SBI: ಎಸ್‌ಬಿಐ, ಪಿಎನ್‌ಬಿ ವಹಿವಾಟು ಸ್ಥಗಿತ ಸುತ್ತೋಲೆಗೆ ಸರ್ಕಾರದ ತಡೆ
ಬೆಂಗಳೂರು, ಆಗಸ್ಟ್ 17: ಕರ್ನಾಟಕ ಸರ್ಕಾರ ತನ್ನ ಮಹತ್ವದ ಸುತ್ತೋಲೆಯೊಂದನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಬುಧವಾರ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗಳನ್ನು ಮುಕ್ತಾಯಗೊಳಿಸಬೇಕು ಮತ್ತು ಠೇವಣಿಗಳನ್ನು ತಕ್ಷಣದಿಂದ ಹಿಂದಕ್ಕೆ ಪಡೆಯಬೇಕು ಎಂದು ಸುತ್ತೋಲೆಯೊಂದನ್ನು ಹೊರಡಿಸಿತ್ತು. ವಿರೋಧ ಪಕ್ಷಗಳ ನಾಯಕರು ಈ ಕುರಿತು ಟೀಕೆಗಳನ್ನು ಸಹ ಮಾಡಿದ್ದರು.
ಹಿಂದಿನ ಸುತ್ತೋಲೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವ ಬಗ್ಗೆ ಮಾನ್ಯ ಮುಖ್ಯ ಮಂತ್ರಿಯವರಿಂದ ಅನುಮೋದಿಸಲ್ಪಟ್ಟ ಹೊಸ ಸುತ್ತೋಲೆಯನ್ನು ಡಾ. ಪಿ. ಸಿ. ಜಾಫರ್, ಸರ್ಕಾರದ ಕಾರ್ಯದರ್ಶಿ (ಆ ಮತ್ತು ಸಂ), ಆರ್ಥಿಕ ಇಲಾಖೆ ಇವರು ಹೊರಡಿಸಿದ್ದಾರೆ. ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.

ಈ ಹೊಸ ಸುತ್ತೋಲೆಯು ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗಳನ್ನು ಮುಕ್ತಾಯಗೊಳಿಸುವುದು ಹಾಗೂ ಇನ್ನು ಮುಂದೆ ಸದರಿ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಠೇವಣಿಗಳ ಹೂಡಿಕೆಗಳನ್ನು ಮಾಡಬಾರದೆಂಬ ಸುತ್ತೋಲೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದರ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ಎಸ್‌ಬಿಐ ಮತ್ತು ಪಿಎನ್‌ಬಿ ಬ್ಯಾಂಕ್ ಪತ್ರವನ್ನು ಉಲ್ಲೇಖಿಸಲಾಗಿದೆ.
ಹೊಸ ಸುತ್ತೋಲೆಯ ವಿವರಗಳು: ಉಲ್ಲೇಖಿತ ಸುತ್ತೋಲೆಯಲ್ಲಿ ರಾಜ್ಯ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಮತ್ತಿತರ ಸಂಸ್ಥೆಗಳು, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗಳನ್ನು ಮುಕ್ತಾಯಗೊಳಿಸುವುದು ಮತ್ತು ಠೇವಣಿಗಳನ್ನು ತಕ್ಷಣದಿಂದ ಹಿಂದಕ್ಕೆ ಪಡೆಯುವಂತೆ ಸೂಚಿಸಲಾಗಿತ್ತು.
ಎಸ್.ಬಿ.ಐ ಬ್ಯಾಂಕಿನ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ವಿನೋದ್ ಜೈಸ್ವಾಲ್ ಅವರು 15 ದಿನಗಳ ಕಾಲಾವಕಾಶವನ್ನು ಕೋರಿ ಮನವಿ ಪತ್ರವನ್ನು ಸಲ್ಲಿಸಿರುತ್ತಾರೆ. ಮುಂದುವರದು ದಿನಾಂಕ 16.08.24ರಂದು ಸರ್ಕಾರದ ಅವರ ಮುಖ್ಯ ಕಾರ್ಯದರ್ಶಿಯವರು (ಆರ್ಥಿಕ ಇಲಾಖೆ ) ಮತ್ತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ , ಕೆ.ಎಸ್.ಪಿ.ಸಿ.ಬಿ. ಸಂಸ್ಥೆಯು ನಿಶ್ಚಿತ ಠೇವಣಿಯಲ್ಲಿ ಹೂಡಿರುವ ಹಣವನ್ನು ಮರುಪಾವತಿಸುವ ವಿಷಯವನ್ನು ಇತ್ಯರ್ಥಗೊಳಿಸಲು ತಮ್ಮ ಮನವಿಯನ್ನು ಸಲ್ಲಿಸಿರುತ್ತಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ವಿಭಾಗೀಯ ವ್ಯವಸ್ಥಾಪಕ ದೀಪಕ್ ಕುಮಾರ್ ಶ್ರೀವಾತ್ಸವ ಅವರು 15 ದಿನಗಳ ಕಾಲಾವಕಾಶವನ್ನು ಕೋರಿ ಮನವಿ ಪತ್ರವನ್ನು ಸಲ್ಲಿಸಿರುತ್ತಾರೆ ಹಾಗೂ ದಿನಾಂಕ 16.08.24ರಂದು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಸಕಾರಾತ್ಮಕವಾಗಿ ಸ್ಪಂದಿಸಿ, ಕೆ.ಐ.ಎ.ಡಿ.ಬಿ. ಸಂಸ್ಥೆಯ ನಿಶ್ಚಿತ ಠೇವಣಿಯನ್ನು ಮರುಪಾವತಿಸುವ ಕುರಿತು ಸಮಯಾವಕಾಶವನ್ನು ಕೋರಿರುತ್ತಾರೆ.
ಎಸ್.ಬಿ.ಐ ಮತ್ತು ಪಿ.ಎನ್.ಬಿ ಬ್ಯಾಂಕ್ ಗಳ ಕೋರಿಕೆಯ ಹಿನ್ನೆಲೆಯಲ್ಲಿ ದಿನಾಂಕ 12.08.2024 ರಂದು ಹೊರಡಿಸಿರುವ ಸುತ್ತೋಲೆಯನ್ನು 15 ದಿನಗಳವರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ವಿರೋಧ ಪಕ್ಷಗಳ ಟೀಕೆ: ಖಾತೆಗಳನ್ನು ಮುಕ್ತಾಯಗೊಳಿಸಬೇಕು ಮತ್ತು ಠೇವಣಿಗಳನ್ನು ತಕ್ಷಣದಿಂದ ಹಿಂದಕ್ಕೆ ಪಡೆಯಬೇಕು ಎಂಬ ಕರ್ನಾಟಕ ಸರ್ಕಾರದ ಸುತ್ತೋಲೆಗೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಈ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು.
'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳನ್ನು ಮುಕ್ತಾಯಗೊಳಿಸಲು ಎಲ್ಲ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮ-ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳಿಗೆ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರದ ನಡೆ ಅತ್ಯಂತ ಅಸಂಬದ್ಧವಾಗಿದ್ದು, ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ' ಎಂದು ಹೇಳಿದ್ದರು.
'ಸಿಎಂ ಸಿದ್ದರಾಮಯ್ಯನವರೇ, ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಯೂನಿಯನ್ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು 187 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ಈಗ ಜಗಜ್ಜಾಹೀರಾಗಿದೆ. ಅವ್ಯವಹಾರ ನಡೆದಿದೆ ಎನ್ನುವುದೇ ಮಾನದಂಡವಾದರೆ, ಯ್ಯುನಿಯನ್ ಬ್ಯಾಂಕ್ ಖಾತೆಗಳಿಗೆ ಈ ಆದೇಶ ಯಾಕೆ ಅನ್ವಯಿಸುವುದಿಲ್ಲ? ಎಸ್‌ಬಿಐ ಮತ್ತು ಪಿಎನ್‌ಬಿ ಬ್ಯಾಂಕ್‌ಗಳಿಗೆ ಮಾತ್ರ ಏಕೆ ನಿಷೇಧ?' ಎಂದು ಅಶೋಕ ಪ್ರಶ್ನೆ ಮಾಡಿದ್ದರು.
'ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಆರ್‌ಬಿಐ ನಿಯಂತ್ರಣದಲ್ಲಿರುತ್ತವೆ. ರಾಜ್ಯ ಸರ್ಕಾರಕ್ಕೆ ಏನಾದರೂ ತಕಾರರಿದ್ದಾರೆ ಆರ್‌ಬಿಐಗೆ ದೂರು ಸಲ್ಲಿಸಬೇಕೆ ಹೊರತು ಈ ರೀತಿ ರಾಷ್ಟೀಯ ಬ್ಯಾಂಕ್‌ಗಳನ್ನ ಏಕಾಏಕಿ ನಿಷೇಧ ಮಾಡುವುದು ಎಷ್ಟು ಸರಿ?, ಇದು ಆರ್‌ಬಿಐ ಅಂತಹ ಸ್ವಾಯತ್ತ ಸಂಸ್ಥೆಗೆ ಮಾಡಿದ ಅಪಮಾನವಲ್ಲವೇ?' ಎಂದು ಕೇಳಿದ್ದರು.
'ತಮ್ಮ ಸರ್ಕಾರದಲ್ಲಿ ನಡೆಯುತ್ತಿರುವ ಸರಣಿ ಹಗರಣಗಳ ನಡುವೆ ಏಕಾಏಕಿ ಈ ರೀತಿ ಸುತ್ತೋಲೆ ಹೊರಡಿಸಿರುವುದು ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನ ಮೂಡಿಸಿದೆ. ಈ ನಿಗೂಢ ನಡೆಯ ಹಿಂದಿರುವ ನಿಜವಾದ ಉದ್ದೇಶವೇನು ಎಂದು ತಾವು ಸ್ಪಷ್ಟನೆ ನೀಡಬೇಕು. ಅಲ್ಲಿವರೆಗೂ ಈ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇನೆ' ಎಂದು ಒತ್ತಾಯಿಸಿದ್ದರು.












Click it and Unblock the Notifications