Industry: ಕರ್ನಾಟಕದಲ್ಲಿ ವೈಮಾನಿಕ ಬಿಡಿಭಾಗಗಳ ಕಂಪನಿ 'ಸನ್ಸೇರಾ'ದಿಂದ ₹2,100 ಕೋಟಿ ಹೂಡಿಕೆ
ಬೆಂಗಳೂರು, ಜುಲೈ 31: ಕರ್ನಾಟಕದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹರಿದು ಬರುತ್ತಿದೆ. ಇದಕ್ಕೆ ಪೂರಕವಾಗಿ ವಾಹನಗಳ ಮತ್ತು ವೈಮಾನಿಕ ಬಿಡಿಭಾಗಗಳನ್ನು ತಯಾರಿಸುವ ಸನ್ಸೇರಾ ಕಂಪನಿಯು ರಾಜ್ಯದಲ್ಲಿ ಭಾರೀ ಬಂಡವಾಳ ಹೂಡಿಕೆಗೆ ಮುಂದಾಗಿದೆ. ಅದಿಕೃತ ಒಪ್ಪಂದಕ್ಕೆ ಸಹಿ ಸಹ ಹಾಕಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದರು.
ಕರ್ನಾಟಕದಲ್ಲಿ ವಾಹನಗಳ ಮತ್ತು ವೈಮಾನಿಕ ಬಿಡಿಭಾಗಗಳನ್ನು ತಯಾರಿಸುವ ಸನ್ಸೇರಾ ಕಂಪನಿ ₹2,100 ಕೋಟಿ ಹೂಡಿಕೆ ಮಾಡಲು ಒಪ್ಪಿಕೊಂಡಿದೆ. ಈ ಸಂಬಂಧ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ಸಮ್ಮುಖದಲ್ಲಿ ಬುಧವಾರ ಒಡಂಬಡಿಕೆಗೆ ಅಂಕಿತ ಹಾಕಲಾಯಿತು.

ಬೆಂಗಳೂರಿನ ಖನಿಜ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಮತ್ತು ಸೆನ್ಸೇರಾ ಕಂಪನಿಯ ಸಿಇಒ ಶೇಖರ್ ವಾಸನ್ ಒಡಂಬಡಿಕೆಗೆ ಸಹಿ ಹಾಕಿದರು. ಈ ಮೂಲಕ ಬೃಹತ್ ಉದ್ಯಮವೊಂದು ರಾಜ್ಯದಲ್ಲಿ ತಲೆ ಎತ್ತುವುದು ಖಚಿತವಾಯಿತು.
ರಾಜ್ಯದಲ್ಲಿ 3,500 ಉದ್ಯೋಗಗಳು ಸೃಷ್ಟಿ
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯು ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಈ ಹೂಡಿಕೆ ಮಾಡಲಿದೆ. ಇದರಿಂದ 3,500 ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದರು.
ಕಂಪನಿಯು ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 55 ಎಕರೆ ಪ್ರದೇಶದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ಇದರಿಂದ ರಾಜ್ಯದ ರಫ್ತು ವಹಿವಾಟಿಗೂ ಅನುಕೂಲ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.
ಕಂಪನಿಯು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತರಬೇತಿ ಕೇಂದ್ರ ಆರಂಭಿಸಲಿದೆ. ಇದರಿಂದ ಸ್ಥಳೀಯರ ಕೌಶಲ ವೃದ್ಧಿಯಾಗಲಿದೆ. ಕಂಪನಿಯು ದೇಶದಲ್ಲಿ 16 ತಯಾರಿಕಾ ಘಟಕಗಳನ್ನು ಹೊಂದಿದೆ. ಅವುಗಳ ಪೈಕಿ 12 ಘಟಕಗಳು ರಾಜ್ಯದಲ್ಲೇ ಇವೆ ಎಂದು ಹೇಳಿದರು.

ಓಟಿಸ್ ಕಂಪನಿಯಿಂದ ₹135 ಕೋಟಿ ಹೂಡಿಕೆ
ಎಲಿವೇಟರುಗಳನ್ನು ತಯಾರಿಸುವ ಓಟಿಸ್ ಕಂಪನಿ ಕೂಡ ರಾಜ್ಯದಲ್ಲಿ 135 ಕೋಟಿ ರೂಪಾಯಿ ಹೂಡಲು ಒಲವು ವ್ಯಕ್ತಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಂಬಂಧವಾಗಿ ಕಂಪನಿಯ ಹಿರಿಯ ನಿರ್ದೇಶಕ ರವಿಶಂಕರ್ ನೇತೃತ್ವದ ತಂಡದೊಂದಿಗೆ ಮಾತುಕತೆ ನಡೆಸಿದರು.
ಇದಕ್ಕಾಗಿ ಕಂಪನಿಯು ಹಾರೋಹಳ್ಳಿಯಲ್ಲಿ 12 ಎಕರೆ ಭೂಮಿಯನ್ನು ಕೇಳಿದ್ದು, ಇದನ್ನು ಒದಗಿಸಲಾಗುವುದು. ಇದರಿಂದ 200ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದರು.
ಒಡಂಬಡಿಕೆ ಕಾರ್ಯಕ್ರಮದಲ್ಲಿ ವಾಣಿಜ್ಯ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್. ಆರ್. ಸಿಂಘ್ವಿ, ಕಾರ್ಯದರ್ಶಿ ರಾಜೇಶ್ ಮೋದಿ ಪಾಲ್ಗೊಂಡಿದ್ದರು.












Click it and Unblock the Notifications