Shakti Scheme: ಶಕ್ತಿ ಯೋಜನೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೊಟ್ಟ ಸ್ಪಷ್ಟನೆ
ಬೆಂಗಳೂರು, ನವೆಂಬರ್ 02: ಕರ್ನಾಟಕದ ಕಾಂಗ್ರೆಸ್ ಸರ್ಕಾರ ನೀಡಿದ್ದ 5 ಗ್ಯಾರಂಟಿಗಳಲ್ಲಿ 'ಶಕ್ತಿ' ಯೋಜನೆ ಸಹ ಒಂದು. ಯೋಜನೆ ಮೂಲಕ ರಾಜ್ಯ ಸರ್ಕಾರವು ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಆದರೆ ಈ ಯೋಜನೆ ಸ್ಥಗಿತಗೊಳಿಸುವ ಕುರಿತು ಮೂರು ದಿನಗಳಿಂದ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಸ್ಪಷ್ಟನೆಗಳನ್ನು ಸಹ ನೀಡಲಾಗುತ್ತಿದೆ.
'ಶಕ್ತಿ' ಯೋಜನೆಯನ್ನು ನಡೆಸಲು ಸಾರಿಗೆ ಇಲಾಖೆಗೆ ಕಷ್ಟವಾಗಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ದರಿಂದ ಈ ಕುರಿತು ಪೋಸ್ಟ್ ಹಾಕುವ ಮೂಲಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆಯನ್ನು ನೀಡಿದ್ದಾರೆ. ಯೋಜನೆ ಸ್ಥಗಿತವಾಗುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಸಚಿವರ ಸ್ಪಷ್ಟನೆ: ಶನಿವಾರ ರಾಮಲಿಂಗಾ ರೆಡ್ಡಿ ಅವರು, 'ಸ್ಪಷ್ಟೀಕರಣ...ನಾನು ಯಾವುದೇ ಮಾಧ್ಯಮದವರಿಗೂ ಶಕ್ತಿ ಯೋಜನೆ ನಡೆಸಲು ಸಾರಿಗೆ ಇಲಾಖೆಗೆ ಸ್ವಲ್ಪ ಕಷ್ಟವಾಗುತ್ತಿದೆ ಎಂಬ ಹೇಳಿಕೆಯನ್ನೇ ನೀಡಿಲ್ಲ. ಈ ರೀತಿಯ ಹೇಳಿಕೆಗಳು ವಿನಾ ಕಾರಣ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ಶಕ್ತಿ ಯೋಜನೆಯ ಬಗ್ಗೆ ಗೊಂದಲ ಸೃಷ್ಟಿಸುವ ಹುನ್ನಾರವಾಗಿದೆ. ನಾನು ಮಾತನಾಡಿಯೇ ಇಲ್ಲದ ಹೇಳಿಕೆಗಳನ್ನು ಈ ರೀತಿ ಪ್ರಕಟಿಸಿರುವುದು ಸರಿಯಲ್ಲ' ಎಂದು ಹೇಳಿದ್ದಾರೆ.
'ನನ್ನನ್ನು ಯಾವುದೇ ಮಾಧ್ಯಮದವರು ಈ ಬಗ್ಗೆ ಸಂರ್ಪಕಿಸಿಯೇ ಇಲ್ಲ, ನಾನು ಯಾರೊಂದಿಗೂ ಮಾತನಾಡಿಯೇ ಇಲ್ಲದಿರುವುದರಿಂದ ಈ ರೀತಿಯ ಹೇಳಿಕೆಗಳನ್ನು ಮಾಧ್ಯಮದವರು ಪ್ರಕಟಿಸುವ ಮುನ್ನ ನನ್ನನ್ನು ಖುದ್ದು ಸಂರ್ಪಕಿಸಿ ಪ್ರಕಟಿಸಲು ಕೋರಿದೆ' ಎಂದು ತಿಳಿಸಿದ್ದಾರೆ.
ಶನಿವಾರ ಪೋಸ್ಟ್ ಹಾಕಿದ್ದ ಪ್ರತಿಪಕ್ಷ ನಾಯಕ ಆರ್. ಅಶೋಕ, 'ಸಿಎಂ ಸಿದ್ದರಾಮಯ್ಯ ಅವರಂತಹ ಸುಳ್ಳು ಬುರುಕ ಮುಖ್ಯಮಂತ್ರಿ ನಮ್ಮ ರಾಜ್ಯದ ಮಾತ್ರವಲ್ಲ ಇಡೀ ದೇಶದ ಇತಿಹಾಸದಲ್ಲೇ ಮತ್ತೊಬ್ಬರಿರಲಿಕ್ಕಿಲ್ಲ. ಒಂದು ಕಡೆ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ಲಾಭವಾಗಿದೆ ಎಂದು ಜಾಹೀರಾತು ಕೊಡುತ್ತಾರೆ. ಮತ್ತೊಂದು ಕಡೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶಕ್ತಿ ಯೋಜನೆಯನ್ನ ನಡೆಸುವುದು ಸಾರಿಗೆ ಇಲಾಖೆಗೆ ತುಸು ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ' ಎಂದು ಹೇಳಿದ್ದರು.
'ಸ್ವಾಮಿ ಸಿದ್ದರಾಮಯ್ಯನವರೇ, ವಕ್ಫ್ ಆಸ್ತಿ ಎಂದು ರೈತರಿಗೆ ನೋಟಿಸು ಕೊಡುತ್ತಿರುವುದು ತಮ್ಮ ಸೂಚನೆ ಮೇರೆಗೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳುತ್ತಾರೆ. ಆದರೆ ನೀವು ನೋಡಿದರೆ ನೋಟಿಸು ವಾಪಸ್ಸು ಪಡೆಯುತ್ತೇವೆ ಎನ್ನುತ್ತೀರಿ. ಇತ್ತ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಾಗಿದೆ ಎನ್ನುತ್ತೀರಿ, ಆದರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶಕ್ತಿ ಯೋಜನೆ ನಡೆಸುವುದು ಕಷ್ಟ ಎನ್ನುತ್ತಾರೆ' ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದರು.
'ತಮ್ಮ ಎಡಬಿಡಂಗಿ ಸಂಪುಟದಲ್ಲಿ ಎಲ್ಲ ಮಂತ್ರಿಗಳೂ ಹೀಗೆನಾ? ಅಥವಾ ನಿಮ್ಮ ಮತ್ತು ನಿಮ್ಮ ಸಂಪುಟ ಸದಸ್ಯರ ಮಧ್ಯೆ ಏನಾದರೂ ಮುಸುಕಿನ ಗುದ್ದಾಟ ನಡೆಯುತ್ತಿದೆಯಾ?. ತಮ್ಮ ಸಂಪುಟ ಸಚಿವರ ಮೇಲೆ ಹಿಡಿತ ಸಾಧಿಸಲಾಗದ ತಾವು ರಾಜ್ಯದ ಆಡಳಿತ ಹೇಗೆ ನಡೆಸುತ್ತೀರಿ? ತಮ್ಮಂತಹ ಅಸಮರ್ಥ ಮುಖ್ಯಮಂತ್ರಿಯಿಂದ ರಾಜ್ಯಕ್ಕೆ ನಯಾ ಪೈಸೆ ಲಾಭವಿಲ್ಲ. ದಯವಿಟ್ಟು ರಾಜೀನಾಮೆ ಕೊಟ್ಟು ತೊಲಗಿ' ಎಂದು ಅಶೋಕ ಟೀಕಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, "ಶಕ್ತಿ ಯೋಜನೆ ಪರಿಷ್ಕರಣೆಯ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ . ಆ ರೀತಿಯ ಉದ್ದೇಶವೂ ಸರ್ಕಾರಕ್ಕೆ ಇಲ್ಲ. ಎಲ್ಲಾ ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ಮುಂದುವರೆಯಲಿವೆ" ಎಂದು ಹೇಳಿದ್ದರು.












Click it and Unblock the Notifications