ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸತೀಶ್ ಜಾರಕಿಹೊಳಿ
ಬೆಂಗಳೂರು, ಮೇ 20: ಕರ್ನಾಟಕ ನೂತನ ಸಚಿವರಾಗಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಸತೀಶ್ ಜಾರಕಿಹೊಳಿ ಅವರು ಬುದ್ಧ, ಬಸವ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸೋಲಿಲ್ಲದ ಸರದಾರ ಎಂದೇ ಖ್ಯಾತರಾದ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿಯ ಕಾರ್ಯಾಧ್ಯಕ್ಷರೂ ಕೂಡ ಹೌದು. ಸದಾ ಮೌಢ್ಯಾಚರಣೆಗಳ ವಿರುದ್ಧ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತ್ತಾ ಬಂದಿದ್ದಾರೆ.

ಈ ಬಾರಿ ವಿಧಾನಸಭಾ ಚುನಾವಣೆ ಸೇರಿದಂತೆ ಎಲ್ಲ ವಿಧಾನಸಭಾ ಚುನಾವಣೆಗೆ ಅಮಾವಾಸ್ಯೆ ಇಲ್ಲವೇ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ವೈಚಾರಿಕ ನಿಲುವನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ.
ರಾಜ್ಯ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾದ ಸತೀಶ್ ಜಾರಕಿಹೊಳಿ, ಅಹಿಂದ ಸಂಘಟನೆ ಮೂಲಕ ಸಿಎಂ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಸತೀಶ್ ಜಾರಕಿಹೊಳಿ ಅವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ. ಅವರ ತಂದೆ ಲಕ್ಷ್ಮಣ ರಾವ್ ಜಾರಕಿಹೊಳಿ ಕಬ್ಬು ಬೆಳೆಗಾರರು ಹಾಗೂ ಉದ್ಯಮಿ.

ಸತೀಶ್ ಜಾರಕಿಹೊಳಿ ಅವರು ಮೌಢ್ಯ ವಿರೋಧಿ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಮಾನವ ಬಂಧುತ್ವ ವೇದಿಕೆಯನ್ನು ಸ್ಥಾಪಿಸಿ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಾಂವಿಧಾನಿಕ ಮೌಲ್ಯಗಳಾದ ಸ್ವಾತಂತ್ರ್ಯ, ಮಾನವೀಯ ಮೌಲ್ಯ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳ ಆಧಾರದಲ್ಲಿ ಮಾನವ ಬಂಧುತ್ವ ವೇದಿಕೆ ಕೆಲಸ ಮಾಡುತ್ತದೆ.
ಸತೀಶ್ ಜಾರಕಿಹೊಳಿ ಅವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಅವರೂ ಸಹ ರಾಜಕಾರಣ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. 2000 ರಲ್ಲಿ ಖಂಡಸಾರಿ ಸಕ್ಕರೆ ಉತ್ಪಾದನಾ ಘಟಕವನ್ನು ಆರಂಭಿಸಿದ ಸತೀಶ್, ಅತ್ಯಂತ ಕಡಿಮೆ ಅವಧಿಯಲ್ಲಿ ಯಶಸ್ಸು ಕಂಡವರು. 2016ರಲ್ಲಿ ಬೆಳಗಾವಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಹೊಸ ಕಂಪನಿಯನ್ನು ಸ್ಥಾಪಿಸಿದರು. ಮೂರನೇ ಸಕ್ಕರೆ ಕಾರ್ಖಾನೆಯನ್ನು ಯರಗಟ್ಟಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಅಡಿಯಲ್ಲಿ ನಿರ್ಮಿಸುವ ಕಾರ್ಯವು ಚಾಲ್ತಿಯಲ್ಲಿದೆ.












Click it and Unblock the Notifications