Rain Alert: ಮಳೆ ಅಬ್ಬರ ಬಲು ಜೋರು, ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ!
ಮಳೆ ಅಬ್ಬರ ಬಲು ಜೋರಾಗುತ್ತಿದ್ದು, ಜನರು ಕೂಡ ಬೆಚ್ಚಿಬಿದ್ದಿದ್ದಾರೆ. ಮುಂಗಾರು ಮಳೆ ಅಬ್ಬರ ನಿರಂತರ ಹೆಚ್ಚಾಗುತ್ತಿದ್ದು ಭಾರಿ ಸಂಚಲನ ಸೃಷ್ಟಿ ಮಾಡಿದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಿ, ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗಿದ್ದು ಭೂಮಿ ಕೊಚ್ಚಿಕೊಂಡು ಹೋಗುವಂತೆ ಮಳೆ ಬೀಳ್ತಿದೆ. ಹೀಗಾಗಿ ಕರ್ನಾಟಕದ ಹಲವು ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮಳೆ ಬರಲಿ ಬರಲಿ ಅಂತಾ ಇಷ್ಟುದಿನ ಬೇಡಿಕೊಳ್ಳುತ್ತಿದ್ದ ಕನ್ನಡ ನಾಡಿನ ಜನರು ಈಗ ಮಳೆಯ ಆರ್ಭಟ ನಿಲ್ಲಲಿ ದೇವರೆ ಅಂತಾ ಬೇಡುವ ಸ್ಥಿತಿ ಬಂದಿದೆ. ಕರ್ನಾಟಕ ರಾಜ್ಯದಲ್ಲಿ 2023ರ ರೀತಿಯೇ 2024 ರಲ್ಲಿ ಕೂಡ ಬರ ಬಂದಿದೆ ಎಂದು ಪರದಾಡುವ ಸಮಯದಲ್ಲೇ ದಿಢೀರ್ ಭರ್ಜರಿ ಮಳೆ, ಧೋ ಅಂತಾ ಸುರಿಯಲು ಆರಂಭಿಸಿತ್ತು. 2024ರ ಜುಲೈ ತಿಂಗಳು ಪೂರ್ತಿ ಭರ್ಜರಿ ಮಳೆಯಾದ ಕಾರಣಕ್ಕೆ ಇದೀಗ ಕರ್ನಾಟಕದ ಬಹುತೇಕ ಡ್ಯಾಂಗಳು ತುಂಬಿ ತುಳುಕುತ್ತಿವೆ. ಪರಿಸ್ಥಿತಿ ಹೀಗಿದ್ದರು ಮಳೆ ಮಾತ್ರ ನಿಲ್ಲುತ್ತಿಲ್ಲ. ಅದರಲ್ಲೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಸುನಾಮಿ ರೀತಿ ಮಳೆ ಬರುವ ಮುನ್ಸೂಚನೆ ನೀಡಲಾಗಿದ್ದು ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ & ಮಲೆನಾಡು ಜಿಲ್ಲೆಗಳಲ್ಲಿ ಭೀಕರ ಮಳೆ ಮುಂದುವರಿದಿದೆ. 2024ರ ಮುಂಗಾರು ಮಳೆ ಅಬ್ಬರಕ್ಕೆ ಪಶ್ಚಿಮ ಘಟ್ಟಗಳು ನಲುಗಿ ಹೋಗಿವೆ. ಭಾರಿ ಮಳೆ ಕಾರಣ ಹಲವೆಡೆ ಭೂಕುಸಿತ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಲೆನಾಡು ಭಾಗದಲ್ಲಿ & ಕರಾವಳಿ ಭಾಗದಲ್ಲಿ ಬೆಟ್ಟ & ಗುಡ್ಡ, ಭೂಮಿ ಕುಸಿದು ಬೀಳುತ್ತಿದೆ. ಹೀಗೆ ಪರಿಸ್ಥಿತಿ ಕೈಮೀರಿ ಹೋದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗಳಿಗೆ ಆಗಸ್ಟ್ 2ರಂದು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಮಳೆ ನಿಲ್ಲಿಸು ದೇವರೆ ಅಂತಿದ್ದಾರೆ ಜನ!
ಭಾರಿ ಮಳೆ ಹಿನ್ನೆಲೆ ಆಗಸ್ಟ್ 2ರಂದು ಅಂದ್ರೆ ಇವತ್ತು ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ರಜೆ ಘೋಷಿಸಿದ್ರೆ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲೂ ರಜೆ ಘೋಷಣೆ ಮಾಡಲಾಗಿದೆ. ಹಾಗೇ ಮಲೆನಾಡು ಭಾಗದಲ್ಲಿ ಕೂಡ ಮಳೆ ಧೋ ಅಂತಾ ಸುರಿಯುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರು ನೆರೆ & ಪ್ರವಾಹದ ಭೀತಿಯಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ಅಬ್ಬರ ಹೀಗೆ ಇರಲಿದೆ..
ಕರ್ನಾಟಕದಲ್ಲಿ ಮುಂಗಾರು ಮಳೆ ಇದೇ ರೀತಿ ಇನ್ನೂ ಕೆಲವು ದಿನಗಳ ಕಾಲ ಅಬ್ಬರಿಸುವ ಸಾಧ್ಯತೆ ದಟ್ಟವಾಗಿದೆ. ಮಳೆ ಅಬ್ಬರದಿಂದ ಬಚಾವ್ ಆಗೋದಕ್ಕೆ ಎಷ್ಟೋ ಜನರು ಊರು ಬಿಡುವ ಪರಿಸ್ಥಿತಿ ಕೂಡ ಸೃಷ್ಟಿ ಆಗಿದೆ. ಹಾಗೇ ಹಲವು ಕಡೆ ಸೇತುವೆ & ರಸ್ತೆಗಳು ಮಳೆಯ ಅಬ್ಬರಕ್ಕೆ ಕೊಚ್ಚಿಕೊಂಡು ಹೋಗಿವೆ. ಹೀಗಾಗಿಯೇ ಭಾರಿ ಮಳೆ ಬೀಳುತ್ತಿರುವ ಪ್ರದೇಶಗಳಲ್ಲಿ, ಜನ ಎಚ್ಚರಿಕೆಯಿಂದ ಓಡಾಡಲು ಸೂಚನೆ ನೀಡಲಾಗಿದೆ.












Click it and Unblock the Notifications