ಎಸ್‌ಡಿಪಿಐ ಕಚೇರಿಗಳ ಜಪ್ತಿ, ಮೊಹರು ತೆರವು: ದ.ಕ.ಡಿಸಿಗೆ ನೋಟಿಸ್
ಬೆಂಗಳೂರು. ನ.23: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ (ಎಸ್‌ಡಿಪಿಐ) ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಿರುವ ಸ್ವತ್ತುಗಳಿಗೆ ಹಾಕಲಾಗಿರುವ ಮೊಹರು ತೆರವುಗೊಳಿಸುವ ವಿಚಾರ ಹೈಕೋರ್ಟ್ ಮೆಟ್ಟಿಲೇರಿದೆ. ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಈ ಕಾರ್ಯ ನಡೆಸಲಾಗುತ್ತಿದೆ ಎಂಬ ವಿಚಾರದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಮೊಹರು ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಎಸ್‌ಡಿಪಿಐನ ದಕ್ಷಿಣ ಕನ್ನಡ ಜಿಲ್ಲಾಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಪೀಠ, ಪ್ರತಿವಾದಿಗಳಾದ ದಕ್ಷಿಣ ಕನ್ನಡ ಡಿಸಿ, ಮಂಗಳೂರು ನಗರ ಪೊಲೀಸ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಡಿ.6ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲರು, ಯಾವುದೇ ಮಾಹಿತಿ ನೀಡದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಇರುವ ಎಸ್‌ಡಿಪಿಐ ಕಚೇರಿಗಳು, ಚುನಾಯಿತ ಕಾರ್ಪೊರೇಟರ್‌ಗಳ ಕಚೇರಿಗಳಿಗೆ ಬೀಗ ಹಾಕಲಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಎಸ್‌ಡಿಪಿಐ ಪಕ್ಷ ದ ಹಲವು ಮಂದಿ ಚುನಾಯಿತರಾಗಿದ್ದಾರೆ. ದಕ್ಷಿಣ ಕನ್ನಡದಲ್ಲಿ 200ಕ್ಕೂ ಅಧಿಕ ಚುನಾಯಿತ ಪ್ರತಿನಿಧಿಗಳಿದ್ದು, ರಾಜಕೀಯ ಚಟುವಟಿಕೆ ನಡೆಸಲು ಅವರಿಗೆ ಕಚೇರಿಯ ಅಗತ್ಯವಿದೆ. ಆದ್ದರಿಂದ, ಜಪ್ತಿ ಮಾಡಿರುವ ಕಚೇರಿಗಳಿಗೆ ಹಾಕಲಾಗಿರುವ ಮೊಹರು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕೆಂದರು.
ಅಧಿಕಾರಿಗಳು ಸೀಲ್ ಹಾಕಿರುವ ಕಚೇರಿಗಳು ಬಾಡಿಗೆ ಸ್ಥಳಗಳಾಗಿದ್ದು, ದುರುದ್ದೇಶದಿಂದ ಅವುಗಳನ್ನು ಜಪ್ತಿ ಮಾಡಲಾಗಿದೆ. ಮಂಗಳೂರಿನ ಬೀಗರೆಯಲ್ಲಿರುವ ಎಸ್‌ಡಿಪಿಐ ಮಾಹಿತಿ ಮತ್ತು ಸೇವಾ ಕೇಂದ್ರ, ಬಂಟ್ವಾಳ, ಅದ್ದೂರ್, ಕುದ್ರೋಳಿ, ಪಾವೂರು, ಸುರತ್ಕಲ್‌ನ ಚೊಕ್ಕಬೆಟ್ಟು, ಪರಂಗಿಪೇಟೆ, ಕಾಟಿಪಳ್ಳ, ಬಂಟ್ವಾಳದ ಮಂಚಿ, ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಕಚೇರಿ, ತಾಳಪಾಡಿಯ ಕೆ.ಸಿ. ರಸ್ತೆ, ಮಂಗಳೂರಿನ ಉಲ್ಲಾಳದಲ್ಲಿನ ಕಚೇರಿಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಿ, ಅವುಗಳಿಗೆ ಸೀಲ್ ಹಾಕಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಪಿಎಫ್‌ಐ ಜತೆ ಸಂಪರ್ಕವಿಲ್ಲ: ಪ್ರಜಾಪ್ರತಿನಿಧಿ ಕಾಯ್ದೆ-1951ರ ಅಡಿ ನೋಂದಾಯಿತ ರಾಜಕೀಯ ಪಕ್ಷ ವಾಗಿರುವ ಎಸ್‌ಡಿಪಿಐ, ತುಳಿತಕ್ಕೊಳಗಾದ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿದೆ. ಇದೇ ಕಾರಣಕ್ಕೆ ಕೆಲ ವಿಭಜನಕಾರಿ ಶಕ್ತಿಗಳ ಕೆಂಗಣ್ಣಿಗೆ ಪಕ್ಷ ಗುರಿಯಾಗಿದ್ದು, ಅದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಲು ಸರ್ಕಾರಿ ಸಂಸ್ಥೆಗಳ ಮೇಲೆ ಒತ್ತಡ ಹಾಕಲಾಗುತ್ತಿದೆ.
ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜತೆ ಎಸ್‌ಡಿಪಿಐ ಯಾವುದೇ ಸಂಪರ್ಕ ಹೊಂದಿಲ್ಲ. ಪಿಎಫ್‌ಐ ಮತ್ತದರ ಸಂಸ್ಥೆಗಳನ್ನು ನಿಷೇಧಿಸುವ ಸಂದರ್ಭದಲ್ಲಿಗೃಹ ಸಚಿವಾಲಯ ಎಸ್‌ಡಿಪಿಐ ಹೆಸರು ಸೇರಿಸಿಲ್ಲ. ಹೀಗಿದ್ದರೂ, ಪ್ರತಿವಾದಿಗಳು ಪಕ್ಷಕ್ಕೆ ಸೇರಿದ ಸ್ಥಳಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಿ, ಜಪ್ತಿ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.












Click it and Unblock the Notifications