'Save Nandini', 'Go Back Amul': ಕರ್ನಾಟಕಕ್ಕೆ ಅಮೂಲ್ ಎಂಟ್ರಿ, ನಂದಿನಿಗೆ ಸಂಕಷ್ಟ- ಕನ್ನಡಿಗರಿಂದ ಭಾರೀ ಆಕ್ರೋಶ
'ಅಮೂಲ್ ನಿಮಗೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ನೀಡುತ್ತದೆ', ' ಇದು ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಿರುತ್ತದೆ', 'ನೀವು ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು', 'ತಾಜಾ ಹಾಲಿನ ತಿನಿಸುಗಳು ಶೀಘ್ರದಲ್ಲೇ ಬೆಂಗಳೂರಿಗೆ ಆಗಮಿಸುತ್ತಿವೆ,' 'ಕೆಂಗೇರಿಯಿಂದ ವೈಟ್‌ಫೀಲ್ಡ್‌ಗೆ, ತಾಜಾತನದ ಹೊಸ ಅನುಭವ' ಎಂಬಂತಹ ಪ್ರೋಮುಗಳು, ಡಿಜಿಟಲ್ ಬ್ಯಾನರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಗುಜರಾತ್ ಮೂಲದ ಹಾಲು ಉತ್ಪಾದಕರ ಸಹಕಾರ ಸಂಘ ಅಮೂಲ್ ಮಾಡುತ್ತಿರುವ ಈ ಪ್ರಮೋಶನ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದು ಕನ್ನಡಿಗರನ್ನು ಆಳವಾಗಿ ಕಲುಕಿದೆ. ಮತ್ತೊಂದೆಡೆ, ಅಮೂಲ್ ಕರ್ನಾಟಕ ಮಾರುಕಟ್ಟೆಗೆ ಪ್ರವೇಶವನ್ನು ಘೋಷಿಸಿದಾಗಿನಿಂದ #GoBackAmul, #SaveNandini ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿವೆ.

ಅಮೂಲ್ ಪ್ರವೇಶದಿಂದ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಮ್ಮ ಬ್ರಾಂಡ್ ನಂದಿನಿಗೆ ಅಪಾಯ ಎದುರಾಗಲಿದೆ ಎಂಬ ಆತಂಕ ಕನ್ನಡಿಗರಲ್ಲಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಹ್ಯಾಶ್‌ಟ್ಯಾಗ್ ಸಂಘರ್ಷಕ್ಕೆ ಕನ್ನಡಿಗರು ಇಳಿದಿದ್ದಾರೆ.
ಈ ಹಿಂದೆ ಮಂಡ್ಯದಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ ಅಮೂಲ್ ಮತ್ತು ನಂದಿನಿ ನಡುವಿನ ಸಹಕಾರಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒತ್ತಾಯಿಸಿದ್ದರು. ಆ ನಂತರ ನಡೆಯುತ್ತಿರುವ ಈ ಬೆಳವಣಿಗೆಗಳು ನಮ್ಮ ರೈತರ ಭವಿಷ್ಯಕ್ಕೆ ಕುತ್ತು ತಂದಿವೆ ಎಂಬ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬಂದಿವೆ.

ಕರ್ನಾಟಕದ ಡೈರಿ ಮಾರುಕಟ್ಟೆಗೆ ಅಮೂಲ್ ಪ್ರವೇಶ ಮಾಡುತ್ತಿರುವುದು ವಿಶೇಷವಾಗಿ ಹೈನುಗಾರರನ್ನು ಆತಂಕಕ್ಕೆ ತಳ್ಳಿದೆ. ಇದು ವಿರೋಧ ಪಕ್ಷಗಳ ನಾಯಕರು ಮತ್ತು ಕನ್ನಡ ಪರ ಸಂಘಟನೆಗಳನ್ನು ಕೆರಳಿಸಿದೆ.
ಅಮೂಲ ಮತ್ತು ನಂದಿನಿ ಸಂಘರ್ಷದಲ್ಲಿ ನಮ್ಮ ರಾಜ್ಯದ ಬ್ರ್ಯಾಂಡ್ ಸೋಲುತ್ತಿದೆ ಎಂಬ ಮಾತುಗಳನ್ನು ಟ್ವಿಟಿಗರು ಆಡಿದ್ದಾರೆ. ನಂದಿನಿಯ ಬ್ರ್ಯಾಂಡ್ ಮೌಲ್ಯವನ್ನು ಉತ್ತೇಜಿಸಲು ಮತ್ತು ಹೆಚ್ಚಿಸಲು ಹಾಲು ಒಕ್ಕೂಟವು ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಹಲವರು ಆರೋಪಿಸಿದ್ದಾರೆ ಎಂದು ಕೆಎಂಎಫ್ ನಿರ್ದೇಶಕರಲ್ಲಿ ಒಬ್ಬರಾದ ಆನಂದ್ ಕುಮಾರ್ 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದ್ದಾರೆ. ಬೇಡಿಕೆಗೆ ತಕ್ಕಂತೆ ಬೆಲೆ ನಿಗದಿ ಮಾಡುವ ಸ್ವಾಯತ್ತತೆಯನ್ನು ಸರಕಾರ ಹೈನುಗಾರರಿಗೆ ನೀಡಬೇಕು ಎಂದೂ ಅವರು ಮನವಿ ಮಾಡಿದ್ದಾರೆ.
'ಅಮೂಲ್‌ಗಿಂತ ಉತ್ತಮ ಗುಣಮಟ್ಟದ ಹಾಲನ್ನು ಹೊಂದಿದ್ದರೂ ನಂದಿನಿ ಬ್ರಾಂಡ್‌ನ ಮಾರುಕಟ್ಟೆ ಮತ್ತು ಪ್ರಚಾರದಲ್ಲಿ ನಾವು ತುಂಬಾ ಹಿಂದುಳಿದಿದ್ದೇವೆ. ಅದಕ್ಕಾಗಿಯೇ #SaveNandini ಮುಖ್ಯವಾಗಿದೆ. ಅಮೂಲ್ ಹಾಲಿನ ಬಳಕೆಯು ಕೇವಲ ಶೇಕಡಾ 10 ರಷ್ಟಿದ್ದರೂ, ಅವರ ಜಾಹೀರಾತು ಶೇಕಡಾ 90 ರಷ್ಟಿದೆ. ಇದು ಕರ್ನಾಟಕದ ಹೈನುಗಾರರನ್ನು ಅಪಾಯಕ್ಕೆ ತಳ್ಳಲಿದೆ. ನಂದಿನಿಯ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ನಾವು ದೃಢವಾದ ಜಾಹೀರಾತು ಅಭಿಯಾನವನ್ನು ಜಾರಿಗೊಳಿಸಬೇಕಾಗಿದೆ' ಎಂದು ಕುಮಾರ್ ಹೇಳಿದ್ದಾರೆ.

'ನಂದಿನಿ ಉತ್ಪನ್ನಗಳ ಬೆಲೆ ನಿಗದಿಯಲ್ಲಿ ಅಮೂಲ್‌ನಂತೆ ಹೈನುಗಾರರಿಗೂ ಮುಕ್ತ ಅವಕಾಶ ನೀಡಬೇಕು. ಸಬ್ಸಿಡಿಗಾಗಿ ಅವರು ಸರ್ಕಾರದ ಮೇಲೆ ಅವಲಂಬಿತರಾಗಿರುವುದು ನಮ್ಮನ್ನು ಈ ಪರಿಸ್ಥಿತಿಗೆ ಕೊಂಡೊಯ್ಯಲು ಕಾರಣವಾಗಿದೆ. ಸರ್ಕಾರವು ಹಾಲಿನ ಮೇಲೆ ಲೀಟರ್‌ಗೆ 5-10 ರೂ ಹೆಚ್ಚುವರಿ ನೀಡಲಿ. ಮುಂದಿನ ದಿನಗಳಲ್ಲಿ ನಾವು ಈ ವಿಷಯವನ್ನು ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಅಮೂಲ್ ವಿರುದ್ಧ ಪ್ರತಿಭಟನೆಗೆ ಕರೆ ನೀಡುತ್ತೇವೆ' ಎಂದೂ ಅವರು ತಿಳಿಸಿದ್ದಾರೆ.
ಈ ವಿಚಾರದ ಕುರಿತು ಕಟುವಾಗಿ ಟೀಕಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, 'ಅಮೂಲ್ ಕರ್ನಾಟಕಕ್ಕೆ ಬಂದರೆ ಕನ್ನಡಿಗರಿಗೆ ಧಕ್ಕೆಯಾಗಲಿದೆ' ಎಂದು ತಿಳಿಸಿದ್ದಾರೆ. 'ನರೇಂದ್ರ ಮೋದಿ, ಅಮಿತ್ ಶಾ ಮತ್ತು ಅವರ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಎಚ್ಚರದಿಂದಿರಿ. ಅವರು ಕನ್ನಡಿಗರಿಗೆ ಸೇರಿದ ಎಲ್ಲ ಆಸ್ತಿಗಳನ್ನು ಮಾರುತ್ತಾರೆ. ನಮ್ಮ ಬ್ಯಾಂಕುಗಳನ್ನು ನಾಶಪಡಿಸಿದ ನಂತರ, ಅವರು ಈಗ ನಂದಿನಿ ಕೆಎಂಎಫ್ ಅನ್ನು ನಾಶಮಾಡಲು ನಿರ್ಧರಿಸಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.
'ನಂದಿನಿ ನಮ್ಮ ರೈತರು ನಿರ್ಮಿಸಿದ ಬ್ರ್ಯಾಂಡ್. ಕೇಂದ್ರ ಸಹಕಾರಿ ಸಚಿವ ಅಮಿತ್ ಶಾ ಅವರು KMF ಮತ್ತು ಅಮೂಲ್ ವಿಲೀನದ ಸಾಧ್ಯತೆಯ ಬಗ್ಗೆ ಮಾತನಾಡಿದ ದಿನದಿಂದ ರಾಜ್ಯದ ಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ' ಎಂದು ಅವರು ಹೇಳಿದ್ದಾರೆ.
'ಕನ್ನಡಿಗರು ವಿಲೀನದ ಪರಿಕಲ್ಪನೆಯನ್ನು ವಿರೋಧಿಸುತ್ತಿದ್ದಂತೆ, ಅಮೂಲ್ ಈಗ ಹಿಂಬಾಗಿಲ ಪ್ರವೇಶವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಗುಜರಾತ್ ಮೂಲದ ಅಮುಲ್ ಈ ಹಿಂದೆ ಹಾಲು ಮತ್ತು ಮೊಸರು ಮಾರಾಟ ಮಾಡಲು ಕರ್ನಾಟಕದ ಮಾರುಕಟ್ಟೆಗೆ ಪ್ರವೇಶಿಸಲು ಪ್ರಯತ್ನಿಸಿತ್ತು. ಆಗ ನಾವು ಅದಕ್ಕೆ ಅವಕಾಶ ನೀಡಿರಲಿಲ್ಲ, ಆದರೆ ಈಗ ಬಿಜೆಪಿ ಅವರನ್ನು ಮುಕ್ತ ಕಂಠದಿಂದ ಸ್ವಾಗತಿಸುತ್ತಿದೆ. ಕೆಎಂಎಫ್‌ನ ಪ್ರತಿನಿತ್ಯ 99 ಲಕ್ಷ ಲೀಟರ್ ಹಾಲಿನ ಸಂಗ್ರಹಣೆ ಈಗ 71 ಲಕ್ಷ ಲೀಟರ್‌ಗೆ ಕುಸಿದಿದೆ' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications