ದಲಿತರಿಗೆ 6x3 ಅಡಿ ನಿವೇಶನ ನೀಡಿ ಸಾಕು
ಬೆಂಗಳೂರು, ಫೆ.26: ದಲಿತರ ಕಟ್ಟಾಳು ಡಿಎಸ್ ವೀರಯ್ಯ ಮತ್ತೊಮ್ಮೆ ದಲಿತರ ಪರ ದನಿಯೆತ್ತಿದ್ದಾರೆ. ನಿನ್ನೆ ಮೇಲ್ಮನೆಯಲ್ಲಿ ದಲಿತರ ಬದುಕು ಬವಣೆಯ ಬಗ್ಗೆ ಗಮನ ಸೆಳೆದ ವೀರಯ್ಯ ಅವರು ಸರಕಾರವು ಶೋಷಿತ ಮತ್ತು ನೊಂದ ದಲಿತ ಜನರಿಗೆ ಚಿಕ್ಕ ಚಿಕ್ಕ ನಿವೇಶನ ನೀಡುವುದಾಗಿ ಹೇಳುತ್ತದೆ. ಆದರೆ ಅವು ಬಳಕೆಗೆ ಬರುವಂತಹುದಲ್ಲ. ಅದರ ಬದಲು ಕೇವಲ 6 x 3 ಅಡಿ ಜಾಗ ನೀಡಿದರೆ ಸಾಕು. ಅಲ್ಲೇ ಹುಟ್ಟಿ, ಅಲ್ಲೇ ಸಾಯಲು ಅನುಕೂಲವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಸರಕಾರ ನಿವೇಶನ ನೀಡುವಂತಿದ್ದರೆ ಕನಿಷ್ಠ 30x40 ಅಳತೆ ನಿವೇಶನ ನೀಡಬೇಕು. ಅದಿಲ್ಲದಿದ್ದರೆ ಸತ್ತಾಗ ಅವರನ್ನು ಮಣ್ಣು ಮಾಡಲು ಬೇಕಾಗುವಷ್ಟು ಚಿಕ್ಕ ಜಾಗ ನೀಡಿದರೆ ಸಾಕು ಎಂದು ಹಿರಿಯ ದಲಿತ ಹೋರಾಟಗಾರ ಡಿಎಸ್ ವೀರಯ್ಯ ಸರಕಾರವನ್ನು ಚುಚ್ಚಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಶಿಷ್ಟರಿಗೆ ನೀಡಿರುವ ಸೌಲಭ್ಯವನ್ನು ಲೆಕ್ಕಾಚಾರ ಹಾಕಿ ನೋಡಿದರೆ ಪ್ರತಿಯೊಬ್ಬ ದಲಿತನಿಗೂ ತಲಾ 25 ಲಕ್ಷ ರೂ ನೀಡುವಂತಿದೆ. ಆದರೆ ಅದು ನಿಜವೇ ಆಗಿದ್ದರೆ ದಲಿತರ ಸ್ಥಿತಿ ಇನ್ನೂ ದುಸ್ಥಿತಿಯಲ್ಲಿಯೇ ಏಕಿದೆ? ಸರಕಾರಗಳು ಪರಿಶಿಷ್ಟರಿಗೆ ಕೇವಲ ಕುರಿ, ಕೋಳಿ, ಹಂದಿಗಳನ್ನು ಸಾಕಲು ನೆರವು ನೀಡಿತ್ತೇ ಹೊರತು, ಅವರಿಗೆ ಶಿಕ್ಷಣ ಸಿಗಲು ನೆರವು, ಸೌಲಭ್ಯಗಳನ್ನು ಸರಿಯಾಗಿ ಕಲ್ಪಿಸುತ್ತಿಲ್ಲ ಎಂದು ವೀರಯ್ಯ ದಲಿತರ ಪರ ತಮ್ಮ ನೋವನ್ನು ತೋಡಿಕೊಂಡರು.
ಹಂದಿಗೂಡಿನಂತಿರುವ ಪರಿಶಿಷ್ಟರ ಹಾಸ್ಟೆಲುಗಳು, ಇನ್ನೂ ಮಲ ಹೊರುತ್ತಿರುವ ಕಾರ್ಮಿಕರು, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುತ್ತಿರುವ ಬಗ್ಗೆ ಮನಮುಟ್ಟುವಂತೆ ಸದನಕ್ಕೆ ಅವರು ವಿವರಿಸಿದರು. ಹೆಚ್ಚಾಗಿ ಕವನ ವಾಚನದ ಮೂಲಕವೇ ದಲಿತರ ನೋವನ್ನು ಅವರು ಬಿಡಿಸಿಟ್ಟರು.












Click it and Unblock the Notifications