Sadananda Gowda: ಸದಾನಂದ ಗೌಡರ ರಾಜಕೀಯ ನಿವೃತ್ತಿ ಬಗ್ಗೆ ಬಿಎಸ್ ಯಡಿಯೂರಪ್ಪ ಮಹತ್ವದ ಹೇಳಿಕೆ
ಕರ್ನಾಟಕ ಬಿಜೆಪಿ ಪಾಳಯದಲ್ಲಿ ಸದಾನಂದಗೌಡರ ಚುನಾವಣಾ ರಾಜಕೀಯ ನಿವೃತ್ತಿ ಸಾಕಷ್ಟು ಸದ್ದು ಮಾಡುತ್ತಿದೆ. ಹಿರಿಯ ನಾಯಕರನ್ನು ಬಿಜೆಪಿ ಹೈಕಮಾಂಡ್ ಮೂಲೆಗುಂಪು ಮಾಡುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ಮಾಡುತ್ತಿದೆ.
ಸದಾನಂದಗೌಡರ ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಮಾಜಿ ಸಿಎಂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಅವರಿಗೆ ಪಕ್ಷದ ನಾಯಕತ್ವ ಸಲಹೆ ನೀಡಿದೆ ಎಂದು ಬಹಿರಂಗಪಡಿಸಿದ್ದಾರೆ.

ಹೈಕಮಾಂಡ್ ಸಲಹೆ ಮೇರೆಗೆ ಸದಾನಂದ ಗೌಡರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ ಎಂದು ಬಿಎಸ್‌ವೈ ಸ್ಪಷ್ಟನೆ ನೀಡಿದ್ದಾರೆ.
ರಾಜಕೀಯ ವಲಯದಲ್ಲಿ ಅಚ್ಚರಿ
ಮಾಜಿ ಕೇಂದ್ರ ಸಚಿವ ಮತ್ತು ಬೆಂಗಳೂರು ಉತ್ತರದ ಹಾಲಿ ಲೋಕಸಭಾ ಸದಸ್ಯರಾದ ಗೌಡ ಅವರು ಸಕ್ರಿಯ ಚುನಾವಣೆಯಿಂದ ನಿವೃತ್ತಿ ಹೊಂದುವುದಾಗಿ ಬುಧವಾರ ಹೇಳೀದ್ದರು. ಅವರ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಅಚ್ಚರಿಯನ್ನು ಮೂಡಿಸಿತ್ತು.
ಸದಾನಂದಗೌಡ ಅವರಿಗೆ ಬಿಜೆಪಿಯ ಕೇಂದ್ರ ನಾಯಕತ್ವದಿಂದ ಸೂಚನೆ ಸಿಕ್ಕಿದೆ, ಅವರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ, ಆದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಈ ಬಾರಿ ಟಿಕೆಟ್ ಸಿಗುವುದಿಲ್ಲ ಎನ್ನುವ ಸೂಚನೆ ನಂತರ ಸದಾನಂದ ಗೌಡರು ಈ ನಿರ್ಧಾರ ಮಾಡಿದ್ದಾರೋ ಅಥವಾ ಹೈಕಮಾಂಡ್ ನಿರ್ಲಕ್ಷ್ಯದಿಂದ ಬೇಸತ್ತು ನಿವೃತ್ತಿಯ ನಿರ್ಧಾರ ತೆಗೆದುಕೊಂಡರೋ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಎಸ್‌ವೈ, ''ಈ ಬಾರಿ ಚುನಾವಣೆಗೆ ಸ್ಪರ್ಧಿಸಬೇಡಿ ಎಂದು ಅವರಿಗೆ ಸದಾನಂದ ಗೌಡರಿಗೆ ನೇರವಾಗಿ ತಿಳಿಸಲಾಗಿದೆ. ಆದರೆ ಅವರಿಗೆ ಪಕ್ಷದಲ್ಲಿ ಇತರ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಪಕ್ಷದ ಕಡೆಯಿಂದ ಯಾವುದೇ ಲೋಪವಾಗಿಲ್ಲ" ಎಂದರು.
ಹಲವು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪುವ ನಿರೀಕ್ಷೆ
2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸದಾನಂದ ಗೌಡ ಸೇರಿದಂತೆ 13 ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ವದಂತಿಗಳು ಹರಡಿದ್ದವು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸದಾನಂದಗೌಡರು ಪಕ್ಷದ ನಾಯಕತ್ವವನ್ನು ಒತ್ತಾಯಿಸಿದ್ದರು. ಆದರೆ ಇದಕ್ಕೆ ಹೈಕಮಾಂಡ್ ಸರಿಯಾದ ಪ್ರತಿಕ್ರಿಯೆ ನೀಡದ ಕಾರಣ ಹತಾಶೆಯಿಂದ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ರಾಜ್ಯ ನಾಯಕರ ಜೊತೆ ಸಮಾಲೋಚನೆ ಮಾಡಿಲ್ಲ ಎಂದು ಸದಾನಂದ ಗೌಡರು ಬೇಸರ ವ್ಯಕ್ತಪಡಿಸಿದ್ದರು.
ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರ ನೇಮಕದಲ್ಲಿ ದೀರ್ಘಕಾಲದ ವಿಳಂಬದ ಬಗ್ಗೆ ಕೂಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಜುಲೈ 2021 ರಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು.












Click it and Unblock the Notifications