ನಾಯಕತ್ವಕ್ಕಾಗಿ ಸಿದ್ದರಾಮಯ್ಯ, ಡಿಕೇಶಿ ಮಧ್ಯೆ ಪೈಪೋಟಿ!
ಬೆಂಗಳೂರು, ಜು. 23: ಕಾಂಗ್ರೆಸ್ ಪಕ್ಷದ #ಉತ್ತರಕೊಡಿಬಿಜೆಪಿ ಅಭಿಯಾನ ಟ್ರೆಂಡಿಂಗ್ ಆಗುತ್ತಿದ್ದಂತೆಯೆ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರೂ ಕೂಡ ಕಾಂಗ್ರೆಸ್ ಆರೋಪಕ್ಕೆ ಪ್ರತ್ಯುತ್ತರ ಕೊಡುತ್ತಿದ್ದಾರೆ. ಜಂಟಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿರುವ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಕೋವಿಡ್ ಸಮಯದಲ್ಲಿ ಸರ್ಕಾರ 4,167 ರೂಪಾಯಿಗಳ ಖರೀದಿ ಹಗರಣ ಮಾಡಿದೆ ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ವಿಧಾನಸೌಧದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ವಿಪಕ್ಷ ನಾಯಕರಾದ ಮೇಲೆ ಅವರಿಗೆ ಕೈಕಾಲು ಆಡುತ್ತಿಲ್ಲ. ಕೊರೊನಾವೈರಸ್ ಸಮಸ್ಯೆ ಇರುವಾಗ ವಿರೋಧ ಪಕ್ಷದ ನಾಯಕರು ಸರ್ಕಾರದ ಜೊತೆ ಕೈ ಜೋಡಿಸಬೇಕು. ಅದನ್ನು ಬಿಟ್ಟು ಸುಮ್ಮನೆ ರಾಜಕಾರಣ ಮಾಡುತ್ತಿದ್ದಾರೆ, ನಾಯಕತ್ವದ ಪೈಪೋಟಿಗಾಗಿ ಅವರೆಲ್ಲರೂ ಆರೋಪ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಅವರು ಬರೀ ರಾಜಕಾರಣ ಮಾಡುತ್ತಿದ್ದಾರೆ. ಮೊದಲು ಮೊದಲು ಕೊರೊನಾವೈರ್ ಓಡಿಸೋಣ, ಆಮೇಲೆ ರಾಜಕಾರಣ ಮಾಡೋಣ.

ಜನ ಸಾಯುತ್ತಿರುವಾಗ ಒಟ್ಟಿಗೆ ಕೆಲಸ ಮಾಡಬೇಕು. ಆಮೇಲೆ ರಾಜಕೀಯ ಮಾಡಲು ಸಮಯವಿದೆ. ಹೀಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಸರ್ಕಾರ ದ ಜೊತೆ ಕೈ ಜೋಡಿಸಬೇಕು ಎಂದು ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications