ಎಸ್ಸಿ, ಎಸ್ಟಿ ಕಾಯ್ದೆಯಡಿ ಸುಳ್ಳು ಪ್ರಕರಣಗಳು; ಹೈಕೋರ್ಟ್ ಕಿಡಿ
ಬೆಂಗಳೂರು, ಆಗಸ್ಟ್ 09: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಾಗುತ್ತಿರುವ ಸುಳ್ಳು ಕ್ರಿಮಿನಲ್ ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆಗೆ ಅಡ್ಡಿಯಾಗುತ್ತಿದೆ ಎಂದು ಕರ್ನಾಟ ಹೈಕೋರ್ಟ್ ಕಿಡಿ ಕಾರಿದೆ. ಅಲ್ಲದೆ, ಈ ರೀತಿಯ ಪ್ರಕರಣಗಳು ನ್ಯಾಯಾಂಗ ಕ್ಷೇತ್ರದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿವೆ ಎಂದಿರುವ ನ್ಯಾಯಪೀಠ ಬೆಂಗಳೂರಿನ ವ್ಯಕ್ತಿಯೊಬ್ಬರ ವಿರುದ್ಧದ ಪ್ರಕರಣ ರದ್ದು ಮಾಡಿದೆ.
ರಸಿಕ್ ಲಾಲ್ ಮತ್ತು ಪುರುಷೋತ್ತಮ್ ಎಂಬುವರು ತಮ್ಮ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿಯ ಸುಳ್ಳು ಪ್ರಕರಣಗಳು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಲಿದ್ದು, ನಿಯಂತ್ರಿಸುವಲ್ಲಿ ವಿಫಲವಾದಲ್ಲಿ ಇಡೀ ಅಪರಾಧ ನ್ಯಾಯ ವ್ಯವಸ್ಥೆಗೆ ದೊಡ್ಡ ಹೊರೆಯಾಗಬಹುದು ಎಂದು ತಿಳಿಸಿದೆ.
ಉತ್ತಮ ನಿದರ್ಶನವಾಗಿದೆ; ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವರ್ಗಗಳ ಜನತೆಯ ಮೇಲಿನ ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ ಕಾಯಿದೆ ಜಾರಿ ಮಾಡಲಾಗಿದೆ. ಆದರೆ, ಈ ಕಾಯಿದೆಯ ಉಲ್ಲಂಘನೆ ಮಾಡಿರುವುದಕ್ಕೆ ಪ್ರಸ್ತುತದ ಪ್ರಕರಣ ಒಂದು ಉತ್ತಮ ನಿರ್ದಶನವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ಈ ರೀತಿಯ ಪ್ರಕರಣಗಳಿಂದ ನಿಜವಾಗಿಯೂ ಸಮಸ್ಯೆಗೆ ಸಿಲುಕಿರುವವರು ನ್ಯಾಯಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ಸುಳ್ಳು ಪ್ರಕರಣವನ್ನು ವಿಚಾರಣೆಗೊಳಪಡಿಸುವುದು ಒಂದು ರೀತಿಯ ಅಪಹಾಸ್ಯದಂತಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಜತೆಗೆ, ದೂರುದಾರರ ತಂದೆ ಅರ್ಜಿದಾರರಿಗೆ ತಮ್ಮ ಜಮೀನನ್ನು ಮಾರಾಟ ಮಾಡಿದ್ದಾರೆ. ಅಲ್ಲದೆ, ಆ ಆಸ್ತಿಯನ್ನು ಅರ್ಜಿದಾರರು ಕಳೆದ ೫೦ ವರ್ಷಗಳಿಂದ ತಮ್ಮಲ್ಲಿ ಉಳಿಸಿಕೊಂಡಿರುವ ಸಂಬಂಧ ಸರ್ಕಾರದಲ್ಲಿ ದಾಖಲೆಗಳಿವೆ. ಜತೆಗೆ, ಅರ್ಜಿದಾರರು ಜಮೀನ್ನು ಖರೀದಿ ಮಾಡಿದ್ದಾರೆ ವಿನಃ ಅತಿಕ್ರಮ ಮಾಡಿಲ್ಲ ಎಂಬ ಅಂಶ ದಾಖಲೆಗಳಲ್ಲಿ ಎತ್ತಿ ತೋರಿಸುತ್ತಿದೆ, ಆದರೂ ಈ ಅಂಶವನ್ನು ಪರಿಗಣಿಸದೆ ದೂರು ನೀಡಲಾಗಿದೆ. ಹೀಗಾಗಿ ಪ್ರಕರಣ ರದ್ದುಗೊಳಿಸುತ್ತಿರುವುದಾಗಿ ಪೀಠ ತಿಳಿಸಿದೆ.
ಪ್ರಕರಣದ ವಿವರ: ಬೆಂಗಳೂರಿನ ರಸಿಕ್ ಲಾಲ್ ಮತ್ತು ಪುರುಷೋತ್ತಮ್ ಎಂಬುವರ ವಿರುದ್ಧ ವ್ಯಕ್ತಿಯೊಬ್ಬರು ತಮ್ಮ ಮನೆಯ ನೆರೆಹೊರೆಯವರು ಮನೆ ಒತ್ತುವರಿಗಾರಿ ನಿರಂತರ ಕಿರುಕುಳ ನೀಡುತ್ತಿದ್ದಾರೆ. ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದಲ್ಲಿ ಐಪಿಸಿಯ ವಿವಿಧ ಸೆಕ್ಷನ್‌ಗಳು ಸೇರಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯಿದೆಯ ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಿದ್ದರು. ಪ್ರಕರಣ ಸಂಬಂಧ ರಾಮಮೂರ್ತಿ ನಗರದ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.












Click it and Unblock the Notifications