'ಸಿಎಂ, ಪರಮೇಶ್ವರ ಪ್ರತ್ಯೇಕ ರಾಜ್ಯ ಪ್ರವಾಸ ಅನಗತ್ಯ'
ಬೆಂಗಳೂರು, ಡಿಸೆಂಬರ್. 14 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಪ್ರತ್ಯೇಕವಾಗಿ ರಾಜ್ಯ ಪ್ರವಾಸ ಮಾಡಿ ಪ್ರಚಾರ ಮಾಡುವುದು ಅನಗತ್ಯ' ಎಂದು ಜಾಫರ್ ಷರೀಫ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್, 'ಇಬ್ಬರು ನಾಯಕರು ಪ್ರತಿಷ್ಠೆ ಬದಿಗಿಟ್ಟು ಒಟ್ಟಿಗೆ ರಾಜ್ಯ ಪ್ರವಾಸ ಮಾಡಬೇಕಿತ್ತು. ಪ್ರತ್ಯೇಕವಾಗಿ ಪ್ರವಾಸ ಮಾಡುವುದು ಸರಿಯಲ್ಲ' ಎಂದರು.

ಬಸವಕಲ್ಯಾಣದಿಂದ ನವ ಕರ್ನಾಟಕ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.13ರಿಂದ ಪ್ರವಾಸ ಆರಂಭಿಸಿದ್ದಾರೆ. ಕಾಂಗ್ರೆಸ್ ಶಾಸಕರ ಗೆದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ಪ್ರವಾಸ ನಡೆಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಡಿ.27ರಿಂದ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತ ಕ್ಷೇತ್ರಗಳಲ್ಲಿ ಪರಮೇಶ್ವರ ಮತ್ತು ವಿವಿಧ ನಾಯಕರು ಪ್ರವಾಸ ನಡೆಸಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರ ಪ್ರವಾಸದ ಬಗ್ಗೆ ಭಾರೀ ಗೊಂದಲ ಉಂಟಾಗಿತ್ತು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಕಳೆದ ವಾರ ಬೆಂಗಳೂರಿಗೆ ಬಂದಾಗ ಈ ಗೊಂದಲ ನಿವಾರಿಸಿದ್ದರು.
ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರು ಅಧಿಕಾರವಹಿಸಿಕೊಂಡ ಬಳಿಕ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಆಗ ಬೆಂಗಳೂರು ಅಥವ ಚಿಕ್ಕಮಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ಕೆಪಿಸಿಸಿ ಚಿಂತನೆ ನಡೆಸುತ್ತಿದೆ.












Click it and Unblock the Notifications