ಕೆಪಿಎಸ್‌ಸಿ ಅಧ್ಯಕ್ಷರಾಗಿ ಷಡಕ್ಷರಿ ಸ್ವಾಮಿ ನೇಮಕ
ಬೆಂಗಳೂರು, ಆಗಸ್ಟ್ 18 : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಷಡಕ್ಷರಿ ಸ್ವಾಮಿ ನೇಮಕಗೊಂಡಿದ್ದಾರೆ. ಕಳೆದ 8 ತಿಂಗಳಿನಿಂದ ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯ ನೇಮಕದ ವಿಚಾರದಲ್ಲಿ ಹಗ್ಗ-ಜಗ್ಗಾಟ ನಡೆದಿತ್ತು.
ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯಪಾಲ ವಜುಭಾಯಿ ವಾಲ ಶನಿವಾರ ಒಪ್ಪಿಗೆ ನೀಡಿದ್ದಾರೆ. ಕೆಪಿಎಸ್‌ಸಿಯ ಹಂಗಾಮಿ ಅಧ್ಯಕ್ಷರಾಗಿದ್ದ ಷಡಕ್ಷರಿ ಅವರನ್ನು ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ನೇಮಿಸಿ ಸರ್ಕಾರ ಶಿಫಾರಸು ಮಾಡಿತ್ತು.
ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆ ಕಳೆದ 8 ತಿಂಗಳಿನಿಂದ ಖಾಲಿ ಇತ್ತು. ಆದರೆ, ಮೈತ್ರಿ ಸರ್ಕಾರದಲ್ಲಿ ಅಧ್ಯಕ್ಷರನ್ನು ನೇಮಿಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಗ್ಗಜಗ್ಗಾಟ ನಡೆಯುತ್ತಿತ್ತು. ಆದ್ದರಿಂದ, ಅಧ್ಯಕ್ಷರ ನೇಮಕ ವಿಳಂಬವಾಗಿತ್ತು.

ಎಚ್. ಡಿ. ಕುಮಾರಸ್ವಾಮಿ 1998ನೇ ಬ್ಯಾಚ್ ಐಎಎಸ್ ಅಧಿಕಾರಿ ಕರಿಗೌಡ ನೇಮಕಕ್ಕೆ ಆಸಕ್ತಿ ತೋರಿದ್ದರು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಷಡಕ್ಷರಿ ಸ್ವಾಮಿ ನೇಮಕಕ್ಕೆ ಒಲವು ಹೊಂದಿದ್ದರು. ಸಚಿವ ಡಿ. ಕೆ. ಶಿವಕುಮಾರ್ ಕೆಪಿಎಸ್‌ಸಿ ಸದಸ್ಯರಾಗಿದ್ದ ರಘುನಂದನ್ ರಾಮಣ್ಣ ಪರ ಬ್ಯಾಟಿಂಗ್ ಮಾಡಿದ್ದರು.
ಇದರಿಂದಾಗಿ ಕೆಪಿಎಸ್‌ಸಿ ಅಧ್ಯಕ್ಷರ ನೇಮಕ ಕಗ್ಗಂಟಾಗಿತ್ತು. ಆಯೋಗದ ಅಧ್ಯಕ್ಷ ಸ್ಥಾನ ಸೇರಿದಂತೆ 4 ಸದಸ್ಯ ಸ್ಥಾನವೂ ಖಾಲಿ ಇದೆ. ಈಗ ಸರ್ಕಾರ ಅಧ್ಯಕ್ಷರ ನೇಮಕ ಮಾಡಿದೆ. ಸದಸ್ಯರ ನೇಮಕದ ಬಗ್ಗೆಯೂ ಸರ್ಕಾರ ಗಮನ ಹರಿಸಲಿದೆ.












Click it and Unblock the Notifications