ಸಿದ್ದರಾಮಯ್ಯ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ಗೆ ಪತ್ರ!
ಬೆಂಗಳೂರು, ನ. 13 : ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆಗಳಾದ ಶಾದಿ ಭಾಗ್ಯ ಮತ್ತು ಮೂಢನಂಬಿಕೆ ನಿಷೇಧ ಕಾಯ್ದೆಯ ಕುರಿತಾದ ವಿವಾದ ದೆಹಲಿ ತಲುಪಿದೆ. ಹೈಕಮಾಂಡ್ ನಾಯಕರಿಗೆ ಈ ಕುರಿತು ದೂರು ನೀಡಿರುವ ಕೆಲವು ಕಾಂಗ್ರೆಸ್ ಮುಖಂಡರು ದೂರು ನೀಡಿದ್ದು, ಲೋಕಸಭೆ ಚುನಾವಣೆ ಹತ್ತಿವಾಗುತ್ತಿರುವಾಗ ಇಂತಹ ವಿವಾದ ಎದುರಿಸುವುದು ಪಕ್ಷದ ಹಿತದೃಷ್ಠಿಯಿಂದ ಒಳ್ಳೆಯದಲ್ಲ ಎಂಬ ಅಂಶವನ್ನು ಪ್ರಸ್ತಾಪಿಸಿದ್ದಾರೆ.
ಶಾದಿ ಭಾಗ್ಯ ಮತ್ತು ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರ ಬಹುಸಂಖ್ಯಾತರ ಪರವಾಗಿಲ್ಲ ಎಂದು ಬಿಂಬಿಸಲು ಹೊರಟಿವೆ. ಸಿಎಂ ಸಿದ್ದರಾಮಯ್ಯ ಈ ವಿವಾದವನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಇಂತಹ ವಿವಾದಗಳು ಸರ್ಕಾರದ ಮೇಲೆ ವಿರೋಧ ಅಭಿಪ್ರಾಯ ಮೂಡುವಂತೆ ಮಾಡುತ್ತದೆ ಎಂದು ಪತ್ರದಲ್ಲಿ ಕಾಂಗ್ರೆಸ್ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಘೋಷಿಸಿದ ಯೋಜನೆಗಳನ್ನು ಅವರ ಸಂಪುಟ ಸಹೋದ್ಯೋಗಿಗಳು ಮತ್ತು ಕಾಂಗ್ರೆಸ್ ವಕ್ತಾರರು ಸಹ ಸಮರ್ಥಿಸಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ವಿರೋಧ ಪಕ್ಷಗಳು ಈ ಅಂಶಗಳನ್ನು ಮುಂದಿಟ್ಟುಕೊಂಡು ಸರ್ಕಾರವ ವಿರುದ್ಧ ಜನಾಭಿಪ್ರಾಯ ರೂಪಿಸಲು ಪ್ರಯತ್ನ ನಡೆಸುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸಿನ ದೃಷ್ಠಿಯಿಂದ ಸಿದ್ದರಾಮಯ್ಯ ಅವರಿಗೆ ಏಕ ಪಕ್ಷೀಯ ನಿರ್ಧಾರ ಕೈಗೊಳ್ಳಬಾರದು ಎಂದು ಸಲಹೆ ನೀಡಬೇಕು ಎಂದು ನಾಯಕರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರಿಗೆ ಈ ದೂರಿನ ಪ್ರತಿಗಳು ತಲುಪಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಮೂಲಕ ಸಿದ್ದರಾಮಯ್ಯ ಅವರ ಕಾರ್ಯಕವೈಖರಿ ಕುರಿತು ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೂರಿನ ಸಾರಾಂಶ ಹೀಗಿದೆ.

ಏಕಪಕ್ಷೀಯ ನಿರ್ಧಾರ ಬೇಡ
ಸಿಎಂ ಸಿದ್ದರಾಮಯ್ಯ ಜನಪ್ರಿಯ ಯೋಜನೆಗಳನ್ನು ಘೋಷಿಸುವಾಗ ಏಕ ಪಕ್ಷೀಯ ನಿರ್ಣಯ ಕೈಗೊಳ್ಳುತ್ತಾರೆ ಎಂಬುದು ಮೊದಲ ದೂರು. ಇದರಿಂದ ವಿವಾದ ಉಂಟಾದರೆ ಅದು ಪಕ್ಷ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ. ಏಕ ಪಕ್ಷೀಯ ನಿರ್ಧಾರ ತೆಗೆದುಕೊಳ್ಳದಂತೆ ಸಿಎಂಗೆ ಸಲಹೆ ನೀಡುವಂತೆ ಮನವಿ ಮಾಡಿದ್ದಾರೆ.

ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು
ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಸಂಬಂಧಿಸಿದ ನೀತಿ ನಿಯಮಗಳನ್ನು ಜಾರಿಗೆ ತರುವಾಗ ಸಚಿವ ಸಂಪುಟದಲ್ಲಿನ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಎಲ್ಲರ ಒಪ್ಪಿಗೆ ಪಡೆಯಬೇಕು. ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಬೇಕೆಂದು ಮನವಿ ಮಾಡಲಾಗಿದೆ.

ಎಚ್ಚರದಿಂದ ಘೋಷಣೆ ಮಾಡಲಿ
2014ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಆದ್ದರಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾಗುವ ಯಾವ ಯೋಜನೆ ಅಥವಾ ನಿರ್ಧಾರವನ್ನು ಸಿಎಂ ಪ್ರಕಟಿಸಬಾರದು. ಸರ್ಕಾರದಿಂದ ಪ್ರಮುಖ ಘೋಷಣೆಗಳನ್ನು ಮಾಡುವ ಮುನ್ನ ಸಮನ್ವಯ ಸಮಿತಿ ಜೊತೆ ಚರ್ಚೆ ನಡೆಸಿ ಅನುಮತಿ ಪಡೆಯಬೇಕು. ಇದರಿಂದ ವಿವಾದವಾಗುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಪತ್ರದಲ್ಲಿ ವಿಶ್ಲೇಷಿಸಲಾಗಿದೆ.

ಕಾರ್ಯ ವೈಖರಿ ಬದಲಾಗಬೇಕು
ಸಿಎಂ ಸಿದ್ದರಾಮಯ್ಯ ತಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಂಡರೆ ಮಾತ್ರ ಚುನಾವಣೆಯಲ್ಲಿ ಪಕ್ಷ ಈಗ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ ಎಂದು ಪಕ್ಷದ ಪ್ರಮುಖರು ಹೈ ಕಮಾಂಡ್ ನಾಯಕರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸಿಎಂ ಕಾರ್ಯವೈಖರಿ ಬದಲಾವಣೆ ಆಗದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಿರೀಕ್ಷಿತ ಫಲಿತಾಂಶ ಗಳಿಸದೆ, ಪಕ್ಷ ಮತ್ತು ಸರ್ಕಾರ ವರ್ಚಸ್ಸಿಗೆ ಧಕ್ಕೆ ಆಗುವ ಆತಂಕವನ್ನು ದೂರಿನಲ್ಲಿ ವ್ಯಕ್ತಪಡಿಸಲಾಗಿದೆ.

ಯಾರಿಗೆ ದೂರು
ಕಾಂಗ್ರೆಸ್ ಮುಖಂಡರು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ದಿಗ್ವಿಜಯ್ ಸಿಂಗ್ ಅವರಿಗೆ ದೂರನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications