ಜಗದೀಶ್ ಶೆಟ್ಟರ್ ಮೂಲಕ ಬಿಜೆಪಿಯ ಬಣಜಿಗ ನಾಯಕರಿಗೆ 'ಕೈ' ಹಾಕಿದ ಕಾಂಗ್ರೆಸ್- ಸಂಸದೆ ಮಂಗಳಾ ಅಂಗಡಿ ಮೇಲೆ ಎಲ್ಲರ ಚಿತ್ತ
ಬೆಂಗಳೂರು, ಸೆಪ್ಟೆಂಬರ್ 05: ಕರ್ನಾಟಕ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತ ನಾಯಕರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಅದರಲ್ಲೂ ಕಿತ್ತೂರು ಕರ್ನಾಟಕದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಮೂಲಕ ಬಣಜಿಗ ಸಮುದಾಯದ ನಾಯಕರಿಗೆ ಮಣೆ ಹಾಕಲು ಆಡಳಿತಾರೂಢ ಕಾಂಗ್ರೆಸ್ ಯತ್ನ ನಡೆಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಶೆಟ್ಟರ್ ಅವರು ಬಲಿಷ್ಠ ಬಣಜಿಗ ಸಮುದಾಯಕ್ಕೆ ಸೇರಿದ ನಾಯಕರು. ಈ ಹಿನ್ನೆಲೆಯಲ್ಲಿ ರಾಮದುರ್ಗ ಮಾಜಿ ಶಾಸಕ ಮಹಾದೇವಪ್ಪ ಯಾರವಾಡ ಅವರನ್ನು ಶೆಟ್ಟರ್ ಭೇಟಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಮಾಜಿ ಶಾಸಕರಾಗಿರುವ ಯಾರವಾಡ ಅವರು ಬಣಜಿಗ ಸಮುದಾಯಕ್ಕೆ ಸೇರಿದ ಮುಖಂಡರು. ರಾಮದುರ್ಗದಲ್ಲಿರುವ ಅವರ ಮನೆಗೆ ಸೋಮವಾರ ಭೇಟಿ ನೀಡಿರುವ ಶೆಟ್ಟರ್ ಯಾರವಾಡರನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ರಾಮದುರ್ಗದ ಟಿಕೆಟ್ ಆಕಾಂಕ್ಷಿಯಾಗಿದ್ದ ಯಾರವಾಡ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಯಾರವಾಡ ಅವರ ಬೆಂಬಲಿಗರು ಬಿಜೆಪಿ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ಶೆಟ್ಟರ್ ಮೂಲಕ ಯಾರವಾಡ ಅವರನ್ನು ಸೆಳೆಯುವ ಪ್ರಯತ್ನ ನಡೆಸಿದೆ.
ಯಾರವಾಡ ಅವರು ಶೆಟ್ಟರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಬ್ಬರೂ ದೂರದ ಸಂಬಂಧಿಗಳೆಂದೂ ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ಎರಡು ದಶಕಗಳ ಕಾಲ ಶೆಟ್ಟರ್ ಜೊತೆಗೆ ಯಾರವಾಡ ಗುರುತಿಸಿಕೊಂಡಿದ್ದಾರೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಕಾಂಗ್ರೆಸ್ ನಾಯಕರು ಯಾರವಾಡ ಅವರನ್ನು ಪಕ್ಷಕ್ಕೆ ಕರೆತರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಸಂಸದೆ ಮಂಗಳಾ ಅಂಗಡಿ ಮೇಲೆ ಎಲ್ಲರ ಚಿತ್ತ
ಬಿಜೆಪಿಯ ಬಣಜಿಗ ನಾಯಕರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿರುವ ಹಿನ್ನೆಲೆಯಲ್ಲಿ ಸಂಸದೆ ಮಂಗಳಾ ಅಂಗಡಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮಂಗಳಾ ಅಂಗಡಿ ಅವರು ಬೆಳಗಾವಿಯ ಮಾಜಿ ಸಂಸದ ಸುರೇಶ್ ಅಂಗಡಿ ಅವರ ಪತ್ನಿ. ಸುರೇಶ್ ಅಂಗಡಿಯವರು ವಿಧಿವಶರಾದ ಬಳಿಕ ಬೆಳಗಾವಿ ಸಂಸದೆಯಾಗಿ ಮಂಗಳಾ ಅಂಗಡಿ ಅವರು ಆಯ್ಕೆಯಾಗಿದ್ದಾರೆ.
ಜಗದೀಶ್ ಶೆಟ್ಟರ್ ಅವರ ಪುತ್ರನ ಪತ್ನಿ ಮಂಗಳಾ ಅಂಗಡಿಯವರ ಮಗಳು. ಈ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ನಡುವೆ ನೆಂಟಸ್ತಿಕೆ ಇದೆ. ಎರಡೂ ಕುಟುಂಬಗಳು ಬಣಜಿಗ ಸಮುದಾಯಕ್ಕೆ ಸೇರಿದವರು. ಬಿಜೆಪಿ ಸಂಸದೆಯಾಗಿರುವ ಮಂಗಳಾ ಅಂಗಡಿ ವಿಧಾನಸಭೆ ಚುನಾವಣೆಯಲ್ಲಿ ಶೆಟ್ಟರ್ ಗೆಲುವಿಗೆ ಹಾರೈಸಿದ್ದರು. ಈ ನೆಂಟಸ್ತಿಕೆಯನ್ನೇ ಬಳಸಿಕೊಂಡು ಮಂಗಳಾ ಅಂಗಡಿಯವರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಬಹುದು ಎಂದು ಹೇಳಲಾಗುತ್ತಿದೆ.

ಮರಾಠ ನಾಯಕರಿಗೂ ಗಾಳ
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಮೂಲಕ ಬೆಳಗಾವಿ ಜಿಲ್ಲೆಯ ಮರಾಠ ನಾಯಕರಿಗೂ ಕಾಂಗ್ರೆಸ್ ಗಾಳ ಹಾಕಿದೆ ಎಂದು ತಿಳಿದುಬಂದಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದ ಮಾಜಿ ಶಾಸಕ ಅನಿಲ್ ಬೆನಕೆಗೂ ಶೆಟ್ಟರ್ ಆಹ್ವಾನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications