
ಜೈಲಿನಲ್ಲಿ ರಾಜಾತಿಥ್ಯ: ಶಶಿಕಲಾ, ಜೈಲು ಅಧಿಕಾರಿಗಳ ವಿರುದ್ಧ ಎಸಿಬಿ ಆರೋಪಪಟ್ಟಿ
ಬೆಂಗಳೂರು, ಫೆ.2: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ನೀಡಿರುವ ಆರೋಪ ಪ್ರಕರಣದ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಶಶಿಕಲಾ ನಟರಾಜನ್ ಮತ್ತು ಜೈಲು ಅಧಿಕಾರಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ.
ಹೈಕೋರ್ಟ್‌ನಲ್ಲಿ ಎಸಿಬಿ ಪರ ವಕೀಲರು ಈ ವಿಷಯ ತಿಳಿಸಿದ್ದಾರೆ. ಎಸಿಬಿ ಹೇಳಿಕೆಯನ್ನು ದಾಖಲಿಸಿಕೊಂಡ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ವಿಭಾಗೀಯ ಪೀಠ ಬುಧವಾರ ಮಧ್ಯಂತರ ಅರ್ಜಿಯನ್ನು ವಿಲೇ ಮಾಡಿತು.
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ಅವರಿಂದ ಲಂಚ ಪಡೆದು ವಿಶೇಷ ಆತಿಥ್ಯ ನೀಡಿದ ಆರೋಪದಲ್ಲಿ ಆರೋಪಿಗಳಾದ ಶಶಿಕಲಾ, ಇಳವರಸಿ ಜೈಲು ಅಧಿಕಾರಿಗಳಾದ ಕೃಷ್ಣ ಕುಮಾರ್, ಡಾ. ಅನಿತಾ. ಆರ್, ಬಿ.ಎಸ್.ಸುರೇಶ್, ಗಜರಾಜ ಮಕನೂರು ಮತ್ತಿತರ ವಿರುದ್ಧ 2022ರ ಜ.7ರಂದು ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹಾಗಾಗಿ ಶಶಿಕಲಾ ಮತ್ತಿತರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಎಸಿಬಿ ಪರ ವಕೀಲರು, ನ್ಯಾಯಾಲಯ ನಿರ್ದೇಶದನಂತೆ ತನಿಖೆಯನ್ನು ಪೂರ್ಣಗೊಳಿಸಿ ಸಂಬಂಧಿಸಿದ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಹಾಗಾಗಿ ಮಧ್ಯಂತರ ಅರ್ಜಿ ಪರಿಗಣಿಸಿ ವಿಲೇವಾರಿ ಮಾಡಬೇಕು ಎಂದು ಕೋರಿದರು.
ಸರಕಾರಿ ವಕೀಲರು, 2021ರ ಡಿ.30ರಂದು ಸರಕಾರ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ವಿಚಾರಣೆಗೆ ಪೂರ್ವಾನುಮತಿ ನೀಡಿದೆ. ಆರೋಪಪಟ್ಟಿ ಸಲ್ಲಿಸಲೂ ಸಹ ಅನುಮತಿ ನೀಡಿದೆ ಎಂದರು.
ಪ್ರಕರಣದ ಸಂಬಂಧ ಎಸಿಬಿ ತನಿಖೆಯ ವಿಳಂಬವಾಗುತ್ತಿದೆಯೆಂದು ಆಕ್ಷೇಪಿಸಿ ತಮಿಳುನಾಡಿನ ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತೆ ಕೆ.ಎಸ್. ಗೀತಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆನಂತರ ಕೋಲಾರದ ಎ.ಮುತ್ತು ಮಾಣಿಕ್ಯಂ ಕೂಡ ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿಯನ್ನು 2021ರ ಜುಲೈ 11ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಎರಡು ತಿಂಗಳಲ್ಲಿ ತನಿಖೆಯ ಅಂತಿಮ ವರದಿ ಸಲ್ಲಿಸುವಂತೆ ಎಸಿಬಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತ್ತು. ಇದೇ ವಿಚಾರವಾಗಿ ಇದೀಗ ಎರಡನೇ ಪಿಐಎಲ್ ಸಲ್ಲಿಕೆಯಾಗಿದೆ. ಇದು ಕಾನೂನಿನ ದುರ್ಬಳಕೆಯಾಗಿದ್ದು, ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿತು.
ಈ ಮಧ್ಯೆ ಎಸಿಬಿ ಪರ ವಕೀಲರು, ಪ್ರಕರಣದ ತನಿಖೆಯ ಅಂತಿಮ ವರದಿ ಸಲ್ಲಿಸಲು ಎಸಿಬಿಗೆ ಎರಡು ತಿಂಗಳ ಕಾಲಾವಶ ನೀಡಿ ಹೈಕೋರ್ಟ್ 2021ರ ಜುಲೈ 11ರಂದು ಆದೇಶಿಸಿತ್ತು. ಆ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಕಾಲಾವಕಾಶ ಕಲ್ಪಿಸಬೇಕು ಎಂದು ಕೋರಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿದೆ. ವರದಿ ಸಲ್ಲಿಸಲು ಪೂರ್ವಾನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪೂರ್ವಾನುಮತಿಗಾಗಿ ಕಾಯಲಾಗುತ್ತಿದೆ ಎಂದು ಹೇಳಿದ್ದರು.
ಪ್ರಕರಣದ ಹಿನ್ನೆಲೆ
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಆಪ್ತೆ ಶಶಿಕಲಾ ಹಾಗೂ ಅವರ ಸಂಬಂಧಿಸಿದಂತೆ ಇಳವರಸಿ ಅವರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿದ ಆರೋಪ ಕೇಳಿಬಂದಿತ್ತು. ಅದಕ್ಕಾಗಿ ಜೈಲು ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಹಣ ನೀಡಿದ ಭ್ರಷ್ಟಾಚಾರ ಆರೋಪವೂ ವ್ಯಕ್ತವಾಗಿತ್ತು. ಈ ಸಂಬಂಧ ಹಿರಿಯ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿ 396 ಪುಟಗಳ ಮಧ್ಯಂತರ ವರದಿ ಸಲ್ಲಿಸಲಾಗಿತ್ತು. ಆದರೆ, ಈವರೆಗೆ ಅಂತಿಮ ವರದಿ ಸಲ್ಲಿಸಿರಲಿಲ್ಲ. ಆ ಬಗ್ಗೆ ತನಿಖೆ ನಡೆಸುತ್ತಿದ್ದ ಎಸಿಬಿ ಕೂಡ ಆರೋಪಪಟ್ಟಿ ಸಲ್ಲಿಸಿರಲಿಲ್ಲ.