ದ್ವಿತೀಯ ಪಿಯು ಪರೀಕ್ಷೆ; ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸೂಚನೆ
ಬೆಂಗಳೂರು, ಅಕ್ಟೋಬರ್ 06; ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2024ರ ಮಾರ್ಚ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಪುನರಾವರ್ತಿತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.
ಅಧ್ಯಕ್ಷರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಕುರಿತು ಆದೇಶ ಹೊರಡಿಸಿದ್ದು, 2023-24 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಸರ್ಕಾರವು ಆದೇಶಿಸಿದ್ದು, ಇವುಗಳ ಪೈಕಿ ಮೊದಲನೇ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆಗಳು; ಮಾರ್ಚ್ 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ಕುರಿತು ಪ್ರಾಂಶುಪಾಲರಿಗೆ ವಿಶೇಷ ಸೂಚನೆಗಳು.
2023ರಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಹಾಗೂ ಪೂರಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಮಾರ್ಚ್ 2024 ರಲ್ಲಿ ನಡೆಸುವ ವಾರ್ಷಿಕ ಪರೀಕ್ಷೆಗೆ ಶುಲ್ಕ ಕಟ್ಟಿಸಿಕೊಳ್ಳಲು ದಿನಾಂಕ 4-10-2023 ರಿಂದ ಅವಕಾಶ ಕಲ್ಪಿಸಲಾಗಿದ್ದು, ಅನುತ್ತೀರ್ಣ OMR ಅರ್ಜಿಗಳಿಗಾಗಿ ಕಾಯಬೇಕಾದ ಅವಶ್ಯಕತೆ ಇಲ್ಲ. ಫಲಿತಾಂಶ ಪಟ್ಟಿ ಆಧಾರದ ಮೇರೆಗೆ ಅನುತ್ತೀರ್ಣ ವಿಷಯಗಳಿಗೆ ನಿಯಮಾನುಸಾರ ಪರೀಕ್ಷಾ ಶುಲ್ಕ ಕಟ್ಟಿಸಿಕೊಳ್ಳುವುದು. ಪರೀಕ್ಷಾ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳ ಮಾಹಿತಿಯನ್ನು KSEAB ಮಂಡಳಿಯ ಜಾಲತಾಣದ PU Exam Portal Login ನಲ್ಲಿ ತುಂಬಿದ ನಂತರ ಅರ್ಜಿಗಳನ್ನು ಉಪನಿರ್ದೇಶಕರ ಕಛೇರಿಗೆ ಒಂದೇ ಕಂತಿನಲ್ಲಿ ಸಲ್ಲಿಸುವುದು.
2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೂ ಹಿಂದಿನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ ಮೂಲ OMR/ ಅನುತ್ತೀರ್ಣ ಅರ್ಜಿ ಅಥವಾ ಹಿಂದಿನ MCA (Marks Card Cum Application) ಗಳ ಆಧಾರ ಮೇಲೆ ಪರೀಕ್ಷಾ ಶುಲ್ಕಗಳನ್ನು ಕಟ್ಟಿಸಿಕೊಂಡು KSEAB ಮಂಡಳಿಯ ಜಾಲತಾಣದ PU Exam Portal Loginನಲ್ಲಿ ವಿದ್ಯಾರ್ಥಿಗಳ ಮಾಹಿತಿಯನ್ನು ದಾಖಲಿಸುವುದು.
2023ರ ದ್ವಿತೀಯ ಪಿಯುಸಿ ವಾರ್ಷಿಕ ಹಾಗೂ ಪೂರಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಫಲಿತಾಂಶ ತಿರಸ್ಕರಿಸಿ ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ, ಫಲಿತಾಂಶ ಪಟ್ಟಿ ಆಧಾರದ ಮೇಲೆ ಮಂಡಲಿಯಿಂದ ಫಲಿತಾಂಶ ತಿರಸ್ಕರಣೆ ಅನುಮತಿ ಪಡೆದ ನಂತರ ನಿಯಮಾನುಸಾರ ಫಲಿತಾಂಶ ತಿರಸ್ಕರಣೆಗೆ ನಿಗದಿತ ಶುಲ್ಕವನ್ನು ಪಡೆದು ಅವಕಾಶ ನೀಡುವುದು ಹಾಗೂ KSEAB ಮಂಡಲಿಯ ಜಾಲತಾಣದ PU Exam Portal Login ನಲ್ಲಿ ಮಾಹಿತಿಗಳನ್ನು ದಾಖಲಿಸುವುದು.
ಮಾರ್ಚ್ 2023, ಮೇ/ ಜೂನ್-2023 ಹಾಗೂ ಆಗಸ್ಟ್/ ಸೆಪ್ಟೆಂಬರ್ 2023ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಫಲಿತಾಂಶ ತಿರಸ್ಕರಿಸಿ ಮಾರ್ಚ್ 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯಲು ಇಚ್ಛಸಿದ್ದಲ್ಲಿ, ಅಂತಹ ವಿದ್ಯಾರ್ಥಿಗಳು ಮೂಲ ಅಂಕಪಟ್ಟಿಗಳ (Original Marks Card) ಆಧಾರದ ಮೇಲೆ ಮಂಡಲಿಯಿಂದ ಫಲಿತಾಂಶ ತಿರಸ್ಕರಣೆ ಅನುಮತಿ ಪಡೆದ ನಂತರ ನಿಯಮಾನುಸಾರ ಫಲಿತಾಂಶ ತಿರಸ್ಕರಣೆಗೆ ಅವಕಾಶ ನೀಡುವುದು ಹಾಗೂ KSEAB ಮಂಡಲಿಯ ಜಾಲತಾಣದ PU Exam Portal Login ನಲ್ಲಿ ಮಾಹಿತಿಗಳನ್ನು ದಾಖಲಿಸುವುದು.
ಪರೀಕ್ಷಾ ಶುಲ್ಕಗಳು; 2024ರ ಮಾರ್ಚ್‌ನಲ್ಲಿ ನಡೆಸಲಾಗುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಅನುತ್ತೀರ್ಣ ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕ ಮತ್ತು ಫಲಿತಾಂಶ ತಿರಸ್ಕರಣಾ ಶುಲ್ಕಗಳು (ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1 ರ ವಿದ್ಯಾರ್ಥಿಗಳನ್ನು ಹೊರತುಪಡಿಸಿ).
* ಒಂದು ವಿಷಯಕ್ಕೆ ರೂ. 140
* ಎರಡು ವಿಷಯಕ್ಕೆ ರೂ. 270
* ಮೂರು ಅಥವ ಹೆಚ್ಚಿನ ವಿಷಯಗಳು ರೂ. 400
* ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಂದ ಕಡ್ಡಾಯವಾಗಿ ಸಲ್ಲಿಸಬೇಕಾದ ಅಂಕಪಟ್ಟಿ ಶುಲ್ಕ ರೂ. 50.
ಫಲಿತಾಂಶ ತಿರಸ್ಕರಣಾ ಶುಲ್ಕ. ಪ್ರಥಮ ಬಾರಿಗೆ ಒಂದು ವಿಷಯಕ್ಕೆ ರೂ. 175. ದ್ವಿತೀಯ/ ಅಂತಿಮ ಬಾರಿಗೆ ಒಂದು ವಿಷಯಕ್ಕೆ ರೂ. 350.
ಸುತ್ತೋಲೆಯಲ್ಲಿ ಜಿಲ್ಲಾ ಉಪನಿರ್ದೇಶಕರು ಪ್ರಾಂಶುಪಾಲರಿಂದ ಸ್ವೀಕರಿಸಿದ ಪರೀಕ್ಷಾ ಅರ್ಜಿಗಳನ್ನು ಮಂಡಲಿಯ ಜಾಲತಾಣದ PU Exam Portal Login ನಲ್ಲಿ Update ಮಾಡಿರುವುದನ್ನು ಖಾತ್ರಿಪಡಿಸಿಕೊಂಡು ಪ್ರಾಂಶುಪಾಲರಿಂದ Update ಮಾಡಿರುವುದಕ್ಕೆ ಸಂಬಂಧಿಸಿದಂತೆ ಮುಚ್ಚಳಿಕೆ ಪತ್ರ ಪಡೆದ ಕಾಲೇಜುವಾರು ಕ್ರೋಢೀಕೃತ ವಿದ್ಯಾರ್ಥಿಗಳ ಪಟ್ಟಿ, ಹಣ ಪಾವತಿಸಿರುವ ಮೂಲ ಚಲನ್ ಹಾಗೂ ಮುಚ್ಚಳಿಕೆ ಪತ್ರವನ್ನು ಖುದ್ದಾಗಿ ಕೇಂದ್ರ ಕಛೇರಿಗೆ ದಿನಾಂಕ 17/11/2023ರಂದು ಸಲ್ಲಿಸಲು ಸೂಚಿಸಲಾಗಿದೆ.












Click it and Unblock the Notifications