Government Employee: ಸರ್ಕಾರಿ ನೌಕರರ ಬಡ್ತಿ ನಿಯಮಗಳು
ಬೆಂಗಳೂರು, ಜುಲೈ 28: ಕರ್ನಾಟಕದ ಸರ್ಕಾರಿ ನೌಕರರು ಕಾಲ ಕಾಲಕ್ಕೆ ಬಡ್ತಿ ಪಡೆಯುತ್ತಾರೆ. ವೇತನ ಪರಿಷ್ಕರಣೆ ಆಗುತ್ತದೆ. ಸರ್ಕಾರಿ ನೌಕರರ ಬಡ್ತಿಗೆ ಇರುವ ನಿಯಮಗಳು ಏನು?. ಈ ಕುರಿತು ವಿಧಾನಸಭೆಯಲ್ಲಿ ಪ್ರಶ್ನೆ ಮಾಡಲಾಗಿದೆ.
ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಬಾಲಕೃಷ್ಣ ಸಿ. ಎನ್. (ಶ್ರವಣಬೆಳಗೊಳ) ಶಾಸಕರು ಕೇಳಿದ್ದ ಪ್ರಶ್ನೆಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ನೌಕರರ ಬಡ್ತಿ ನಿಯಮಗಳ ಕುರಿತು ವಿವರಣೆ ನೀಡಿದ್ದಾರೆ.

ಶಾಸಕರು ಸರ್ಕಾರಿ ನೌಕರರಿಗೆ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಪರಿಗಣಿಸಬೇಕಾದ ಮಾನದಂಡಗಳೇನು? (ವಿವರ ನೀಡುವುದು) ಎಂದು ಪ್ರಶ್ನಿಸಿದ್ದರು. ಉತ್ತರದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಜೇಷ್ಠತೆ ಮತ್ತು ಅರ್ಹತೆ ಆಧಾರದ ಮೇಲೆ ಮುಂಬಡ್ತಿ ನೀಡಲಾಗುತ್ತದೆ.
ಈ ರೀತಿ ಮುಂಬಡ್ತಿ ನೀಡುವಾಗ ಪರಿಗಣಿಸಬೇಕಾದ ಮಾನದಂಡಗಳ ಬಗ್ಗೆ, ದಿನಾಂಕ 08/10/1985ರ ಸರ್ಕಾರ ಅಧಿಕೃತ ಜ್ಞಾಪನ ಸಂಖ್ಯೆ ಡಿಪಿಎಆರ್ 5 ಎಸ್‌ಆರ್‌ಸಿ 84, ದಿನಾಂಕ 14/07/1993ರ ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್ 22 ಎಸ್‌ಆರ್ ಆರ್ 93 ಮತ್ತು ದಿನಾಂಕ 14/07/1999ರ ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್ 23 ಎಸ್‌ಎಸ್‌ಆ 98ರಲ್ಲಿ ಮಾರ್ಗಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಪದೋನ್ನತಿ ವಿವರಗಳು: ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ಮಾಡಲಾಗುವುದೆಂದು ಭಾವಿಸಿ ಖಾಲಿ ಇರುವ ಹುದ್ದೆಗಳಿಗೆ ಪದೋನ್ನತಿ ನೀಡಲು, ನಿರಾಕರಣೆ ಮಾಡಲು ಅವಕಾಶವಿದೆಯೇ? ಎಂದು ಪ್ರಶ್ನಿಸಲಾಗಿತ್ತು. ಇಲ್ಲ ಎಂದು ಸರ್ಕಾರ ಉತ್ತರದಲ್ಲಿ ತಿಳಿಸಿದೆ. ಅವಕಾಶವಿದ್ದಲ್ಲಿ, ಸರ್ಕಾರದ ಆದೇಶದ ಪ್ರತಿ ನೀಡುವುದು ಎಂದು ಕೇಳಲಾಗಿತ್ತು. ಉದ್ಘವಿಸುವುದಿಲ್ಲ ಎಂದು ಉತ್ತರಿಸಲಾಗಿದೆ.
ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಚಾಲ್ತಿ ಇರುವ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪಾಲಿಸಬೇಕೆ? ಅಥವ ಪರಿಷ್ಕರಣೆ ಮಾಡಲು ಉದ್ದೇಶಿಸಲಾಗಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪಾಲಿಸಬೇಕೆ (ಸಂಪೂರ್ಣ ವಿವರ ನೀಡುವುದು) ಎಂದು ಕೇಳಲಾಗಿತ್ತು.
ಉತ್ತರದಲ್ಲಿ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪಾಲಿಸಿ, ಮುಂಬಡ್ತಿ ನೀಡಬೇಕಾಗುತ್ತದೆ. ಪರಿಷ್ಕರಣೆ ಮಾಡಲು ಉದ್ದೇಶಿಸಲಾಗಿರುವ ವೃಂದ ಮತ್ತು ನೇಮಕಾತಿ ನಿಯಮಗಳು ಅಂತಿಮಗೊಂಡು ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರುತ್ತವೆ ಎಂದು ತಿಳಿಸಿದೆ.
2021ರಲ್ಲಿ ಕರ್ನಾಟಕ ಸರ್ಕಾರ ವಿವಿಧ ಇಲಾಖೆಗಳ ಹುದ್ದೆಗಳನ್ನು ಭರ್ತಿ ಮಾಡುವಾಗ ಖಾಲಿ ಸ್ಥಾನ ಆಧಾರಿತ ವರ್ಗೀಕರಣದ ಬದಲು ಮಂಜೂರಾದ ಒಟ್ಟು ಹುದ್ದೆಗಳ ಆಧಾರಿತ ವರ್ಗೀಕರಣ ವಿಧಾನ ಅನುಸರಿಸುವಂತೆ ಹೇಳಿತ್ತು. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು.
ಇದರಿಂದಾಗಿ ಪ್ರತಿ ಇಲಾಖೆಯಲ್ಲಿನ ಶೇ 25ರಿಂದ 30ರಷ್ಟು ನೌಕರರಿಗೆ ಮುಂಬಡ್ತಿ ಅವಕಾಶಗಳು ಸಿಗಲಿವೆ ಎಂದು ಅಂದಾಜಿಸಲಾಗಿತ್ತು. ಇದರಿಂದಾಗಿ ನೌಕರರಿಗೆ ಬಡ್ತಿ ನೀಡಲು ಇದ್ದ ಕಾನೂನಾತ್ಮಕ ತೊಡಗುಗಳು ಸಹ ನಿವಾರಣೆಯಾಗಿದ್ದವು.
ಹಾಲಿ ಇದ್ದ ನಿಯಮದ ಪ್ರಕಾರ ಯಾವುದೇ ಶ್ರೇಣಿಯ ನೌಕರ ಮುಂಬಡ್ತಿ ಪಡೆದರೆ, ಬಡ್ತಿ ಪಡೆದ ನೌಕರರು ಹೊಂದಿರುವ ಹುದ್ದೆ ಖಾಲಿಯಾಗುತ್ತದೆ. ಆ ಎಲ್ಲಾ ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡುವಂತಿರಲಿಲ್ಲ. ಶೇ 50ರಷ್ಟು ನೇರ ನೇಮಕಾತಿ, ಶೇ 50ರಷ್ಟು ಮುಂಬಡ್ತಿಯಿಂದ ಭರ್ತಿ ಮಾಡಲು ಅವಕಾಶವಿತ್ತು. ಆದರೆ ಹೊಸ ಆದೇಶದಿಂದ ಈ ಕಾನೂನು ತೊಡಕುಗಳು ನಿವಾರಣೆಗೊಂಡಿತ್ತು.












Click it and Unblock the Notifications