DV Sadananda Gowda: ಕಾಂಗ್ರೆಸ್ ನಿಂದ ಸದಾನಂದಗೌಡರಿಗೆ ಬಂತು ಆಫರ್: RSS ನಾಯಕರ ಸಂಧಾನ ಏನಾಯ್ತು?
ಬೆಂಗಳೂರು, ಮಾರ್ಚ್ 22: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪಾಠ ಕಲಿಸಲು ಮೈತ್ರಿಯಾಗಿದೆ. ಈಗಾಗಲೇ ಕರ್ನಾಟಕದಲ್ಲಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಕಮಲ ಪಾಳಯದಲ್ಲಿ ಬಂಡಾಯಕ್ಕೆ ಕಾರಣವಾಗಿದೆ.
ಹೌದು, ಬಿಜೆಪಿ ಹೈಕಮಾಂಡ್ ಹಲವು ಹಾಲಿ ಸಂಸದರಿಗೆ ಟಿಕೆಟ್ ನೀಡದೇ ಶಾಕ್ ನೀಡಿದ್ದು, ಬಿಜೆಪಿ ಹೈಕಮಾಂಡ್ ನಿರ್ಧಾರದ ಕುರಿತು ಹಲವು ಹಾಲಿ ಸಂಸದರು ಟಿಕೆಟ್ ಕೈ ತಪ್ಪಿದ ಹಿನ್ನಲೆ ಬಂಡಾಯದ ಭಾವುಟ ಹಾರಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಕಮಲ ಬಿಟ್ಟು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನುವ ಚರ್ಚೆ ಜೋರಾಗಿತ್ತು.

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಡಿ ವಿ ಸದಾನಂದಗೌಡರೇ ಕಾಂಗ್ರೆಸ್ ಸಂಪರ್ಕಿಸಿರುವುದು ನಿಜ ಎಂದು ಹೇಳಿದ್ರು. ಅಲ್ಲದೇ ಕಾಂಗ್ರೆಸ್ ನಾಯಕರು ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಆಫರ್ ಸಹ ನೀಡಿದೆ ಎನ್ನುವ ಮಾತು ರಾಜ್ಯ ಬಿಜೆಪಿಯಲ್ಲೂ ಚರ್ಚೆಯಾಗಿತ್ತು. ಈ ನಡುವೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ ಕಮಲ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಚರ್ಚೆಯ ನಡುವೆ ಅಲರ್ಟ್ ಆದ ಆರ್ ಎಸ್ ಎಸ್ ನಾಯಕರು ಮಾಜಿ ಸಿಎಂ ಸದಾನಂದಗೌಡರ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಡಿ.ವಿ ಸದಾನಂದಗೌಡರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿದ್ದರು. ಇನ್ನೂ ಕಾಂಗ್ರೆಸ್ ಸಂಪರ್ಕಿಸುತ್ತಿದ್ದಂತೆ ಆರ್ ಎಸ್ ಎಸ್ ನಾಯಕವು ಮಧ್ಯಸ್ಥಿಕೆ ವಹಿಸಿದ್ದು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ಸದಾನಂದಗೌಡ ಅವರನ್ನ ಸಮಾಧಾನಪಡಿಸಿದ್ದಾರೆ ಎಂದು ಹೇಳಲಾಗಿದೆ.
ಆರ್‌ಎಸ್‌ಎಸ್ ಪ್ರಮುಖರಲ್ಲಿ ದತ್ತಾತ್ರೇಯ ಹೊಸಬಾಳೆ, ಸಿ.ಆರ್. ಮುಕುಂದ್ ಅವರು ಡಿ.ವಿ ಸದಾನಂದಗೌಡರ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ. ನಿಮ್ಮ ಹಿತವನ್ನ ಕಾಪಾಡಲು ಬದ್ಧರಿದ್ದೇವೆ. ಪಕ್ಷ ತ್ಯಜಿಸುವಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಬಿಜೆಪಿಯಲ್ಲಿ ಇವತ್ತಿನ ವಾತಾವರಣ ಸರಿ ಹೋಗಬೇಕಿದೆ. ಹಿರಿಯ ನಾಯಕರನ್ನ ಕಡೆಗಣನೆ ಮಾಡೋದು ಸರಿಯಲ್ಲ ಎಂದು ಆರ್‌ಎಸ್‌ಎಸ್ ನಾಯಕರು ಹೇಳಿದ್ದಾರೆ ಎನ್ನಲಾಗಿದ್ದು, ಸದ್ಯ ಸದಾನಂದಗೌಡರ ಜೊತೆ ಆರ್ ಎಸ್ ಎಸ್ ನಾಯಕರು ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಬಿಜೆಪಿ ಶುದ್ಧಿಕರಣ ಮಾಡುವ ಕುರಿತು ಸದಾನಂದಗೌಡರು ಮಾತನಾಡಿದ್ದಾರೆ.












Click it and Unblock the Notifications