SK Bhagavan : ಹಿರಿಯ ನಿರ್ದೇಶಕ ಎಸ್. ಕೆ. ಭಗವಾನ್ ನಿಧನ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್. ಕೆ. ಭಗವಾನ್ (90) ವಿಧಿವಶರಾದರು.
ಬೆಂಗಳೂರು, ಫೆಬ್ರವರಿ 20; ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್. ಕೆ. ಭಗವಾನ್ ವಿಧಿವಶರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸೋಮವಾರ ಮುಂಜಾನೆ ಎಸ್. ಕೆ. ಭಗವಾನ್ (90) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಹಕಾರ ನಗರದಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಡಾ. ರಾಜ್ ಕುಮಾರ್ ನಟಿಸಿದ ಹಲವು ಚಿತ್ರಗಳನ್ನು ನಿರ್ದೇಶಕ ಮಾಡಿದ್ದ ಎಸ್. ಕೆ. ಭಗವಾನ್ ಡಾ. ರಾಜ್ ಕುಟುಂಬಕ್ಕೆ ಆಪ್ತರಾಗಿದ್ದರು.
ದೊರೈ-ಭಗವಾನ್ ಜೋಡಿ; ಎಸ್. ಕೆ. ಭಗವಾನ್ ಪೂರ್ಣ ಹೆಸರು ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್. ಕನ್ನಡ ಚಿತ್ರರಂಗದಲ್ಲಿ ದೊರೈರಾಜ್ ಅವರ ಜೊತೆ ಸೇರಿ ಸುಮಾರು 55 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದೊರೈ-ಭಗವಾನ್ ಎಂದೇ ಇಬ್ಬರು ಖ್ಯಾತರಾಗಿದ್ದರು. 25 ಕಾದಂಬರಿ ಆಧಾರಿತ ಸಿನಿಮಾಗಳನ್ನು ನಿರ್ದೇಶನ ಮಾಡಿದ ಹೆಗ್ಗಳಿಕೆ ದೊರೈ-ಭಗವಾನ್ ಜೋಡಿಯದ್ದಾಗಿದೆ.
1933ರಲ್ಲಿ ಮೈಸೂರಿನ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಎಸ್. ಕೆ. ಭಗವಾನ್ ಜನಿಸಿದರು. ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. 1956ರಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
1966ರಲ್ಲಿ ಸಂಧ್ಯಾರಾಗ ಚಿತ್ರದ ಮೂಲಕ ನಿರ್ದೇಶಕರಾದರು. ಬಳಿಕ ದೊರೈರಾಜ್ ಮತ್ತು ಎಸ್. ಕೆ. ಭಗವಾನ್ ಜೋಡಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿತು. 1993ರಲ್ಲಿ ದೊರೈರಾಜ್ ನಿಧನ ಹೊಂದಿದ್ದಾರೆ.
ಎಸ್. ಕೆ. ಭಗವಾನ್-ದೊರೈರಾಜ್ ಜೋಡಿ ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ಕಸ್ತೂರಿ ನಿವಾಸ, ಬಯಲು ದಾರಿ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಮುನಿಯನ ಮಾದರಿ, ಜೇಡರ ಬಲೆ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.












Click it and Unblock the Notifications