ಬಿಜೆಪಿ ಮಾಡದ ಕೆಲಸ ಕಾಂಗ್ರೆಸ್ ಮಾಡಿದೆ: ಸುರ್ಜೇವಾಲ
ಬೆಂಗಳೂರು, ನವೆಂಬರ್ 06: ''ಕಾಂಗ್ರೆಸ್ ಪಕ್ಷವು ಕಾರ್ಮಿಕರ ಮಗನನ್ನು, ದಲಿತ ವ್ಯಕ್ತಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದೆ, ಇದು ಬಿಜೆಪಿಯಲ್ಲಿ ಮಾಡಲು ಸಾಧ್ಯವಿದೆಯೇ. ಬಿಜೆಪಿ ಮಾಡದ ಕೆಲಸ ಕಾಂಗ್ರೆಸ್ ಮಾಡಿದೆ'' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸರ್ಜೇವಾಲ ಪ್ರಶ್ನಿಸಿದರು.
ಮಲ್ಲಿಕಾರ್ಜುನ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಸರ್ವೋದಯ ಸಮಾವೇಶದಲ್ಲಿ ರಣದೀಪ್ ಸಿಂಗ್ ಸರ್ಜೇವಾಲ ಅವರು ಮಾತನಾಡಿದರು.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ದಲಿತರು, ಬಡವರ ಪರ ಹೋರಾಟ ಮಾಡಿದ ಹಾಗೂ ಕಾರ್ಮಿಕರ ಮಗ, ದಲಿತ ವ್ಯಕ್ತಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದು ಬಿಜೆಪಿ ಪಕ್ಷದಲ್ಲಿ ಇಂತಹ ಬೆಳವಣಿಗೆ ಸಾಧ್ಯವಿಲ್ಲ. ಖರ್ಗೆ ಅವರನ್ನು ರಾಷ್ಟ್ರಾಧ್ಯಕ್ಷರನ್ನಾಗಿ ಮಾಡಿದ್ದಕ್ಕಾಗಿ ಸೋನಿಯಾ ಗಾಂಧಿಯವರಿಗೆ ಧನ್ಯವಾದ ತಿಳಿಸುವುದಾಗಿ ಅವರು ಹೇಳಿದರು.

ಖರ್ಗೆಯವರ ಮೇಲೆ ಕಾರ್ಯಕರ್ತರಿಗೆ ನಂಬಿಕೆ ಇದೆ
ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ತಮ್ಮ ಸರ್ವಸ್ವ ತ್ಯಾಗ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡಿದ್ದಾರೆ. ದೇಶದ ಮೂಲೆ ಮೂಲೆಯ ಕಾರ್ಯಕರ್ತರಿಗೆ ಖರ್ಗೆ ಅವರ ಮೇಲೆ ನಂಬಿಕೆ ಇದೆ. ಈ ವೇದಿಕೆ ಮೂಲಕ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ತಿಳಿಸುತ್ತೇನೆ.
ಕಾಂಗ್ರೆಸ್‌ನಿಂದ ನಡೆಯುತ್ತಿರುವ ಇಂದಿನ ಸಮಾವೇಶ ಇದೊಂದು ಇತಿಹಾಸ ರಚಿಸುವ ದಿನವಾಗಿದೆ. ರಾಜ್ಯದ ಜನರು ದಶಕಗಳಿಂದ ಖರ್ಗೆ ಅವರನ್ನು ಬೆಳೆಸಿಕೊಂಡು ಬಂದಿದ್ದಾರೆ. ಅವರೊಬ್ಬ ಉತ್ತಮ ರಾಜಕಾರಣಿ ಆಗಿದ್ದು, ಉನ್ನತ ಹುದ್ದೆಗೇರಿದ್ದರಿಂದ ಇದು ಪಕ್ಷಕ್ಕೆ ಪೂರಕವಾಗಿರಲಿದೆ ಎಂದರು.

ಮುಂದಿನ ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರ ಬಿಜೆಪಿಯನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದು ಹೇಳಿದರು.












Click it and Unblock the Notifications