ಚುರುಕುಗೊಂಡ ಆಪರೇಷನ್ ಹಸ್ತ; ಸಿದ್ದರಾಮಯ್ಯ ಭೇಟಿಯಾದ ಎಸ್‌ಟಿ ಸೋಮಶೇಖರ್; ಏನೆಲ್ಲಾ ಚರ್ಚೆ ಆಯ್ತು?
ಬೆಂಗಳೂರು, ಆಗಸ್ಟ್ 21: ಲೋಕಸಭಾ ಚುನಾವಣಾ ತಯಾರಿ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಆಪರೇಷನ್' ವಾಕ್ಸಮರದ ಜೋರಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ವಾಕ್ಸಮರದ ನಡುವೆ ಮಾಜಿ ಸಚಿವ, ಬಿಜೆಪಿ ಶಾಸಕ ಸೋಮಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ.
ಹೌದು, ಬಿಜೆಪಿ ಕೆಲವು ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹದ ನಡುವೆ, ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಎಸ್‌ಟಿ ಸೋಮಶೇಖರ್ ಭಾನುವಾರ ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ. ಬೆಂಗಳೂರು ನಗರದ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಬೆಳವಣಿಗೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಯನ್ನು ಭೇಟಿ ಮಾಡಿರುವುದಾಗಿ ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.

2023 ರ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದು, ಕೆಲ ದಿನಗಳ ಹಿಂದೆ ಎಸ್ ಟಿ ಸೋಮಶೇಖರ್ ತಮ್ಮ ಕ್ಷೇತ್ರದ ಕೆಲವು ಬಿಜೆಪಿ ನಾಯಕರು ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದರು.
ಕಳೆದೆರಡು ದಿನಗಳ ಹಿಂದೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕರೆದಿದ್ದ ಸಭೆಗೂ ಸೋಮಶೇಖರ್ ಗೈರಾಗಿದ್ದರು ಮತ್ತು ಸೋಮಶೇಖರ್ ಅವರನ್ನು ಸಮಾಧಾನಪಡಿಸಲು ಬಿಜೆಪಿ ಭಾನುವಾರ ಬಿಜೆಪಿ ನಾಯಕರಾದ ಧನಂಜಯ ಮತ್ತು ಮಾರೇಗೌಡರನ್ನು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.
ಕಳೆದೆರಡು ದಿನಗಳ ಹಿಂದೆ ಯಶವಂತಪುರ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸೋಮಶೇಖರ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶ್ಲಾಘಿಸಿ, ಅವರ 'ಮಾರ್ಗದರ್ಶಿ' ಎಂದು ಬಣ್ಣಿಸಿದರು. ಇನ್ನೂ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಅವರು, ಕಾಂಗ್ರೆಸ್‌ನ ಕಾರ್ಯಾಚರಣೆಯನ್ನು ಎದುರಿಸುವ ತಂತ್ರಗಳ ಬಗ್ಗೆ ತಮ್ಮ ಪಕ್ಷಕ್ಕೂ ಚೆನ್ನಾಗಿ ತಿಳಿದಿದೆ ಮತ್ತು ತಮ್ಮ ಪಕ್ಷದ ಯಾವುದೇ ಶಾಸಕರು ನಿಷ್ಠೆಯನ್ನು ಬದಲಾಯಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಸ್ ಟಿ ಸೋಮಶೇಖರ್, ಕ್ಷೇತ್ರದ ಸಮಸ್ಯೆ ವಿಚಾರವಾಗಿ ಮಾತನಾಡಲು ಸಿಎಂ ಅವರಿಗೆ ಒಂದು ವಾರದಿಂದ ಅಪಾಯಿಂಟ್ಮೆಂಟ್ ಕೇಳಿದ್ದೆ. ಇವತ್ತು ಬರುವುದಕ್ಕೆ ಹೇಳಿದ್ದರು. ಅದರಂತೆ ಇಂದು ಬಂದು ಭೇಟಿಯಾಗಿದ್ದೇನೆ. ಮುಖ್ಯಮಂತ್ರಿಗಳು ನನಗೇನು ಹೇಳಿಲ್ಲ. ನನ್ನ ಕ್ಷೇತ್ರಕ್ಕೆ ಬಂದಾಗಲೇ ಒಂದಷ್ಟು ಸಮಸ್ಯೆ ಬಗ್ಗೆ ಹೇಳಿದ್ದರು. ತಮ್ಮ ಆಫೀಸಿನ ಜೊತೆ ಸಂಪರ್ಕದಲ್ಲಿರುವುದಕ್ಕೆ ಹೇಳಿದ್ರು. ಬಂದು ಪತ್ರ ಕೊಟ್ಟಿದ್ದೇನೆ ಎಂದು ಹೇಳಿದರು.
ತಮ್ಮ ಬೆಂಬಲಿಗರು ಬಿಜೆಪಿ ಪಕ್ಷವನ್ನು ಬಿಡುವ ವಿಚಾರವಾಗಿ ಮಾತನಾಡಿ, ಬೆಂಬಲಿಗರು ಯಾರು ಕಾಂಗ್ರೆಸ್ಗೆ ಹೋಗುತ್ತಿಲ್ಲ. ಕೆಲ ಕಾರ್ಪೋರೇಟರ್ ಗಳು ಹೋಗುತ್ತಿದ್ದಾರೆ. ಜೆಡಿಎಸ್ ನವರು ಹೋಗುತ್ತಿದ್ದಾರೆ. ಯಾರ್ಯಾರಿಗೆ ಕಾಂಗ್ರೆಸ್ ಸೇರುವುದಕ್ಕೆ ಆಸೆ ಇದೆಯೋ ಅವರು ಹೋಗುತ್ತಾರೆ. ನನಗೆ ಕ್ಷೇತ್ರದ ವಿಚಾರವಾಗಿ ಅಸಮಧಾನ ಇದೆ ಎಂದು ತಿಳಿಸಿದರು.












Click it and Unblock the Notifications