ಅಳ್ನಾವರ-ಅಂಬೇವಾಡಿ ನಡುವೆ ರೈಲು ಸಂಚಾರ ಆರಂಭಿಸಲು ಮನವಿ
ಉತ್ತರ ಕನ್ನಡ, ಜೂನ್ 25 : ಅಳ್ನಾವರ-ಅಂಬೇವಾಡಿ ನಡುವೆ ಶೀಘ್ರದಲ್ಲಿಯೇ ರೈಲು ಸಂಚಾರ ಆರಂಭಿಸಬೇಕು ಎಂದು ಸಚಿವ ಆರ್.ವಿ.ದೇಶಪಾಂಡೆ ಅವರು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಮನವಿ ಮಾಡಿದರು.
ಕರ್ನಾಟಕದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಮಂಗಳವಾರ ನವದೆಹಲಿಯಲ್ಲಿ ಸುರೇಶ್ ಅಂಗಡಿ ಅವರನ್ನು ಭೇಟಿ ಮಾಡಿದರು. ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಸಚಿವರ ಜೊತೆ ಚರ್ಚೆ ನಡೆಸಿದರು.
ಅಳ್ನಾವರ-ಅಂಬೇವಾಡಿ ನಡುವೆ ರೈಲು ಸಂಚಾರವನ್ನು ಆರಂಭಿಸಬೇಕು ಎಂದು ಮನವಿ ಸಲ್ಲಿಸಿದರು. 1995ರಲ್ಲಿ ಗೇಜ್ ಪರಿವರ್ತನೆ ಮಾಡಲು ಅಳ್ನಾವರ-ಅಂಬೇವಾಡಿ ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಇನ್ನೂ ರೈಲು ಸಂಚಾರ ಆರಂಭವಾಗಿಲ್ಲ.

ಗೇಜ್ ಪರಿವರ್ತನೆ ಕಾರ್ಯ ಭಾಗಶಃ ಪೂರ್ಣಗೊಂಡಿದೆ. ರೈಲ್ವೆ ನಿಲ್ದಾಣಗಳ ನಿರ್ಮಾಣ ಕಾರ್ಯ ಅಂತಿಮವಾಗಿದೆ. ಆದ್ದರಿಂದ, ಅಳ್ನಾವರ-ಅಂಬೇವಾಡಿ ಮಾರ್ಗದಲ್ಲಿ ರೈಲು ಸಂಚಾರವನ್ನು ಆರಂಭಿಸುವಂತೆ ಮನವಿ ಸಲ್ಲಿಸಿದರು.
ಸುಮಾರು 27 ಕಿ.ಮೀ. ಉದ್ದದ ಅಳ್ನಾವರದಿಂದ ದಾಂಡೇಲಿಯ ಅಂಬೇವಾಡಿ ವರೆಗಿನ ರೈಲು ಹಳಿಯ ಗೇಜ್ ಪರಿವರ್ತನೆ ಮುಗಿದಿದೆ. ಅಂಬೇವಾಡಿಯಲ್ಲಿ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ.












Click it and Unblock the Notifications