ಸ್ವಾರ್ಥ ರಾಜಕಾರಣದಲ್ಲಿ ಜನಹಿತ ಮರೆತು ಹೋಯಿತಾ?: ಜನನಾಯಕರು ಮಾಡುತ್ತಿರುವುದೇನು?
ಬೆಂಗಳೂರು, ಏಪ್ರಿಲ್ 21: ರಾಜಕೀಯದ ಮೇಲಾಟಗಳಲ್ಲಿ ನಿರತರಾಗಿರುವ ಜನನಾಯಕರು ಜನರ ಹಿತ ಮರೆಯುತ್ತಿದ್ದಾರಾ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ. ಪ್ರತಿ ದಿನವೂ ರಾಜಕೀಯದ ಚರ್ಚೆಗಳನ್ನು ಹೊರತುಪಡಿಸಿದರೆ ಅಭಿವೃದ್ಧಿ ವಿಚಾರಗಳು ಮುನ್ನಲೆಗೆ ಬರುತ್ತಿಲ್ಲ. ಆರೋಪ, ಪ್ರತ್ಯಾರೋಪ, ಟೀಕೆ, ಪ್ರತಿಭಟನೆ, ವಾದ, ವಿವಾದಗಳು, ಹಗರಣದ ಆರೋಪಗಳು, ಅಧಿಕಾರದ ಕಚ್ಚಾಟಗಳನ್ನು ಹೊರತು ಪಡಿಸಿದರೆ ಬೇರೆ ಯಾವುದೂ ಸದ್ಯದ ಮಟ್ಟಿಗೆ ಜನಸಾಮಾನ್ಯರಿಗೆ ತಲುಪಿದಂತೆ ಕಾಣಿಸುತ್ತಿಲ್ಲ.
ಸಾಮಾನ್ಯವಾಗಿ ಚುನಾವಣೆ ಮುನ್ನ ದ್ವೇಷದ ರಾಜಕಾರಣಗಳು, ಪ್ರತಿಭಟನೆಗಳು, ಆರೋಪಗಳು ಹೀಗೆ ಒಂದು ಪಕ್ಷದ ವಿರುದ್ಧ ಮತ್ತೊಂದು ಪಕ್ಷ, ನಾಯಕನ ವಿರುದ್ಧ ಮತ್ತೊಬ್ಬ ನಾಯಕ ಆರೋಪ ಪ್ರತ್ಯಾರೋಪಗಳನ್ನು ಮಾಡುವುದು ನಡೆಯುತ್ತಿತ್ತು. ಚುನಾವಣೆ ನಡೆದು ಅಧಿಕಾರ ಹಿಡಿದ ಬಳಿಕ ತಮ್ಮದೇ ಕೆಲಸಗಳಲ್ಲಿ ನಿರತರಾಗಿ ಬಿಡುತ್ತಿದ್ದರು. ಆಡಳಿತರೂಢ ಮತ್ತು ವಿಪಕ್ಷಗಳು ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದವು. ಒಂದು ವೇಳೆ ಚರ್ಚೆ ಹೋರಾಟಗಳು ನಡೆದರೂ ಅದು ಆಡಳಿತದ ವಿಚಾರಕ್ಕೆ ನಡೆಯುತ್ತಿತ್ತು.

ಇವತ್ತು ರಾಜಕೀಯ ಹಳ್ಳ ಹಿಡಿದಿದೆ. ಆಶೋತ್ತರಗಳು, ಸಿದ್ಧಾಂತಗಳು ನೆಲಕಚ್ಚಿವೆ. ದ್ವೇಷದ ರಾಜಕಾರಣ ರಾರಾಜಿಸುತ್ತಿದೆ. ಹಣ ಮತ್ತು ಹೆಂಡದ ಹೊಳೆ ಹರಿಸಿ ಅಧಿಕಾರ ಹಿಡಿಯುವ ನಾಯಕರು ತಾವು ಖರ್ಚು ಮಾಡಿದ ಮತ್ತು ಮುಂದೆ ಮಾಡಬೇಕಾಗಿರುವ ಖರ್ಚಿಗಾಗಿ ಹಣ ಮಾಡುವ ದಂಧೆಗಿಳಿದಿದ್ದಾರೆ. ಕಮೀಷನ್ ದಂಧೆ, ಲಂಚದ ಆರೋಪ ಜನನಾಯಕರನ್ನು ಸುತ್ತಿಕೊಳ್ಳುತ್ತಿದೆ. ಇಂತಹವರ ನಡುವೆ ಪ್ರಾಮಾಣಿಕ ರಾಜಕಾರಣಿಗಳು ರಾಜಕೀಯ ಮಾಡದ ಪರಿಸ್ಥಿತಿಗೆ ಬಂದಿದ್ದು ಭ್ರಷ್ಟರಿಗೆ ಕಾಲ ಎಂಬಂತಾಗಿದೆ.
ವಿವಾದ, ಕಿತ್ತಾಟದಲ್ಲಿ ಕಾಲ ಕಳೆದು ಹೋಗುತ್ತಿದೆ
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಕಳೆದ ಎರಡು ವರ್ಷಗಳಿಂದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದರಲ್ಲಿಯೇ ಹೆಣಗಾಡುತ್ತಿದೆ. ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಇದರಾಚೆಗೆ ಕೆಲವೊಂದು ಎಡವಟ್ಟುಗಳು ದಿನ ನಿತ್ಯವೂ ವಿವಾದವನ್ನು ಹುಟ್ಟುಹಾಕುತ್ತಿವೆ. ಜತೆಗೆ ಹಗರಣಗಳ ಆರೋಪವು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲವು ಸಚಿವರನ್ನು ಸುತ್ತಿಕೊಳ್ಳುತ್ತಾ ಹೋಗುತ್ತಿದೆ.

ಬಿಜೆಪಿ ಆಡಳಿತಾವಧಿಯಲ್ಲಿ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿದವರು ಇದೀಗ ಬೆಲೆ ಏರಿಕೆ ಮೂಲಕ ಜನರ ಕಂಗೆಣ್ಣಿಗೆ ಬೀಳುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗಳು ಜನರ ಜೇಬನ್ನು ಸುಡುತ್ತಿದೆ. ಮಧ್ಯಮ ವರ್ಗದವರು ಅದರಲ್ಲೂ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬದುಕುವವರಿಗೆ ಜೀವನ ದುಸ್ತರವಾಗುತ್ತಿದೆ. ಇದರ ನಡುವೆ ಸರ್ಕಾರದಲ್ಲಿನ ನಾಯಕರ ನಡುವೆ ಕುರ್ಚಿ ಕಿತ್ತಾಟವೂ ಆಗೊಮ್ಮೆ ಈಗೊಮ್ಮೆ ಮುನ್ನಲೆಗೆ ಬರುತ್ತಿವೆ. ಕಮೀಷನ್ ದಂಧೆ ವಿರುದ್ಧ ಹೋರಾಟ ಮಾಡಿದವರು ಇದೀಗ ಅದೇ ಆರೋಪಗಳಿಗೆ ತಲೆ ಕೊಡಬೇಕಾದ ಪರಿಸ್ಥಿತಿ ಬಂದಿದೆ.
ಪಕ್ಷಗಳಲ್ಲಿ ನಿಲ್ಲದ ಬಣಗಳ ಜಟಾಪಟಿ
ಕಳೆದ ಎರಡು ವರ್ಷಗಳಲ್ಲಿ ಅದೆಷ್ಟು ವಿವಾದವನ್ನು ಸರ್ಕಾರ ಮೈಮೇಲೆ ಎಳೆದು ಕೊಂಡಿದೆಯೋ ಗೊತ್ತಿಲ್ಲ. ನಾಯಕರ ಹೇಳಿಕೆಗಳು ಆಗೊಮ್ಮೆ ಈಗೊಮ್ಮೆ ವಿವಾದವನ್ನು ಹುಟ್ಟು ಹಾಕುತ್ತಿವೆ. ಇನ್ನು ಜಾತಿಗಣತಿ ವಿಚಾರವು ಈಗಾಗಲೇ ಸರ್ಕಾರಕ್ಕೆ ತಲೆ ನೋವು ತಂದಿದೆ. ಅದರಲ್ಲಿಯೂ ಸಿದ್ದರಾಮಯ್ಯ ಅವರಿಗೆ ಜಾತಿ ಗಣತಿಯನ್ನು ಜಾರಿ ಮಾಡಿದರೂ ಕಷ್ಟ.. ಮಾಡದಿದ್ದರೂ ಕಷ್ಟ ಎಂಬ ಸ್ಥಿತಿಯಾಗಿದೆ. ಇದರ ನಡುವೆ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಪ್ರಕರಣವಂತು ಸರ್ಕಾರಕ್ಕೆ ಮುಜುಗರ ತಂದಿದೆ. ಇದು ಮುಂದೆ ಯಾವ ಹಂತಕ್ಕೆ ಹೋಗುತ್ತೋ ಗೊತ್ತಿಲ್ಲ.

ಇದೆಲ್ಲದರ ನಡುವೆ ಸಿಎಂ ಕುರ್ಚಿ ಹಂಚಿಕೆ ವಿಚಾರವೂ ಮುನ್ನಲೆಗೆ ಬರುತ್ತಿದೆ. ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಎಂಬ ವಿಚಾರವೂ ಚರ್ಚೆಯಲ್ಲಿದ್ದು, ಮೇಲ್ನೋಟಕ್ಕೆ ನಾವೆಲ್ಲವೂ ಒಟ್ಟಾಗಿದ್ದೇವೆ ಎಂದು ತೋರಿಸಲು ಪ್ರಯತ್ನ ನಡೆಯುತ್ತಿದ್ದರೂ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳು ಜಟಾಪಟಿಯಲ್ಲಿ ತೊಡಗಿರುವುದು ಗುಟ್ಟಾಗಿಯೇನು ಉಳಿದಿಲ್ಲ. ಈ ನಡುವೆ ಜಾತಿ ಗಣತಿಯ ಕಿಚ್ಚು ಯಾವ ಮಟ್ಟಿಗೆ ಹೋಗುತ್ತಿದೆ ಎಂದರೆ ಲಿಂಗಾಯಿತ ಮತ್ತು ಒಕ್ಕಲಿಗ ನಾಯಕರನ್ನು ಬಿಟ್ಟು ಸರ್ಕಾರ ಹೇಗೆ ನಡೆಸುತ್ತೀರಾ ಎಂದು ಸವಾಲ್ ಹಾಕುವ ಮಟ್ಟಿಗೆ ಹೋಗಿದೆ.
ಜನಹಿತ ಮರೆಯುತ್ತಿರುವ ಜನನಾಯಕರು
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರೇ ಬಹಿರಂಗವಾಗಿ ನೀವು ಒಗ್ಗಟ್ಟಾಗಿ ಇಲ್ಲಾಂದ್ರೆ ಸರ್ಕಾರ ಬೀಳಿಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೆ ಅಧಿಕಾರ ಎನ್ನುವುದು ಯಾರನ್ನು ಯಾವಾಗ ಬೇಕಾದರೂ ಬದಲಿಸಿ ಬಿಡುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಸ್ವಾರ್ಥ ರಾಜಕಾರಣ ಮನೆ ಮಾಡಿರುವುದರಿಂದ ಜನಹಿತ ಮರೆತು ಹೋಗುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಹೋರಾಟ ಮಾಡುವುದರಲ್ಲಿಯೇ ಅಧಿಕಾರ ಕಳೆದು ಹೋಗುತ್ತಿದೆ. ರಾಜ ಪಟ್ಟಕ್ಕೆ ಬಂದರೆ ರಾಗಿ ಬೀಸೋದು ತಪ್ಪುತ್ತಾ ಎಂಬಂತಾಗಿದೆ ಜನರ ಬದುಕು.












Click it and Unblock the Notifications