Contractor Santosh Patil Suicide : ಸಂತೋಷ್ ಪಾಟೀಲ್ ಆತ್ಮಹತ್ಯೆ: ಸಚಿವ KS ಈಶ್ವರಪ್ಪ ತಲೆದಂಡ ಬಹುತೇಕ ಖಚಿತ!
ಬೆಂಗಳೂರು, ಏ.12- 'ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಈಗ ಸಚಿವ ಈಶ್ವರಪ್ಪ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಶೀಘ್ರದಲ್ಲಿಯೇ ಸಚಿವ ಕೆ.ಎಸ್. ಈಶ್ವರಪ್ಪ ತಲೆದಂಡ ಆಗುವುದು ಬಹುತೇಕ ಖಚಿತವಾಗಿದೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲಿಯೇ ಪ್ರತಿಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಈಶ್ವರಪ್ಪ ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು ಮತ್ತು ಅವರನ್ನು ಸಂಪುಟದಿಂದ ಕಿತ್ತೆಸೆಯಬೇಕು ಹಾಗೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.
ಚುನಾವಣಾ ವರ್ಷವಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತನೂ ಅಹ ಆಗಿದ್ದರಿಂದ ಇದು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಒಂದು ವೇಳೆ ಈಶ್ವರಪ್ಪ ಸಚಿವ ಸ್ಥಾನದಲ್ಲಿ ಮುಂದುವರೆದರೆ ಪ್ರತಿಪಕ್ಷಗಳು ಇದನ್ನು ಚುನಾವಣಾ ಅಸ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ ವಿವಾದವನ್ನು ತಣ್ಣಗಾಗಿಸಲು ಅವರಿಂದ ರಾಜೀನಾಮೆ ಪಡೆದು ವಿರೋಧ ಪಕ್ಷದವರಿಗೆ ಅಸ ಸಿಗದಂತೆ ಬಿಜೆಪಿ ತಲೆದಂಡ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯದಿದ್ದರೆ ಖುದ್ದಾಗಿ ಬೊಮ್ಮಾಯಿ ಸರ್ಕಾರಕ್ಕೆ ಸಾರ್ವಜನಿಕ ವಲಯದಲ್ಲಿ ತಪ್ಪು ಅಭಿಪ್ರಾಯ ಮೂಡಲಿದೆ. ನೈತಿಕವಾಗಿ ಪ್ರತಿಪಕ್ಷಗಳ ವಿರುದ್ಧ ಮಾತನಾಡಲು ಬಿಜೆಪಿಗೆ ಅಸೆ ಇಲ್ಲದಂತಾಗುತ್ತದೆ. ಇದೆಲ್ಲವನ್ನು ಗಮನಿಸಿ ಬೀಸುವ ದೊಣ್ಣೆಯಿಂದ ಪಾರಾಗಲು ರಾಜೀನಾಮೆ ಪಡೆಯುವುದು ಏಕೈಕ ಮಾರ್ಗವಾಗಿದೆ.
ರಾಜೀನಾಮೆಯಿಂದ ತಪ್ಪಿಸಿಕೊಂಡಿದ್ದ ಈಶ್ವರಪ್ಪ:
ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸಲಾಗುವುದು ಎಂದು ರಾಷ್ಟ್ರಧ್ವಜ ವಿಷಯದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದ್ದ ಈಶ್ವರಪ್ಪ ಅವರ ರಾಜೀನಾಮೆಗೆ ಈ ಹಿಂದೆಯೇ ಒತ್ತಡ ತೀವ್ರವಾಗಿತ್ತು. ಆದರೆ, ಬೀಸುವ ದೊಣ್ಣೆಯಿಂದ ಪಾರಾಗಿದ್ದರು. ಈಗ ಆತ್ಮಹತ್ಯೆ ಪ್ರಕರಣದ ಪ್ರಕರಣದ ಸತ್ಯಸತ್ಯತೆ ಬಹಿರಂಗವಾಗುವವರೆಗೂ ಮಂತ್ರಿ ಸ್ಥಾನದಲ್ಲಿ ಮುಂದುವರೆಯುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ರಾಜೀನಾಮೆ ಕೊಡುವಂತೆ ವರಿಷ್ಠರು ಸೂಚನೆ ನೀಡುವ ಸಾಧ್ಯತೆಯಿದೆ.
ಕೆ.ಜೆ. ಜಾರ್ಜ್ ರಾಜೀನಾಮೆ ನೀಡಿದ್ದರು:
ಈ ಹಿಂದೆ 2017ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ತನ್ನ ಆತ್ಮಹತ್ಯೆಗೆ ಅವರೇ ಕಾರಣ ಎಂದು ಡೆತ್ ಬರೆದಿದ್ದರು.
ಅಂದು ಪ್ರತಿಪಕ್ಷದ ಸ್ಥಾನದಲ್ಲಿ ಕೂತಿದ್ದ ಬಿಜೆಪಿ, ಜಾರ್ಜ್ ತಲೆದಂಡವಾಗಲೇಬೇಕೆಂದು ಪಟ್ಟು ಹಿಡಿದಿದ್ದರು. ವಿಧಿಯಿಲ್ಲದೆ ಅಂದು ಅವರ ರಾಜೀನಾಮೆ ಪಡೆಯಬೇಕಾಯಿತು. ಈಗ ಇದೇ ಅಸವನ್ನು ಕಾಂಗ್ರೆಸ್ ಬಿಜೆಪಿ ವಿರುದ್ಧ ತಿರುಗಿಸಲು ಮುಂದಾಗಿದೆ.
ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯನವರು ವಲ್ಲದ ಮನಸ್ಸಿನಿಂದ ರಾಜೀನಾಮೆ ಪಡೆದು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದರು. ಕೊನೆಗೆ ಇದರಲ್ಲಿ ಜಾರ್ಜ್ ಕೈವಾಡವಿಲ್ಲ ಎಂಬುದು ದೃಢಪಟ್ಟ ನಂತರ ಮರಳಿ ಜಾರ್ಜ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಯಿತು.
ಈಗ ಬೊಮ್ಮಾಯಿ ಕೂಡ ಈಶ್ವರಪ್ಪನವರಿಂದ ರಾಜೀನಾಮೆ ಪಡೆಯದೆ ಬೇರೆ ದಾರಿಯಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಮೇಲೆ ಮುಗಿಬೀಳುವುದನ್ನು ತಪ್ಪಿಸಿಕೊಳ್ಳಲು ಯಾವುದೇ ಕ್ಷಣದಲ್ಲೂ ಅವರು ರಾಜೀನಾಮೆ ಪಡೆಯಬಹುದು.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications