8 ಪಾಯಿಂಟ್ ಮೂಲಕ ಕುಮಾರಸ್ವಾಮಿಗೆ ಸಾರಿಗೆ ಸಚಿವರ ತಿರುಗೇಟು!
ಬೆಂಗಳೂರು, ಜನವರಿ 04: ಕರ್ನಾಟಕದ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತೆ ಟೀಕೆಗಳನ್ನು ಮಾಡಿದ್ದಾರೆ. ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಉಚಿತ ಪ್ರಯಾಣದ 'ಶಕ್ತಿ' ಯೋಜನೆ ಬಗ್ಗೆ ಅವರು ವಿಡಿಯೋವೊಂದನ್ನು ಶೇರ್ ಮಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಕುಮಾರಸ್ವಾಮಿ ಫೇಸ್‌ಬುಕ್ ಪೋಸ್ಟ್‌ನಲ್ಲಿ, 'ಚುನಾವಣೆ ಲಾಭಕ್ಕಾಗಿ ಕರ್ನಾಟಕ ಕಾಂಗ್ರೆಸ್ ರೂಪಿಸಿ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೂ ಎರವಾಗಿವೆ. ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ ಎಂದು ಹೊರಟ ಆ ಪಕ್ಷದ ಸರಕಾರ, ಅವರು ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ. ಇದು ಕರ್ನಾಟಕದ ಮಾದರಿ!!' ಎಂದು ಟೀಕಿಸಿದ್ದರು.

ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಈ ಪೋಸ್ಟ್‌ಗೆ 8 ಪಾಯಿಂಟ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ. ಹಿಂದಿನ ಸರ್ಕಾರಗಳು ಸಾರಿಗೆ ಇಲಾಖೆಯಲ್ಲಿ ಮಾಡಿದ ಕೆಲಸಗಳನ್ನು ನೆನಪು ಮಾಡಿಕೊಟ್ಟಿದ್ದಾರೆ.
ರಾಮಲಿಂಗಾ ರೆಡ್ಡಿ ಪೋಸ್ಟ್
ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ HD Kumaraswamy ಅವರೇ,
1. ಸಾರಿಗೆ ಸಂಸ್ಥೆಗಳ ಅಭಿವೃದ್ಧಿಯ ಎರಡು ಮುಖಗಳು ಅಂದರೆ, ಕಾಲಕಾಲಕ್ಕೆ ನೇಮಕಾತಿ ಹಾಗೂ ಹೊಸ ಬಸ್ಸುಗಳ ಸೇರ್ಪಡೆ.
2. ಆದರೆ ದುರಂತವೆಂದರೆ, ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13,888 ಹುದ್ದೆಗಳು ಖಾಲಿ ಇದ್ದರೂ (ನಿವೃತ್ತಿ ಇನ್ನಿತರೆ ಕಾರಣಗಳಿಂದ) ಒಂದೇ ಒಂದು ನೇಮಕಾತಿ ಆಗಿಲ್ಲ. ನಮ್ಮ ಸರ್ಕಾರ ಸಾರಿಗೆ ಸಂಸ್ಥೆಗಳಲ್ಲಿ 8,900 ಖಾಯಂ ನೇಮಕಾತಿಗೆ ಚಾಲನೆ ನೀಡಿದೆ.
3. ಮತ್ತೊಂದು ಮಹಾ ದುರಂತವೆಂದರೆ, ಸಂಸ್ಥೆಯಲ್ಲಿರುವ ಕೆಲವು ಡಕೋಟಾ ಬಸ್ಸುಗಳು, ಕಳೆದ 5 ವರ್ಷಗಳಲ್ಲಿ ಬಸ್‌ಗಳ ಸೇರ್ಪಡೆ ಆಗಿಲ್ಲ, ಕಳಪೆ ಸ್ಥಿತಿಯ ಬಸ್ಸುಗಳನ್ನು ಕಾರ್ಯಾಚರಣೆ ಮಾಡುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಸಾಧುವಲ್ಲದ ಕಾರಣ, ನಿಷ್ಕ್ರಿಯಗೊಳಿಸುವ ಕಾರ್ಯ ಒಂದೆಡೆಯಾದರೆ, 900 ಬಸ್ಸುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಕೂಡ ನಡೆದಿದೆ.
4. ಇದರೊಂದಿಗೆ, ಸಾರಿಗೆ ಸಂಸ್ಥೆಗಳಲ್ಲಿ 5,900 ಹೊಸ ಬಸ್ಸುಗಳನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ . ನಾಲ್ಕು ನಿಗಮಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆ ತ್ವರಿತಗತಿಯಲ್ಲಿ ಸಾಗಿದೆ.
5. ಸಾರಿಗೆ ಸಂಸ್ಥೆಗಳು ಪ್ರತಿದಿನ 1,58,000 ಟ್ರಿಪ್ ಗಳನ್ನು ಕಾರ್ಯಾಚರಣೆಗೊಳಿಸುತ್ತಿವೆ. ಬಸ್ಸುಗಳ ಕಾರ್ಯಾಚರಣೆ ತೊಂದರೆಯಾಗಿರುವಂತಹ ಒಂದೆರಡು ಘಟನೆಗಳು ಈ ಹಿಂದೆಯೂ ವರದಿಯಾಗುತ್ತಿದ್ದವು. ಆದರೆ ಶಕ್ತಿ ಯೋಜನೆ ತರುವಾಯ, ಈ ಯೋಜನೆಯ ಯಶಸ್ಸನ್ನು ಸಹಿಸದೆ, ಈ ರೀತಿಯ ಒಂದೆರಡು ಘಟನೆಗಳಿಗೂ ಕೂಡ ಶಕ್ತಿ ಯೋಜನೆಯನ್ನು ದೂಷಿಸುವಂತಹ ವ್ಯವಸ್ಥಿತ ಅಪಪ್ರಚಾರವನ್ನು ವಿಪಕ್ಷಗಳು ಮಾಡುತ್ತಿರುವುದು ವಿಪರ್ಯಾಸ.
6. ಮಾನ್ಯ ಶ್ರೀ. ಕುಮಾರಸ್ವಾಮಿ ಅವರು ಹೇಳಿದಂತೆ, ಶಕ್ತಿ ಯೋಜನೆ ಉಪಯೋಗಿ ಯೋಜನೆ ಎಂದು ಒಪ್ಪಿಕೊಂಡರೂ ಸಹ, ಸಾರ್ವಜನಿಕರಿಗೆ ಸಮಗ್ರ ಸಾರಿಗೆ ಸೌಲಭ್ಯ ಒದಗಿಸುವಲ್ಲಿ, BJP Karnataka ಆಡಳಿತಾವಧಿಯಲ್ಲಿ ನೇಮಕಾತಿ ಹಾಗೂ ಬಸ್ಸುಗಳ ಸೇರ್ಪಡೆಯಾಗದೇ ಇರುವ ಬಗ್ಗೆ ಮಾನ್ಯ ಮಾಜಿ ಮುಖ್ಯಮಂತ್ರಿಗಳು ಚಕಾರವೆತ್ತದಿರುವುದು ಆಶ್ಚರ್ಯಕರ ಸಂಗತಿ.
7. ಶಕ್ತಿ ಯೋಜನೆಯಿಂದ ಮಹಿಳೆಯರು ಪ್ರವಾಸ ಸ್ಥಳಗಳಿಗೆ ಮಾತ್ರ ಮುಗಿಬಿದ್ದಿದ್ದಾರೆ ಎಂದು ಅರ್ಥೈಸುವುದು ಕೆಟ್ಟಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಶಿಕ್ಷಣ, ಉದ್ಯೋಗ, ದೇವರ ದರ್ಶನ ಮುಂತಾದ ಕಾರಣಗಳಿಗಾಗಿ ನಾಡಿನ ಹೆಣ್ಣುಮಕ್ಕಳು ಈ ಯೋಜನೆಯನ್ನು ಉಪಯೋಗಿಸಿಕೊಂಡು ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈ ಯೋಜನೆ ತನ್ನದೇ ಆದ ಕೊಡುಗೆ ನೀಡಿದೆ.
8. ಶಕ್ತಿ ಯೋಜನೆ ಜಾರಿಯಾಗಿ 6 ತಿಂಗಳುಗಳಲ್ಲಿ 126 ಕೋಟಿಗೂ ಅಧಿಕ ಉಚಿತ ಟಿಕೆಟ್ ಪಡೆದು ಪ್ರಯಾಣಿಸಿದ ಪ್ರತಿಯೊಬ್ಬ ಮಹಿಳೆಯರು ಪ್ರವಾಸಿ ಸ್ಥಳಕ್ಕೆ ಹೋಗಿದ್ದಾರೆ ಎಂಬುದು ಅಕ್ಷಮ್ಯ. ಇದರಲ್ಲಿ ಶಾಲಾ ಕಾಲೇಜಿಗೆ, ಉದ್ಯೋಗಕ್ಕೆ, ಮನೆಕೆಲಸ, ಗಾರ್ಮೆಂಟ್ ಫ್ಯಾಕ್ಟರಿಗೆ ಹೋಗುವ ವಿದ್ಯಾರ್ಥಿನಿಯರು/ ಮಹಿಳೆಯರು ಸೇರಿದ್ದಾರೆ ಎಂಬುದನ್ನು ಮಾನ್ಯ ಶ್ರೀ ಕುಮಾರಸ್ವಾಮಿಯವರು ಮರೆಯಬಾರದು.












Click it and Unblock the Notifications