಹೇಳಿಕೆ ನೀಡಿದ್ದೆ. ಇದನ್ನೇ ತಪ್ಪಾಗಿ ಅರ್ಥೈಸಿ ಬಿಂಬಿಸಲಾಗಿದೆ ಎಂದು ಶಾಮನೂರು ಶಿವಶಂಕರಪ್ಪರು ಅವರು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಶಾಮನೂರು ಶಿವಶಂಕರಪ್ಪರ ಸೊಸೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಾವ ಶಾಮನೂರು ಶಿವಶಂಕರಪ್ಪರ ಹೇಳಿಕೆ ತಪ್ಪಾಗಿ ಗ್ರಹಿಸಲಾಗಿದೆ. ವಿನಾಕಾರಣ ವಿವಾದ ಸೃಷ್ಟಿಸಲಾಗಿದೆ. ಮಹಿಳೆಯರ ಬಗ್ಗೆ ಅಪಾರ ಗೌರವವಿದೆ. ಅವರು ಬಿಜೆಪಿ ಅಭ್ಯರ್ಥಿ ಗುರಿಯಾಗಿಟ್ಟುಕೊಂಡು ಹೇಳಿಕೆ ನೀಡಿದ್ದರೆ ವಿನಾಃ ಮಹಿಳೆಯರ ಕುರಿತಾಗಿ ಅಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಗೆಲುವಿಗೆ ಶ್ರಮಿಸಲಿದ್ದಾರೆ. ಎಸ್. ಎಸ್. ಕೇರ್ ಟ್ರಸ್ಟ್, ಬಾಪೂಜಿ ಆಸ್ಪತ್ರೆ ಸೇರಿದಂತೆ ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲು ಸಹಕರಿಸಿದ್ದಾರೆ. ಮಹಿಳೆಯರ ಕುರಿತಾಗಿ ಅವರು ನೀಡಿರುವ ಹೇಳಿಕೆ ತಿರುಚಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications