ಸಿಎಂ ಭರವಸೆ, ಸ್ವಾಮೀಜಿಗಳ ಉಪವಾಸ ಅಂತ್ಯ
ಬೆಂಗಳೂರು, ನ. 19 : ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿ ಸೇರಿದಂತೆ 13 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಿವಿಧ ಮಠಾಧೀಶರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿದೆ. ಮಠಾಧೀಶರ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿರುವ ಹಿನ್ನಲೆಯಲ್ಲಿ ಉಪವಾಸವನ್ನು ಹಿಂಪಡೆಯಲಾಗಿದೆ.
ಬುಧವಾರ ಉಪವಾಸನಿರತ ಸ್ವಾಮೀಜಿಗಳು ಸಿಎಂ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾದರು. ನಂತರ ಮಾತನಾಡಿದ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು, ಮುಷ್ಕರವನ್ನು ಹಿಂಪಡೆಯುತ್ತಿದ್ದೇವೆ ಎಂದು ಘೋಷಿಸಿದರು. [ಸ್ವಾಮೀಜಿಗಳ ಬೇಡಿಕೆಗಳೇನು?]

ಮೂಢನಂಬಿಕೆಗಳ ನಿಷೇಧ ಕಾನೂನು ಜಾರಿಗೆ ಬರಬೇಕು, ಸಾಮಾಜಿಕ ಸಮಾನತೆ ಕಾರ್ಯಕ್ರಮ ಜಾರಿಯಾಗಬೇಕು ಮುಂತಾದ 13 ಬೇಡಿಕೆಗಳನ್ನು ನಾವು ಸರ್ಕಾರದ ಮುಂದಿಟ್ಟಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಕಾನೂನಿನ ವ್ಯಾಪ್ತಿಯಲ್ಲಿ ಪರಿಶೀಲಿಸಿ, ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. [ಸ್ವಾಮೀಜಿಗಳ ಉಪವಾಸ ಆರಂಭ]
ಮೂಢನಂಬಿಕೆಗಳ ನಿಷೇಧ, ಹೆಣ್ಣುಭ್ರೂಣ ಹತ್ಯೆ ತಡೆ, ದೇವದಾಸಿ ಪದ್ಧತಿ ನಿಷೇಧ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ, ಗುತ್ತಿಗೆ ಪೌರಕಾರ್ಮಿಕರ ಪದ್ಧತಿ ರದ್ದು, ಗೊಲ್ಲರಹಟ್ಟಿ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಎರಡು ದಿನಗಳಿಂದ ಸ್ವಾಮೀಜಿಗಳು ಉಪವಾಸ ನಡೆಸುತ್ತಿದ್ದರು. [ಮಡೆ ಮಡೆ ಸ್ನಾನಕ್ಕೆ ಕೋರ್ಟ್ ಅಸ್ತು]

ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ, ಯಡಿಯೂರು ಶ್ರೀ ತೋಂಟದಾರ್ಯ ಸ್ವಾಮೀಜಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.











Click it and Unblock the Notifications