Satish Jarkiholi: ಕೆಪಿಸಿಸಿ ಪಟ್ಟದ ಜೊತೆಗೆ ಆ ಸ್ಥಾನಕ್ಕೆ ಹೈಕಮಾಂಡ್ ಬಳಿ ಡಿಮ್ಯಾಂಡ್ ಇಟ್ಟ ಸತೀಶ್ ಜಾರಕಿಹೊಳಿ
ಬೆಂಗಳೂರು, ಫೆಬ್ರವರಿ 15: ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ದಲಿತ ನಾಯಕರೆಲ್ಲಾ ಒಂದಾದಂತೆ ಕಾಣುತ್ತಿದೆ. ಕೆಪಿಸಿಸಿ ಹಾಲಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ವಿರುದ್ಧ ಕಾಂಗ್ರೆಸ್ ಹಲವು ಸಚಿವರು ಹಾಗೂ ದಲಿತ ನಾಯಕರು ಮುಂದಾಗಿದ್ದು, ಹೈಕಮಾಂಡ್ ಮುಂದೆ ಸಚಿತ ಸತೀಶ್ ಜಾರಕಿಹೊಳಿ ಎರಡು ಬೇಡಿಕೆಯನ್ನ ಇಟ್ಟಿದ್ದಾರೆ.
ಈಗಾಗಲೇ ಎಎಐಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ನವದೆಹಲಿಯಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿಯಾಗಿದ್ದು, ರಾಜ್ಯ ರಾಜಕೀಯದ ಕುರಿತು ಸುಧೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೈಕಮಾಂಡ್ ಮುಂದೆ ಎರಡು ಬೇಡಿಕೆ ಇಟ್ಟಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ ಅವರು ಕೂಡ ಮೂರು ವರ್ಷ ಮಂತ್ರಿ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ನಿಭಾಯಿಸುತ್ತೇನೆ ಎಂದು ಬೇಡಿಕೆ ಇಟ್ಟಿದ್ದಾರೆ. ಡಿ ಕೆ ಶಿವಕುಮಾರ್ ಅವರಂತೆ ನನಗೂ ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಚಿವ ಸ್ಥಾನದ ಜವಾಬ್ದಾರಿಯನ್ನ ನೀಡಿ ಎಂದು ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರ ಬಳಿ ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಸಚಿವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣೀಟ್ಟಿದ್ರು. ಆಗ ಕಾಂಗ್ರೆಸ್ ವರಿಷ್ಠರು ಲೋಕಸಭಾ ಚುನಾವಣೆಯ ಬಳಿಕ ಅಧ್ಯಕ್ಷರ ಬದಲಾವಣೆ ಮಾಡಲಾಗುವುದು ಎಂದು ಹೇಳಿತ್ತು. ಇದೀಗ ಲೋಕಸಭಾ ಚುನಾವಣೆ ಮುಗಿದು ಹಲವು ತಿಂಗಳುಗಳೇ ಕಳೆದಿದ್ದು, ಇದೀಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಚಿವ ಸತೀಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಕಳೆದ ವಾರ ದೆಹಲಿ ವರಿಷ್ಠರನ್ನ ಭೇಟಿಯಾದ ಸತೀಶ್ ಜಾರಕಿಹೊಳಿ ಅವರು, ಈ ಎರಡು ಬೇಡಿಕೆಯನ್ನ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಸಚಿವ ಸ್ಥಾನದ ಜೊತೆಗೆ ಅಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ ಎಂದು ತಿಳಿಸಿದ್ದಾರೆ. ಡಿಕೆ ಶಿವಕುಮಾರ್ ರೀತಿ ನನಗೂ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ. ಮೂರು ವರ್ಷ ಮಂತ್ರಿ ಸ್ಥಾನದ ಜೊತೆಗೆ ಅಧ್ಯಕ್ಷ ಗಾದಿಯನ್ನು ಸಹ ನಿಭಾಯಿಸುತ್ತೇನೆ ಪಕ್ಷದ ಸಾರಥ್ಯಕ್ಕೆ ನಾನು ರೆಡಿ ಅಂತ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದ್ರೆ ಒಳ್ಳೆಯದೇ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ಯಥಾಸ್ಥಿತಿ ಹಾಗೇ ಇದೆ ನಮ್ಮ ಕೈಯಲ್ಲಿ ಏನು ಇಲ್ಲ ಹೈಕಮಾಂಡ್ ನಿರ್ಧಾರ ಎಂದು ಹೇಳಿದರು. ಎಲ್ಲರ ಅಭಿಮಾನಿಗಳು ಅವರವ ನಾಯಕ ಸಿಎಂ ಆಗಬೇಕು ಎಂದು ಹೇಳುತ್ತಾರೆ, ಹಾಗೆ ನಮ್ಮ ಅಭಿಮಾನಿಗಳು ನಾನು ಸಿಎಂ ಆಗಬೇಕು ಅಂತ ಹೇಳ್ತಾರೆ ಅದರಲ್ಲಿ ತಪ್ಪೇನು ಇಲ್ಲ, ಅದ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಖರ್ಗೆಯವರೇ ಹೇಳಿದ್ದಾರೆ, ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ, ಬದಲಾವಣೆ ಆಗಬಹುದು ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಕೆಸಿ ವೇಣುಗೋಪಾಲ, ಸುರ್ಜೆವಾಲಾ ಜೊತೆಗೆ ಮಾತನಾಡಿದ್ದು, ಮಂತ್ರಿ ಸ್ಥಾನದ ಜೊತೆಗೆ ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ಹಿಂದೇಟು ಹಾಕುತ್ತಿದ್ದಾರೆ. ಒನ್ ಮ್ಯಾನ್ ಒನ್ ಪೋಸ್ಟ್ ವಿರುದ್ಧ ನಿರ್ಣಯಿಸಲ್ಲ. ಉದಯಪುರ ಡಿಕ್ಲರೇಷನ್ ಗೆ ವಿರುದ್ಧವಾಗಿ ನಿರ್ಧಾರ ಇಲ್ಲ ಅದು ಕಷ್ಟ ಸಾಧ್ಯ ಎಂದು ಹೈಕಮಾಂಡ್ ನಾಯಕರು ತಿಳಿಸಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ಜೊತೆಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ಹೈಕಮಾಂಡ್ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದೆ.












Click it and Unblock the Notifications