ಇನ್ನು 10 ವರ್ಷಕ್ಕೆ ನಾನೇ ಸಿಎಂ : ಜಾರಕಿಹೊಳಿ
ಬೆಳಗಾವಿ, ಜನವರಿ 23 : 'ಯಾರೂ ಕೂಡ ನನ್ನನ್ನು ನೇರವಾಗಿ ಸಂಪರ್ಕಿಸಿಲ್ಲ. ಕಾಂಗ್ರೆಸ್ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ನನ್ನ ಅಸಮಾಧಾನ ಇರುವುದು ಜಿಲ್ಲಾ ರಾಜಕಾರಣದಲ್ಲಿ. ನನ್ನ ಬೆಂಬಲಿಗರಿಗೆ ಟಿಕೆಟ್ ತಪ್ಪಿಸುವ ಕೆಲಸ ನಡೆಯುತ್ತಿದೆ' ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಎಐಸಿಸಿ ಕಾರ್ಯದರ್ಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ಸತೀಶ ಜಾರಕಿಹೊಳಿ, 'ಯಾವುದೇ ಕಾರಣಕ್ಕೂ ಜೆಡಿಎಸ್ ಸೇರಲ್ಲ' ಎಂದು ಸ್ಪಷ್ಟ ಪಡಿಸಿದರು.
'ಬೆಳಗಾವಿ ಜಿಲ್ಲಾ ರಾಜಕಾರಣದ ಬಗ್ಗೆ ನನಗೆ ಅಸಮಾಧಾನ ಇರುವುದು ನಿಜ. ನನ್ನ ಬೆಂಬಲಿಗರಿಗೆ ಟಿಕೆಟ್ ತಪ್ಪಿಸುವ ಕೆಲಸ ನಡೆಯುತ್ತಿದೆ. ಇದನ್ನು ನಾನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ' ಎಂದು ಹೇಳಿದರು.
'ಮುಂದಿನ 10 ವರ್ಷದ ಬಳಿಕ ನಾನು ಮುಖ್ಯಮಂತ್ರಿ ಅಭ್ಯರ್ಥಿ. ಆಗ ನಾನು ಸಿಎಂ ಸ್ಥಾನಕ್ಕೆ ಕ್ಲೇಮ್ ಮಾಡ್ತಿನಿ' ಎಂದು ಸತೀಶ ಜಾರಕಿಹೊಳಿ ಹೇಳಿದರು. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಪಕ್ಷಾಂತರದ ಪರ್ವ
2018ರ ಚುನಾವಣೆ ಹತ್ತಿರವಾಗುತ್ತಿದೆ. ಈಗ ವಿವಿಧ ನಾಯಕರು ಪಕ್ಷಾಂತರ ಮಾಡುತ್ತಿದ್ದಾರೆ. ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಜೆಡಿಎಸ್ ಸೇರ್ಪಡೆ ಸುದ್ದಿಯನ್ನು ಸತೀಶ ಜಾರಕಿಹೊಳಿ ಅವರು ಇಂದು ತಳ್ಳಿ ಹಾಕಿದರು.

ಮುಖ್ಯಮಂತ್ರಿಯಾಗುವ ಕನಸಿದೆ
'ನಾನು ಪಕ್ಷ ಬಿಡಬೇಕು ಎಂದರೆ ನನ್ನ ತತ್ವ ಸಿದ್ಧಾಂತಗಳಿಗಾಗಿ ಬಿಡಬೇಕು. ಅದರ ಹೊರತು ಅಧಿಕಾರಕ್ಕಾಗಿ ಅಲ್ಲ. ಮಂತ್ರಿಸ್ಥಾನಕ್ಕಾಗಿಯೂ ಅಲ್ಲ. ನನಗೆ ಮುಖ್ಯಮಂತ್ರಿ ಆಗುವ ಕನಸಿದೆ. ಆದರೆ, ಅದು ಈಗಲ್ಲ' ಎಂದು ಸತೀಶ ಜಾರಕಿಹೊಳಿ ಹೇಳಿದರು.

ಮುಖ್ಯಮಂತ್ರಿ ಸ್ಥಾನ ಕೇಳುವೆ
'ಇನ್ನೊಬ್ಬರಂತೆ ನಾನು ಮುಖ್ಯಮಂತ್ರಿ ಆಗಲೂ ಅಡ್ಡದಾರಿ ಬಳಸುವುದಿಲ್ಲ. ಪಕ್ಷ ಸಂಘಟನೆ ಮಾಡುವೆ. ಮುಂದಿನ ಎರಡು ವಿಧಾನಸಭೆ ಚುನಾವಣೆ ಬಳಿಕ ನಾನು ಮುಖ್ಯಮಂತ್ರಿ ಸ್ಥಾನ ಕೇಳುವೆ' ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಆಗುವ ಕನಸು ತೆರೆದಿಟ್ಟರು.

ಬೆಳಗಾವಿ ಜಿಲ್ಲಾ ರಾಜಕಾರಣ
'ಬೆಳಗಾವಿ ಜಿಲ್ಲಾ ರಾಜಕಾರಣದ ಬಗ್ಗೆ ನನಗೆ ಅಸಮಾಧಾನವಿದೆ. ನನ್ನ ಬೆಂಬಲಿಗರಿಗೆ ಟಿಕೆಟ್ ಕೈ ತಪ್ಪಿಸುವ ಕೆಲಸವಾಗುತ್ತಿದೆ. ಈ ಬಗ್ಗೆ ನಾನು ಪಕ್ಷದ ವರಿಷ್ಠರ ಗಮನಕ್ಕೂ ನಾನು ತಂದಿದ್ದೇನೆ' ಎಂದರು.












Click it and Unblock the Notifications