ಬೆಳಗಾವಿ ಅಧಿವೇಶನ; ಸಾಲು ಸಾಲು ಪ್ರತಿಭಟನೆಗೆ ಸಜ್ಜು: ಇಕ್ಕಟ್ಟಿನಲ್ಲಿ ಸರ್ಕಾರ
ಬೆಳಗಾವಿ, ಡಿಸೆಂಬರ್ 16: ಪಂಚಮಸಾಲಿ ಮೀಸಲಾತಿ ಹೋರಾಟದ ಕಿಚ್ಚು ಜೋರಾಗಿದ್ದು, ಲಾಠಚಾರ್ಜ್ ಕುರಿತು ಸ್ಪಷ್ಟನೆ ನೀಡದ ಸರ್ಕಾರ ಇಂದು ಇಕ್ಕಟ್ಟಿಗೆ ಸಿಲುಕಿದೆ. ಬೆಳಗಾವಿ ಅಧಿವೇಶನ ಅಂದ್ರೆನೇ ಹಾಗೇ ಸಿದ್ದರಾಮಯ್ಯ ಸರ್ಕಾರಕ್ಕೆ ಇಂದಿನಿಂದ ಅಗ್ನಿ ಪರೀಕ್ಷೆ ಕಾಲ. ಸರಣಿ ಹೋರಾಟಗಳ ಇತಿಹಾಸ ಹೊಂದಿರುವ ಬೆಳಗಾವಿಯ ಚಳಿಗಾಲ ಅಧಿವೇಶನಕ್ಕೆ ಈ ಬಾರಿಯೂ ಬಿಸಿ ಮುಟ್ಟಿದೆ.
ಪಂಚಮಸಾಲಿ ಮೀಸಲಾತಿ ಕಿಚ್ಚು ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲಾಗಿದ್ದು, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಈಗಾಗಲೇ ಬಿಜೆಪಿ ಕೈ ಜೋಡಿಸಿದ್ದು, ಇಂದು ಬೆಳಗಾವಿಯ ಅಧಿವೇಶನದಲ್ಲಿ ಸಿದ್ದರಾಮಯ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಲಿದೆ.

ಪಂಚಮಸಾಲಿ ಮೀಸಲಾತಿ ಹೋರಾಟ ಮಾತ್ರವಲ್ಲದೇ ಹತ್ತು ಹಲವು ಪ್ರತಿಭಟನೆಗೆ ಪ್ರತಿಭಟನಾಕಾರರು ಸಜ್ಜಾಗಿದ್ದಾರೆ. ಆನ್ ಲೈನ್ ಜೂಜು ನಿಷೇಧಿಸುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಸಾರ್ವಜನಿಕ ಹಿತದೃಷ್ಟಿಯ ಪ್ರತಿಭಟನೆಗೆ ಸಜ್ಜಾಗಿದೆ.
ಕೊಂಡಸಕೊಪ್ಪದ ಪ್ರತಿಭಟನಾ ಸ್ಥಳದಲ್ಲಿ ಭೋವಿ ಸಮಾಜದಿಂದ ವಿ ಎಸ್ ಉಗ್ರಪ್ಪ ವರದಿ ಶಿಫಾರಸ್ಸು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ಪ್ರತಿಭಟನೆಗೆ ಪ್ರತಿಭಟನಾಕಾರರು ಸಜ್ಜಾಗಿದ್ದಾರೆ. ಅಲ್ಲದೇ ಮಾದಿಗ ಮೀಸಲಾತಿ ಸಮಾಜದಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ಹಾಗೂ ಸಾವಿರಾರು ರೈತರಿಂದ ಕಬ್ಬಿನ ಬೆಳೆಗೆ ಪ್ರತಿ ಟನ್ನಿಗೆ ಆರು ಸಾವಿರ ನೀಡುವಂತೆ ಮತ್ತು ರೈತರಿಗೆ ಹನ್ನೆರಡು ಗಂಟೆಗಳ ಕಾಲ ಥ್ರಿಪೇಸ್ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಕೇಂದ್ರ ಸಮೀತಿಯಿಂದ 2022 ರಿಂದ 2024 ರ ಸಾಲಿನ ನಿವೃತ್ತ ನೌಕರರಿಗೆ ಏಳನೆ ವೇತನ ಆಯೋಗದ ನಿಯಮಗಳನ್ನು ಅಳವಡಿಸುವಂತೆ ಆಗ್ರಹಿಸಿ ಪ್ರತಿಭಟನೆ. ಪ್ರತ್ಯೇಕ ಕದಂಬ ಜಿಲ್ಲಾ ರಚನೆ ಹೋರಾಟಗಾರರಿಂದ ಉತ್ತರ ಕನ್ನಡ ಜಿಲ್ಲೆಯ ಏಳು ತಾಲೂಕು ವಿಭಜಿಸಿ ಹೊಸ ಜಿಲ್ಲೆ ರಚಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನೂ ಕರ್ನಾಟಕ ರಾಜ್ಯ ಪತ್ರಕರ್ತರ ಧ್ವನಿ ಸಂಘದಿಂದ ಪತ್ರಕರ್ತರಿಗೆ ಉಚಿತ ಬಸ್ ಪಾಸ್,ಪತ್ರಕರ್ತರ ರಕ್ಷಣಾ ಕಾಯ್ದೆಯ ತಿದ್ದುಪಡಿ ಮತ್ತು ಟೋಲ್ ಗೇಟ್ ಗಳಲ್ಲಿ ಉಚಿತ ಪ್ರವೇಶಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ.












Click it and Unblock the Notifications